
ಮಂಗಳೂರು, ಸೆ.4: ಶ್ರೀಕ್ಷೇತ್ರ ಕಟೀಲು ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಸಾಮಾಜಿಕ ಜಲತಾಣವಾದ ವಾಟ್ಸಫ್ ಹಾಗೂ ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ ಬರೆದು ಫೋಸ್ಟ್ ಮಾಡಿರುವುದರ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಷ ವ್ಯಕ್ತವಾಗಿದ್ದು, ಆರೋಪಿಯನ್ನು ಕೂಡಲೇ ಬಂಧಿಸಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಶ್ರೀಕ್ಷೇತ್ರ ಕಟೀಲಿನ ಬಗ್ಗೆ ನಿಂದನೆ: ಖಂಡನೆ
ಸಾಮಾಜಿಕ ಜಾಲತಾಣದಲ್ಲಿ ಶೀಕ್ಷೇತ್ರ ಕಟೀಲಿನ ಬಗ್ಗೆ ನಿಂದನೆ ಮಾಡಿರುವುದನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಖಂಡಿಸಿದ್ದಾರೆ.ಸಾಮಾಜಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಂತಹ ಸಮಾಜಘಾತುಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳು ವಂತೆ ಪ್ರಕಟನೆಯಲ್ಲಿ ಅವರು ಆಗ್ರಹಿಸಿದ್ದಾರೆ.ಪೇಜಾವರ ಶ್ರೀ ಖಂಡನೆ: ಕಟೀಲು ದುರ್ಗಾಮಾತೆಯ ಬಗ್ಗೆ ಅಶ್ಲೀಲ ಭಾಷೆ ಯಿಂದ ಕೆಲವರು ನಿಂದನೆ ನಡೆಸಿರುವುದು ಅತ್ಯಂತ ಖಂಡನೀಯ ಇಂತಹ ವಿಕೃತಬುದ್ಧಿಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಒತ್ತಾಯಿಸಿದ್ದಾರೆ.
ಫೇಸ್ಬುಕ್ನಲ್ಲಿ ಧಾರ್ಮಿಕ ಅವಹೇಳನಗೈದವರ ವಿರುದ್ಧ ಕ್ರಮಕ್ಕೆ ಮುಸ್ಲಿಮ್ ಲೇಖಕರ ಸಂಘ ಒತ್ತಾಯ
ಇತ್ತೀಚೆಗೆ ವಾಟ್ಸ್ಆಪ್ ಮತ್ತು ಫೇಸ್ಬುಕ್ನಲ್ಲಿ ಧಾರ್ಮಿಕ ಅವಹೇಳನಕಾರಿ ಬರಹಗಳನ್ನು ಪೋಸ್ಟ್ ಮಾಡಿರುವುದನ್ನು ಮುಸ್ಲಿಮ್ ಲೇಖಕರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಕೂಲಂಕುಶ ತನಿಖೆ ನಡೆಸಿ, ಅಪರಾಧಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಸೈಬರ್ ಕ್ರೈಂ ಬ್ರಾಂಚ್ ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಅವಹೇಳನಕಾರಿ, ಪ್ರಚೋದನಕಾರಿ ಸಂದೇಶ, ಚಿತ್ರಗಳ ಬಗ್ಗೆ ನಿಗಾ ವಹಿಸಿ, ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ರಿಗೆ ಮುಸ್ಲಿಮ್ ಲೇಖಕರ ಸಂಘದ ನಿಯೋಗದ ಮೂಲಕ ಮನವಿ ನೀಡಲಾಯಿತು.
ನಿಯೋಗದಲ್ಲಿ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಜೊತೆ ಕಾರ್ಯದರ್ಶಿ ಮುಹಮ್ಮದ್ ಮುಹ್ಸಿನ್, ಸದಸ್ಯರಾದ ಬಿ.ಎ. ಸಲೀಮ್ ಬೋಳಂಗಡಿ ಮತ್ತು ಶಬ್ಬೀರ್ ಅಹ್ಮದ್ ಇದ್ದರು.
