ಮಂಗಳೂರು, ಆಗಸ್ಟ್.19: ಗುರುಪೂರ್ಣಿಮೆ ಉತ್ಸವ ದಿನದಂದು ರಕ್ಷಾಬಂಧನವನ್ನು ಕಟ್ಟುವುದು, ಆಚರಣೆ ಮಾಡುವುದು ಹಿಂದೂಗಳು ಹಿಂದಿನಿಂದ ಮಾಡಿಕೊಂಡು ಬಂದಿರುವ ಸಂಪ್ರದಾಯ. ಆದರೆ ಕ್ರೈಸ್ತ ಬಾಂದವರ ಪವಿತ್ರ ದೇವಾಲಯವೆಂದೇ ಪ್ರಸಿದ್ದಿ ಪಡೆದಿರುವ ಮಂಗಳೂರಿನ ಬಿಕರ್ನಕಟ್ಟೆ ಸಮೀಪವಿರುವ ಬಾಲಯೇಸು ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಚರ್ಚ್‌ನ ಧರ್ಮಗುರುಗಳು ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾದರು.
ಗುರುಪೂರ್ಣಿಮೆ ಉತ್ಸವ ದಿನವಾದ ಗುರುವಾರ ಆರ್.ಎಸ್.ಎಸ್‌ನ ಪ್ರಮುಖರು ಮತ್ತು ಚರ್ಚ್‌ನ ಧರ್ಮಗುರುಗಳು ಹಾಗೂ ಬಾಲಯೇಸು ಮಂದಿರದ ಭಕ್ತರು ಪರಸ್ಪರ ರಾಖಿಕಟ್ಟುವ ಮೂಲಕ ಎರಡು ಸಮುದಾಯಗಳನ್ನು ಬೆಸೆಯುವ ಮಹತ್ವದ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹ ಸಂಘಚಾಲಕ ಡಾ. ಪಿ.ವಿ. ವಾಮನ್ ಶೆಣೈ ಅವರು, ರಾಖಿ ಹಬ್ಬದ ಮಹತ್ವ ಕುರಿತು ಉಪನ್ಯಾಸ ನೀಡಿದರು. ತನ್ನ ಮಾನ ಪ್ರಾಣ ರಕ್ಷಣೆಗಾಗಿ ರಾಖಿ ಕಟ್ಟುವ ಸಹೋದರಿಯ ರಕ್ಷಣೆಗೆ ಜೀವತೆತ್ತು ಮಾನ-ಪ್ರಾಣ ರಕ್ಷಿಸಿದ ರಜಪೂತ ಸಂಸ್ಕೃತಿಯನ್ನು ನೆನಪಿಸುವ ದಿನವನ್ನು ರಾಷ್ಟ್ರ ರಕ್ಷಣೆಯ ಚಿಂತನೆಗಾಗಿ ಮುಡಿಪಾಗಿಡಬೇಕು. ಐಕ್ಯತೆಗೆ ಸವಾಲಾಗಿರುವ ಜಾತಿ, ಧರ್ಮದ ಬೀಜವನ್ನು ಕಿತ್ತೆಸೆಯಬೇಕು ಎಂದು ಅವರು ಹೇಳಿದರು.
ಈ ದೇಶ ನನ್ನದು ಎಂಬ ಶ್ರದ್ಧೆ, ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಸಹೋದರತ್ವ, ಸಾಮರಸ್ಯ ಮೂಲಕ ಸಂಘಟಿತ ಸಮಾಜ ನಿರ್ಮಾಣ ಧ್ಯೇಯಗಳೊಂದಿಗೆ ರಾಷ್ಟ್ರೀಯ ಚಿಂತನೆಯನ್ನಿಟ್ಟುಕೊಂಡಾಗ ದೇಶದ ಬಹುತೇಕ ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಲ್ಲಬಹುದು. ಇದಕ್ಕೆ ಇಸ್ರೇಲ್, ಅಮೆರಿಕಾ, ಜಪಾನ್‌ನಂತಹ ರಾಷ್ಟ್ರಗಳಲ್ಲಿನ ರಾಷ್ಟ್ರೀಯ ಚಿಂತನೆಗಳು ಉದಾಹರಣೆಯಾಗಿವೆ. ರಾಷ್ಟ್ರೀಯತೆಯ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಆರ್‌ಎಸ್‌ಎಸ್‌ನ ಪರಿಕಲ್ಪನೆಯನ್ನು ಹಲವರು ಸಮರ್ಪಕವಾಗಿ ಅರ್ಥೈಸದೇ, ವಿಮರ್ಶದಿದ್ದರೂ ಚರ್ಚ್ ಧರ್ಮಾಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡಿದ್ದರಿಂದಲೇ ಇಲ್ಲಿ ಉತ್ಸವಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಅಲ್ಲಿನ ಧರ್ಮಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಡಾ. ವಾಮನ್ ಶೆಣೈ ಹಾಗೂ ಬಾಲಯೇಸು ಮಂದಿರದ ನಿರ್ದೇಶಕ ಎಲಿಯಾಸ್ ಡಿಸೋಜಾ ಅವರು ಪರಸ್ಪರ ರಾಖಿ ಕಟ್ಟುವ ಮೂಲಕ ಶುಭಾಶಯ ಕೋರಿದರು. ಸಮಸ್ತ ಕ್ರೈಸ್ತ ಬಂಧುಗಳ ಪರವಾಗಿ ಸೋನಿ ಅವರು ಡಾ. ಶೆಣೈ ಅವರಿಗೆ ರಾಖಿ ಕಟ್ಟಿದರು. ಬಳಿಕ ಕ್ರೈಸ್ತ ಮಹಿಳೆಯರು ಆರೆಸ್ಸೆಸ್ ಪ್ರಮುಖರುಗಳಿಗೆ ರಾಖಿ ಕಟ್ಟಿ ಶುಭಾಶಯ ಕೋರಿಕೊಂಡರು.
ಈ ಒಂದು ಅಧ್ಬುತ ಕಾರ್ಯಕ್ರಮವನ್ನು ಸಂಘಟಿಸಿದ ಸಮಾಜ ಸೇವಕ ಫ್ರಾಂಕ್ಲಿನ್ ಮೊಂತೆರೋ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಿರಿಯ ಧರ್ಮಗುರುಗಳಾದ ಬಾಲಯೇಸು ಮಂದಿರದ ಉಪ ನಿರ್ದೇಶಕ ವಂದನೀಯ ಪ್ರಕಾಶ್ ಡಿಕುನ್ಹಾ ವಂದಿಸಿದರು.
Comments are closed.