ಕರಾವಳಿ

ಕರುಳಿನ (ಅಲ್ಸರೇಟಿವ್ ಕೊಲೈಟೀಸ್) ತೊಂದರೆ ಸಮಸ್ಯೆ ನಿವಾರಿಸಲು “ಮಲಮಾತ್ರೆ”

Pinterest LinkedIn Tumblr

stool_tablet_photo

ಮಂಗಳೂರು : ಅಲ್ಸರೇಟಿವ್ ಕೊಲೈಟೀಸ್ : ಇದು ದೊಡ್ಡ ಕರುಳು ಮತ್ತು ಗುದದ್ವಾರದ ಒಳ ಪದರವನ್ನು ಕಾಡುವ ಕಾಯಿಲೆ. ಯಾಕಾಗಿ ಈ ರೋಗ ಬರುತ್ತದೆ ಎಂಬುದು ಪೂರ್ತಿಯಾಗಿ ತಿಳಿಯದಿದ್ದರೂ ವಂಶ ವಾಹಿನಿಗಳಲ್ಲಿ ಮತ್ತು ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ವ್ಯತ್ಯಯವಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಕರುಳಿನ ಆಂತರಿಕ ವಾತವರಣದಲ್ಲಿ ಏರುಪೇರಾದಾಗಲೂ ಈ ರೋಗ ಬರುವ ಸಾಧ್ಯತೆಯಿರುತ್ತದೆ. ದೊಡ್ಡ ಕರುಳಿನ ಒಳಭಾಗದ ಸೂಕ್ಷಾಣು ಜೀವಿಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಈ ರೋಗಾಣುಗಳ ಸಮೂಹವನ್ನು ‘ಗಟ್ ಪ್ರೋರಾ’ ಎನ್ನುತ್ತಾರೆ. ಪ್ರಮುಖವಾಗಿ ‘ಲ್ಯಾಕ್ಟೊಬಾಸಿಲಸ್’ ಮತ್ತು ‘ಇ ಕೊಲೈ’ ರೋಗಾಣು ಜೀವಿಗಳು ಕರುಳಿನ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಅನಾರೋಗ್ಯಕರವಾದ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಅತಿಯಾದ ಮಾನಸಿಕ ಒತ್ತಡವೂ ಈ ಆಂತರಿಕ ಸೂಕ್ಷಾಣು ಜೀವಿಗಳ ಸಮತೋಲನವನ್ನು ಹಾಳುಮಾಡುವ ಸಾಧ್ಯತೆ ಇರುತ್ತದೆಂದು ಸಂಶೋಧನೆಗಳು ಹೇಳಿವೆ.

ಅದೇ ರೀತಿ ಯಕೃತಿನ ತೊಂದರೆ, ಕ್ರೋನ್ಸ್, ಪಾರ್ಕಿನ್ಸನ್ಸ್ ರೋಗ, ಅತಿಯಾದ ಬೊಜ್ಜು- ಕರುಳಿನಲ್ಲಿ ಹಿಂಸೆ ಸೃಷ್ಟಿಸಿ ಅಲ್ಸರೇಟಿವ್ ಕೊಲೈಟಿಸ್ ರೋಗಕ್ಕೆ ಮುನ್ನುಡಿ ಹಾಡುತ್ತವೆ. ಯಾವುದೇ ಒಂದು ನಿರ್ದಿಷ್ಟ ಕಾರಣದಿಂದ ಈ ರೋಗ ಬರುವುದಿಲ್ಲ. ರೋಗದ ಚಿಕಿತ್ಸೆ ಕಷ್ಟಕರವಾಗಿರುವುದು ಇದೇ ಕಾರಣಕ್ಕೆ. ವಿಶ್ವದಾದ್ಯಂತ ಒಂದು ಲಕ್ಷದಲ್ಲಿ 20 ರಿಂದ 25 ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಈ ವಿಚಾರದಲ್ಲಿ ಏಷ್ಯಾ ಖಂಡದಲ್ಲಿ ಭಾರತ ಅಗ್ರರಾಷ್ಟ್ರ ಎನ್ನುವುದೇ ಆತಂಕಕಾರಿ ಸಂಗತಿ.

ರೋಗದ ಲಕ್ಷಣಗಳೇನು?
ರೋಗದ ತೀವ್ರತೆ ಮತ್ತು ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇದು ವ್ಯಕ್ತಿಯ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ. ಪದೇಪದೆ ರಕ್ತಮಿಶ್ರಿತ ಭೇದಿ ಕಾಡುತ್ತಿರುತ್ತದೆ. ಮತ್ತೆ ಕೆಲವರಲ್ಲಿ ಮಲಬದ್ಧತೆ ಕಾಡಬಹುದು. ಕೆಲವೊಮ್ಮೆ ಗಂಟುನೋವು, ನಿದ್ರಾಹೀನತೆ, ಬೆನ್ನಿನ ಕೆಲಭಾಗದಲ್ಲಿ ನೋವು, ಕಣ್ಣು ಕೆಂಪಾಗುವುದು, ಚರ್ಮದಲ್ಲಿ ತುರಿಕೆ, ಯಕೃತ್ತ್ ದೊಡ್ಡದಾಗಬಹುದು.

