
ಮಂಗಳೂರು, ಆ.19: ಆ.21ರಂದು ಮಂಗಳೂರಿನಲ್ಲಿ ನಡೆಯಲಿರುವ 70ನೆ ಸ್ವಾತಂತ್ರೋತ್ಸವ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ. ಪೋರ್ಚುಗೀಸರೊಂದಿಗೆ ಹೋರಾಡಿದ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಅವರ ತ್ಯಾಗವನ್ನು ರಾಷ್ಟ್ರವ್ಯಾಪಿಗೊಳಿಸಲು ಆ.21ರಂದು ಮಂಗಳೂರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಲಿರುವರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.


ಅಮಿತ್ ಶಾ ಅಂದು ಬೆಳಗ್ಗೆ 4:30ಕ್ಕೆ ರೈಲಿನ ಮೂಲಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಆಗಮಿಸುವರು. ಬೆಳಗ್ಗೆ 10ಕ್ಕೆ ನಗರದ ಪಿವಿಎಸ್ ವೃತ್ತ ಬಳಿಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ‘ಗಿಡ ನೆಡಿ ಪರಿಸರ ಉಳಿಸಿ’ ಕಾರ್ಯಕ್ರಮದಲ್ಲಿ ಗಿಡ ನೆಡಲಿದ್ದಾರೆ. 10:20ಕ್ಕೆ ನಗರದ ಮಹಾವೀರ (ಪಂಪ್ವೆಲ್) ವೃತ್ತದಲ್ಲಿ ತಿರಂಗಾ ಯಾತ್ರೆಯ ಬೃಹತ್ ವಾಹನ ರ್ಯಾಲಿ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಹಾರಾರ್ಪಣೆ ಮುಖಾಂತರ ‘ಬಲಿದಾನ ಸ್ಮರಣೆ’ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಪಂಪ್ವೆಲ್ ಸರ್ಕಲ್ನಲ್ಲಿ `ತಿರಂಗಾ ಯಾತ್ರೆ’ಯ ಬೃಹತ್ ವಾಹನ ಜಾಥಾವನ್ನು ಉದ್ಘಾಟಿಸಿ, ಅಲ್ಲಿಂದ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆಯ ಮೂಲಕ `ಬಲಿದಾನ ಸ್ಮರಣೆ’ ಮಾಡಲಿದ್ದಾರೆ. 11:30ಕ್ಕೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ‘ತಿರಂಗಾ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆ’ ನಡೆಯಲಿದೆ ಎಂದು ಅವರು ಹೇಳಿದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹಾಗೂ ಕೇಂದ್ರ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ ಎಂದವರು ಹೇಳಿದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಸುದರ್ಶನ್ ಮೂಡುಬಿದಿರೆ, ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಪಕ್ಷದ ಪ್ರಮುಖರಾದ ಚಂದ್ರಹಾಸ ಉಳ್ಳಾಲ್, ಜಿತೇಂದ್ರ ಕೊಟ್ಟಾರಿ, ವಿಕಾಸ್ ಪುತ್ತೂರು, ರಾಜೇಶ್ ಕೊಟ್ಟಾರಿ, ವೇದವ್ಯಾಸ ಕಾಮತ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.