ಅಡ್ಯಾರ್ನಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ
ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ ಅಶ್ಲೀಲವಾಗಿ ಧರ್ಮ ನಿಂದನೆ ಮಾಡಿದವನನ್ನು ಬಂಧಿಸಲು ಅಡ್ಯಾರ್ನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಜಿಲ್ಲೆಯ ಸಾಮರಸ್ಯ ಕದಡಲು ಪ್ರಯತ್ನಿಸಿದ ಆರೋಪಿಯನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಧರ್ಮನಿಂದನೆ ಮಾಡುವ ವ್ಯಕ್ತಿಗಳು ಕೋಮುವಾದಿಗಳು ಎಂದರು.
ಗ್ರಾಮದ ಪ್ರಮುಖರಾದ ಜಯಲಕ್ಷ್ಮೀ ಹೆಗ್ಡೆ, ಜಯಕಾಂತಿ ಶೆಟ್ಟಿ, ರತ್ನಾಕರ್ ಅಮೀನ್, ಜನಾರ್ದನ ಅಕರಳ, ಪ್ರವೀಣ್ ಕುಮಾರ್ ಶೆಟ್ಟಿ ಸದಾಶಿವ ಶೆಟ್ಟಿ ಅಡ್ಯಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬಿಜೆಪಿಯಿಂದ ಖಂಡನೆ :
ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ಮತ್ತು ಆರಾಧ್ಯ ದೇವಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದಿವ್ಯ ಸಾನ್ನಿಧ್ಯವನ್ನು ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಶ್ರೀದೇವಿಯ ಚಿತ್ರವನ್ನು ವ್ಯಂಗವಾಗಿ ಚಿತ್ರಿಸಿ, ಇಡೀ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವ ದುಷ್ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ ಅತ್ಯಂತ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ತಿಳಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಗ್ರಂಥ ರಾಮಾಯಣದ ಕೆಲವೊಂದು ಸನ್ನಿವೇಶಗಳನ್ನು ಬಿಂಬಿಸಿ, ಆರಾಧ್ಯ ದೇವರಾದ ಪ್ರಭು ಶ್ರೀರಾಮಚಂದ್ರ, ಆಂಜನೇಯ ಮತ್ತು ಸೀತಾಮಾತೆಯ ಬಗ್ಗೆ ಕೆಟ್ಟ ಶಬ್ದಗಳಿಂದ ನಿಂದಿಸಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಘಾಸಿಗೊಳಿಸಿ, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಿ ಅಶಾಂತಿ ಸೃಷ್ಟಿಸುವಂತಹ ಮತಾಂಧ ಶಕ್ತಿಗಳನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಗುರುತಿಸಿ, ಅಂತಹವರ ಮೇಲೆ ಕಾನೂನಿನ ಮುಖಾಂತರ ಸೂಕ್ತ ಕ್ರಮ ಜರಗಿಸಿ ದ.ಕ. ಜಿಲ್ಲೆಯಲ್ಲಿ ಶಾಂತಿಯುತ, ಸೌಹಾರ್ದಯುತ ವಾತಾವರಣವನ್ನು ನೆಲೆಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ಖಂಡಿಸಿ ದ.ಕ. ಜಿಲ್ಲೆಯಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ಮತ್ತು ಹೋರಾಟಗಳನ್ನು ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಅವಹೇಳನ: ಸಾಮೂಹಿಕ ಪ್ರಾರ್ಥನೆ
ಸಾಮಾಜಿಕ ಜಾಲತಾಣಗಳಲ್ಲಿ ದುಷ್ಕರ್ಮಿಗಳು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ವಿರುದ್ಧ ಅವಾಚ್ಯ ಹಾಗೂ ಅವಹೇಳಕಾರಿಯಾಗಿ ಬರೆದು ಪ್ರಚುರಪಡಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಬೇಕು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಸಲ್ಲಿಸಿದೆ.