ಪತ್ತೆ ಹಚ್ಚೋದು ಹೇಗೆ?
ರೋಗಿಯ ಜೀವನಶೈಲಿ, ಆಹಾರ ಪದ್ಧತಿ, ಭೌಗೋಳಿಕ ಹಿನ್ನೆಲೆ, ಕೆಲಸದ ಚರಿತ್ರೆಯನ್ನು ವೈದ್ಯರು ಅಧ್ಯಯನಿಸುತ್ತಾರೆ. ಬಳಿಕ ಆತನ ಮುಖ್ಯ ತೊಂದರೆಯನ್ನು ಆಧರಿಸಿ ಕೊಲೆನೋಸ್ಕೋಪಿ ಪರೀಕ್ಷೆ ಮಾಡುತ್ತಾರೆ. ಗುದದ್ವಾರದ ಮುಖಾಂತರ ಚಿಕ್ಕದಾದ ಉಪಕರಣವನ್ನು ಬಳ್ಳಿಯ ಮೂಲಕ ಕರುಳಿನ ಒಳಭಾಗವನ್ನು ಪ್ರವೇಶಿಸಿ, ದೊಡ್ಡಕರುಳು ಮತ್ತು ಗುದದ್ವಾರದ ಒಳಪದರವನ್ನು ಕೂಲಂಕಷವಾಗಿ ಪರೀಕ್ಷಿಸಲಾಗುತ್ತದೆ. ಸಾಮಾನ್ಯವಾಗಿ ಈ ಒಳಪದರಕ್ಕೆ ಹಾನಿಯಾಗಿ ನೀರನ್ನು ಹೀರುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಒಳಪದರ ಬೋಳಾಗಿ ಮರುಭೂಮಿಯಂತಾಗುತ್ತದೆ.

ಚಿಕಿತ್ಸೆ ಹೇಗೆ?
ಅಲ್ಸರೇಟಿವ್ ಕೊಲೈಟಿಸ್ ರೋಗದ ಚಿಕಿತ್ಸೆ ಬಹಳ ಕ್ಲಿಷ್ಠಕರ. ದೊಡ್ಡಕರುಳು ಆಂತರಿಕ ವಾತಾವರಣದ ಸಮತೋಲನ ಕಳೆದುಕೊಂಡು, ಉಪಕಾರಿ ಸೂಕ್ಷ್ಮಾಣು ಜೀವಿಗಳೂ ಅಸಹಾಯಕವಾಗಿರುತ್ತದೆ. ಇದರಿಂದಾಗಿಯೇ ಅತಿಸಾರ ಮತ್ತು ರಕ್ತಸ್ರಾವವೂ ಆಗುತ್ತದೆ. ಇದರ ಜೊತೆಗೆ ‘ಕ್ಲಸ್ಟ್ರೀಡಿಯಾ ಡಿಪಿಸಿಲ್’ ಬ್ಯಾಕ್ಟೀರಿಯ ಸೋಂಕು ಕರುಳಿನ ಒಳಭಾಗಕ್ಕೆ ಸೇರಿ, ಮತ್ತಷ್ಟು ತೊಂದರೆ ನೀಡುತ್ತದೆ. ಈ ಹಂತದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ತಿಂಗಳುಗಟ್ಟಲೆ ಆಂಟಿ ಬಯೋಟಿಕ್ ತೆಗೆದುಕೊಳ್ಳುವುದು ಅನಿವಾರ್ಯ. ಕೆಲವೊಮ್ಮೆ ಸ್ಟಿರಾಯ್ಡ್ ಸೇವನೆಯ ಅಗತ್ಯವೂ ಬರಬಹುದು. ಈಗ ಈ ರೋಗದ ಚಿಕಿತ್ಸೆಯ ಬತ್ತಳಿಕೆಗೆ ಸೇರಿಕೊಂಡ ಹೊಸ ಅಸ್ತ್ರವೇ ಮಲಮಾತ್ರೆ ಅಥವಾ FMT(Fecal microbiota transplant)

