
ಮಂಗಳೂರು: ಖಾಲಿ ಜಾಗದಲ್ಲಿ ಮಣ್ಣು ಹಾಕುವ ವಿಚಾರದ ಕುರಿತು ಸ್ಥಳೀಯರಿಗೆ ಹಾಗೂ ಪೊಲೀಸ್ ಸಿಬಂದಿ ಮಧ್ಯೆ ನಡೆದ ಹ್ಯೊಯ್ ಕೈಯಿಂದಾ ಪೊಲೀಸ್ ಸಿಬ್ಬಂದಿಯೋರ್ವರು ಗಾಯಗೊಂಡ ಘಟನೆಯೊಂದು ನಗರದ ಬಂಗ್ರ ಕೂಳೂರಿನಲ್ಲಿ ನಡೆದಿದೆ.
ಪಾಲಿಕೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ಮಣ್ಣು ಹಾಕುವ ವಿಚಾರದಲ್ಲಿ ಸ್ಥಳೀಯರಿಗೆ ಹಾಗೂ ಪೊಲೀಸ್ ಸಿಬಂದಿಯೊಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭ ಇವರ ನಡುವೆ ನಡೆದ ಘರ್ಷಣೆಯಿಂದ ಪೊಲೀಸ್ ಸಿಬ್ಬಂದಿಯ ಕೈಗೆ ಗಾಯವಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಗ್ರ ಕೂಳೂರಿನ ಖಾಲಿ ಜಾಗವೊಂದರಲ್ಲಿ ಪಾಲಿಕೆ ವತಿಯಿಂದ ಮಣ್ಣು ಹಾಕುತ್ತಿದ್ದಾಗ ವಿರೋಧಿಸಿದ ಸ್ಥಳೀಯರು ಇಲ್ಲಿ ಮಣ್ಣು ಹಾಕಬೇಡಿ; ಸಾಗುವ ಹಾದಿಗೆ ಸಮಸ್ಯೆಯಾಗುತ್ತದೆ ಎಂದು ಅಡ್ಡಿ ಪಡಿಸಿದ್ದರು.
ಈ ವೇಳೆ ಜನಪ್ರತಿನಿಧಿಯೊಬ್ಬರು ನಗರದ ಉರ್ವಾ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಕಾವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಂಗ್ರ ಕೂಳೂರಿಗೆ ಉರ್ವಾ ಪೊಲೀಸರು ಯಾಕೆ ಬರಬೇಕೆಂದು ಸ್ಥಳೀಯ ಅರುಣ್, ಕಿರಣ್ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಪ್ರಾರಂಭಿಸಿದ್ದರು.
ಅದನ್ನು ನೋಡಿದ ಪೊಲೀಸ್ ಸಿಬಂದಿ ಲೋಕೇಶ್ ಅವರು ವಿಡಿಯೋ ಯಾಕೆ ಮಾಡುವುದು ಎಂದು ಮೊಬೈಲ್ ತೆಗೆದುಕೊಳ್ಳಲು ಬಂದಾಗ ಅವರಿಬ್ಬರಲ್ಲಿ ಓರ್ವ ಪೊಲೀಸ್ ಸಿಬಂದಿಯ ಕೈಗೆ ಕಚ್ಚಿ ತಮ್ಮ ಮೊಬೈಲನ್ನು ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.