ಕಟೀಲು ಶ್ರೀದೇವಿಯ ಬಗ್ಗೆ ನಿಂದನಾತ್ಮಕ ಹೇಳಿಕೆಗಳನ್ನು ಫೇಸ್ಬುಕ್ನಲ್ಲಿ ಪ್ರಚುರಪಡಿಸಿರುವುದು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಯಾವುದೇ ಒತ್ತಡಕ್ಕೆ ಬಗ್ಗದೆ, ಆರೋಪಿಗಳು ಎಲ್ಲಿದ್ದರೂ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ನಿರ್ದೇಶನ ನೀಡಬೇಕು ಎಂದು ಸಂಘಟನೆಗಳು ಮನವಿಯಲ್ಲಿ ತಿಳಿಸಿವೆ.
ಸಾಮೂಹಿಕ ಪ್ರಾರ್ಥನೆ
ದೇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುಕೃತ್ಯದ ವಿರುದ್ಧ ನಗರದ ಶರವು ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ, ದುರ್ಗಾವಾಹಿನಿಯ ಕಾರ್ಯಕರ್ತರು ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ನ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ಕಾರ್ಯದರ್ಶಿ ಕೃಷ್ಣಮೂರ್ತಿ, ಬಜರಂಗ ದಳ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಮುಖಂಡರಾದ ಶಿವಾನಂದ ಮೆಂಡನ್, ಪ್ರವೀಣ್ ಕುತ್ತಾರ್, ಮನೋಹರ ಸುವರ್ಣ, ಪುನೀತ್ ಅತ್ತಾವರ, ದುರ್ಗಾವಾಹಿನಿಯ ಸುರೇಖರಾಜ್, ವಿದ್ಯಾಮಲ್ಯ ಮಂತಾದವರು ಉಪಸ್ಥಿತರಿದ್ದರು.
ಧಾರ್ಮಿಕ ಅವಹೇಳನಕಾರಿ ಸಂದೇಶ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಮೂಡುಬಿದಿರೆ :ಕಟೀಲು ಶ್ರೀದುರ್ಗಾ ಪರಮೇಶ್ವರಿ ಸಹಿತ ಹಿಂದೂ ದೇವರನ್ನು ಅಶ್ಲೀಲ, ಅವಾಚ್ಯವಾಗಿ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿತ್ತರಿಸುತ್ತಿರುವುದು. ಕೋಮು ಸೌಹಾರ್ದವನ್ನು ಕದಡಿಸುವ ಹುನ್ನಾರ. ಇಂತಹ ಹೇಳಿಕೆ ನೀಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ತಾಲೂಕು ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆಗ್ರಹಿಸಿದೆ. ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಮುಖಾಂತರ ಸರ್ಕಾರಕ್ಕೆ ಸಂಸ್ಥೆಯು ಮನವಿ ಸಲ್ಲಿಸಿದೆ.
ಹಿಂದೂ ದೇವರ ನಿಂದನೆ: ಪೊಲೀಸರಿಗೆ ದೂರು
ಮೂಡುಬಿದಿರೆ : ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರನ್ನು ಅಶ್ಲೀಲವಾಗಿ ಬಿಂಬಿಸಿರುವುದರ ವಿರುದ್ಧ ಮೂಡುಬಿದಿರೆ ಕ್ಷೇತ್ರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದಿಂದ ಮೂಡುಬಿದಿರೆ ಪೊಲೀಸರಿಗೆ ದೂರು ಸಲ್ಲಿಸಲಾಯಿತು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡುಬಿದಿರೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ಲಕ್ಷ್ಮಣ್ ಪೂಜಾರಿ, ಪ್ರಸಾದ್ ಕುಮಾರ್,ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ವಿನೋದ್ ಸಾಲ್ಯಾನ್, ಮೂಡುಬಿದಿರೆ ಕ್ಷೇತ್ರ ಮೋರ್ಚಾದ ಅಧ್ಯಕ್ಷ, ಗೋಪಾಲ ಶೆಟ್ಟಿಗಾರ, ಪ್ರಧಾನ ಕಾರ್ಯದರ್ಶಿ ಉಮೇಶ್, ಕ್ಷೇತ್ರ ಯುವಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಎಸ್ಟಿ ಮೋರ್ಚಾದ ಅಧ್ಯಕ್ಷ ಕಿಶೋರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಬಂಟ್ವಾಳ : ಫೇಸ್ಬುಕ್ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸಿದವನನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಸಮಿತಿ ಬಂಟ್ವಾಳ ನೇತೃತ್ವದ ನಿಯೋಗವು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್ ಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಐಡಾ ಸುರೇಶ್, ಮಹೇಶ್ ನಾಯಕ್, ಮುಹಮ್ಮದ್ ನಂದಾವರ, ಲುಕ್ಮಾನ್, ಜಗದೀಶ್, ಶಂಕರ್ ಕಾಯರ್ ಮಾರ್, ಪ್ರಶಾಂತ್ ಆಲ್ವಿನ್, ಮಜಿದ್ ಕನ್ಯಾನ, ಪ್ರವೀಣ್ ಕಿಣಿ, ಶಿವಪ್ರಸಾದ್ ಕನಪಾಡಿ, ರಮೇಶ್ ಪಣೋಲಿಬೈಲ್ ಹಾಗೂ ಯುವ ಕಾಂಗ್ರೆಸ್ ಬಂಟ್ವಾಳ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣದಲ್ಲಿ ದೇವರ ಅವಹೇಳನ: ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡಿ ತಕ್ಕ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಧರ್ಮ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು ಎಚ್ಚರಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್ನಲ್ಲಿ ಧಾರ್ಮಿಕ ವಿಚಾರವಾಗಿ ಅವಹೇಳನಕಾರಿಯಾದ ಚಿತ್ರಗಳು ಮತ್ತು ಬರವಣಿಗೆಗಳು ರವಾನೆಯಾಗುತ್ತಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆಯನ್ನುಂಟು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಟೀಲು ದುರ್ಗಾಪರಮೇಶ್ವರಿ ದೇವಿಯ ಕುರಿತು ಅವಹೇಳನ ಮಾಡಿರುವ ಕುರಿತು ಭಾನುವಾರ ಕಟೀಲಿನಲ್ಲಿ ಜಿಲ್ಲಾಮಟ್ಟದ ಪ್ರಮುಖರ ಸಭೆ ನಡೆಯಲಿದೆ. ಆ ಸಬೆಯಲ್ಲಿ ಕೈಗೊಳ್ಳಲಾಗುವ ತೀರ್ಮಾನದ ಮೇಲೆ ಮುಂದೆ ಪುತ್ತೂರಿನಲ್ಲಿ ಹೋರಾಟ ಪ್ರಾರಂಭವಾಗಲಿದೆ ಎಂದು ಹೇಳಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಈ ಹಿಂದೆಯೂ ಹಿಂದೂ ದೇವತೆಗಳ ಚಿತ್ರಗಳನ್ನು ಕೆಳಮಟ್ಟದಲ್ಲಿ ಚಿತ್ರಿಸಿ ಅವಹೇಳನ ಮಾಡಿರುವ ವಿಚಾರಗಳು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಆ ಸಮಯದಲ್ಲಿಲ್ಲೇ ತಪಿತಸ್ಥತರಿಗೆ ಸರಿಯಾದ ಕಠಿಣ ಶಿಕ್ಷೆ ವಿಧಿಸುತ್ತಿದ್ದರೆ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸುತ್ತಿರಲಿಲ್ಲ.
ಪೊಲೀಸ್ ಇಲಾಖೆ ಪಾರದರ್ಶಕವಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿದಲ್ಲಿ ಇಂತಹ ಪ್ರಕರಣಗಳು ನಡೆಯಲು ಸಾಧ್ಯವಿಲ್ಲ ಎಂದ ಅವರು ಧರ್ಮವನ್ನು ಕೆಣಕುವುದು ಮುಂದೊಂದು ದಿನ ದೊಡ್ಡ ಹೊಡೆತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಜಾಗೃತಿ ಸಮಿತಿ ಸದಸ್ಯ ರಾಜೇಶ್ ಬನ್ನೂರು, ಬಜರಂಗದಳ ಮಂಗಳೂರು ವಿಭಾಗ ಸುರಕ್ಷಾ ಮಂಡಳಿ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲ್ಲೂಕು ಅಧ್ಯಕ್ಷ ಅಜಿತ್ ರೈ ಹೊಸಮನೆ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
Comments are closed.