ಏನಿದು ಮಲಮಾತ್ರೆ?
ಆರೋಗ್ಯವಂತ ವ್ಯಕ್ತಿಯ ದೇಹದಿಂದ ಮಲವನ್ನು ಪಡೆಯಲಾಗುತ್ತದೆ. ಬಳಿಕ ಈ ಮಲವನ್ನು ಪರಿಷ್ಕರಿಸಿ, ನಿಗದಿತ ಸಾಂದ್ರತೆಯುಳ್ಳ ಮಿಶ್ರಣವನ್ನಾಗಿಸಲಾಗುತ್ತದೆ. ನಂತರ ಕೊಲೋನೋಸ್ಕೋಪಿಯ ಮೂಲಕ ಕರುಳಿನ ಒಳಭಾಗಕ್ಕೆ ಸೇರಿಸಲಾಗುತ್ತದೆ. ಈ ಮೂಲಕ ಕರುಳಿನ ಒಳಪದರದಿಂದ ಕಳೆದುಹೋದ ಪರೋಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪುನಃ ಸೇರಿಸಿ ಆಂತರಿಕ ವಾತಾವರಣವನ್ನು

ಸಮತೋಲನಗೊಳಿಸಲಾಗುತ್ತದೆ. ಆರೋಗ್ಯವಂತ ಕರುಳಿನ ಒಳಪದರ ಸೃಷ್ಟಿಯಾಗಲು ಪೂರಕ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಕೆಲವೊಮ್ಮೆ ಗುದದ್ವಾರದ ಮೂಲಕವೇ ಮಲಮಾತ್ರೆಗಳನ್ನು ಕರುಳಿನ ಒಳಭಾಗಕ್ಕೆ ಸೇರಿಸಲಾಗುತ್ತದೆ. ಅದೇ ರೀತಿ ಬಾಯಿಯಿಂದ ಸೇವಿಸಲಾಗುವ ಮಲಮಾತ್ರೆಗಳೂ ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿದೆ. ಒಟ್ಟಿನಲ್ಲಿ ಆರೋಗ್ಯವಂತ ವ್ಯಕ್ತಿಯ ಮಲಕ್ಕೂ ಮೌಲ್ಯ ಬಂದಿರುವುದಂತೂ ಸತ್ಯವಾದ ಮಾತು. ಈ ಚಿಕಿತ್ಸೆಯಿಂದ ಹೆಚ್ಚಿನ ಅಡ್ಡಪರಿಣಾಮಗಳಿಲ್ಲ. ೨ ರಿಂದ ೯೦ ವರ್ಷದ ವ್ಯಕ್ತಿಗೂ ಈ ರೀತಿಯ ಚಿಕಿತ್ಸೆ ನೀಡಬಹುದು. ಕೆಲವೊಮ್ಮೆ ವಾಂತಿ, ವಾಕರಿಕೆ, ಅತಿಸಾರ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಂತೆ ಅನಿಸುವ ಸಾಧ್ಯತೆ ಇರುತ್ತದೆ.

ಭಾರತದಲ್ಲಿ ಹಲವು ಆರೋಗ್ಯ ಸಂಸ್ಥೆಗಳಲ್ಲಿ ಈ ಚಿಕಿತ್ಸೆ ಲಭ್ಯವಿದ್ದು, ಹೆಚ್ಚಿನನವರಿಗೆ ಈ ಚಿಕಿತ್ಸಾ ವಿಧಾನ ಇನ್ನೂ ತಲುಪಿಲ್ಲ. ಮಲಮಾತ್ರೆಯ ಸಾಮರ್ಥ್ಯದ ಬಗ್ಗೆ ಮತ್ತು ಚಿಕಿತ್ಸಾ ಪದ್ಧತಿ ಬಗ್ಗೆ ಇನ್ನೂ ಸಂಶೋಧನೆಗಳು ಸಾಗಿವೆ.

ಮಲದಾನಿಗಳ ಅರ್ಹತೆಗಳೇನು?
– ಮಲದಾನಿಗಳು ಆರೋಗ್ಯವಂತರಾಗಿರಬೇಕು.
– ಮಲ ದಾನ ಮಾಡುವ ಸಮಯದಲ್ಲಿ ಕನಿಷ್ಠ 90 ದಿನಗಳವರೆಗೆ ಯಾವುದೇ ನೋವು ನಿವಾರಕ ಮತ್ತು ಆಂಟಿಬಯೋಟಿಕ್ ಔಷಧಿ ಸೇವಿಸಿರಬಾರದು.
– ಅತಿಸಾರ, ಮಲಬದ್ಧತೆ ಮತ್ತು ಇನ್ನಿತರ ಯಾವುದೇ ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರಬಾರದು.
– ಮಲದಾನಿಗಳು ಯಾವುದೇ ರೀತಿಯ ಅಲರ್ಜಿ ಮತ್ತು ದೇಹದ ರಕ್ಷಣಾ ಸಾಮರ್ಥ್ಯ ಕುಸಿದಿರುವ ರೋಗಗಳಿಂದ ಬಳಲುತ್ತಿರಬಾರದು.
– ಗರ್ಭಿಣಿಯರು ಮಲದಾನ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಗರ್ಭಾವಸ್ಥೆಯ ಸಮಯದಲ್ಲಿ ಕರುಳಿನ ಒಳಭಾಗದ ಗಟ್ ಪ್ರೋರಾ ಬದಲಾಗಿರುತ್ತದೆ.
– ಸಾಮಾನ್ಯವಾಗಿ ಮಲದಾನಿಗಳು ರೋಗಿಗಳ ಕುಟುಂಬಸ್ಥರೇ ಆಗಿರಬೇಕಾಗುತ್ತದೆ. ಯಾಕೆಂದರೆ ಒಂದೇ ರೀತಿಯ ಆಹಾರ ಪದ್ಧತಿ ಜೀವನ ಶೈಲಿ ಮತ್ತು ಭೌಗೋಳಿಕ ಹಿನ್ನೆಲೆಯಿರುವ ಮಲದಾನಿಗಳ ಮಲ ಹೆಚ್ಚು ಪರಿಣಾಮಕಾರಿ. ಅಲ್ಲದೆ, ಬಹಳ ಬೇಗ ಕರುಳಿನ ಒಳಭಾಗದ ಆಂತರಿಕ ಸಮತೋಲನ ಉಂಟುಮಾಡಿ ಒಳಪದರದ ಪುನರ್ನಿರ್ಮಾಣವಾಗುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ.
– ಏಡ್ಸ್, ಹೆಪಟೈಟೀಸ್, ಸಿಫಿಲಿಸ್ ಮತ್ತಿತರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು ಮಲದಾನ ಮಾಡುವಂತಿಲ್ಲ.

ಚೀನಾದಲ್ಲೂ ಮಲೌಷಧಿ ಇತ್ತು!
ಸುಮಾರು 1700 ವರ್ಷಗಳ ಹಿಂದೆಯೇ ಚೀನಾದಲ್ಲಿ ವಿಷಪೂರಿತ ಆಹಾರ ಸೇವನೆ ಮತ್ತು ಅತಿಸಾರಕ್ಕೆ ಚಿಕಿತ್ಸೆ ನೀಡಲು ಮಲದ ಮಿಶ್ರಣ ಬಳಸುತ್ತಿದ್ದರು. ಸಾಮಾನ್ಯವಾಗಿ ರಕ್ತ ಸಂಬಂಧಿಗಳನ್ನೇ ಈ ರೀತಿಯ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಅದೇನೆ ಇರಲಿ, ಚಿಕಿತ್ಸೆ ಇಲ್ಲದ ರೋಗವೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಅಲ್ಸರೇಟಿವ್ ಕೊಲೈಟಿಸ್ ರೋಗಕ್ಕೆ ಮಲಮಾತ್ರೆ ರಾಮಬಾಣವಾಗಿರುವುದಂತೂ ನಿಜ. ಮನುಷ್ಯ ನಾಲಿಗೆಯ ದಾಸನಾಗಿ ಬಾಯಿಚಪಲಕ್ಕೆ ಪೂರಕವಾದ ಆಹಾರ ಕ್ರಮದಲ್ಲಿ ದೇಹ ರೋಗದ ಹಂದರವಾಗುತ್ತದೆ ಎಂಬುದು ಈಗಿನ ಯುವಜನರ ಆರೋಗ್ಯ ಸ್ಥಿತಿ ಹೇಳುತ್ತಿದೆ. ತಿನ್ನಲಿಕ್ಕಾಗಿ ಬದುಕದೆ, ಬದುಕಲಿಕ್ಕಾಗಿ ತಿಂದಲ್ಲಿ ಬಹುಷಃ ಬಹುತೇಕ ರೋಗಗಳನ್ನು ತಡೆಯಬಹುದು. ಇಲ್ಲವಾದಲ್ಲಿ ಪ್ರಕೃತಿಗೆ ವಿರುದ್ಧವಾಗಿ ಸೆಣಸಿ, ದೇಹಕ್ಕೆ ಪೂರಕವಾದ ಆಹಾರವನ್ನೇ ಸೇವಿಸಿದ್ದಲ್ಲಿ ಮುಂದೊಂದು ದಿನ ಮಲ ಮಾತ್ರೆಯನ್ನೇ ಕಾಯಂ ಆಗಿ ತಿನ್ನಬೇಕಾದ ದಿನಗಳು ಬರುವ ಸಾಧ್ಯತೆ ದೂರವಿಲ್ಲ..

Comments are closed.