ವಿಶೇಷ ವರದಿ- ಯೋಗೀಶ್ ಕುಂಭಾಸಿ
ಯಾಂತ್ರಿಕತ ಬದುಕಿಗೆ ಒಗ್ಗಿಕೊಂಡಿರುವ ನಗರವಾಸಿಗಳು ಹಬ್ಬಗಳನ್ನು ಆಚರಿಸಲು ಸಮಯವೇ ಇರುವುದಿಲ್ಲ. ಹಳ್ಳಿಗಳಲ್ಲಿ ಸಾಮಾನ್ಯ ಎಲ್ಲಾ ಹಬ್ಬಗಳ ಆಚರಣೆಯನ್ನು ಕಾಣಬಹುದು. ಆದರೆ ನಗರಗಳಲ್ಲಿ ಕೆಲವೊಂದು ಹಬ್ಬಗಳನ್ನು ಆಚರಿಸುತ್ತಾದರೂ, ಎಲ್ಲಾ ಹಬ್ಬಗಳು ಅಷ್ಟೊಂದು ಪ್ರಚಲಿತದಲ್ಲಿರುವುದಿಲ್ಲ. ಹಳ್ಳಿ ಜನರು ಆಚರಿಸುವ ಹಬ್ಬಹರಿದಿನಗಳು ಜನಸಾಮಾನ್ಯರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಕುಂದಾಪುರ ತಾಲೂಕು ಹಬ್ಬ-ಹರಿದಿನಗಳ ಆಚರಣೆಯಲ್ಲಿ ಮೇಲುಗೈಯನ್ನೇ ಸಾಧಿಸಿದೆ. ಕುಂದಾಪುರದ ಜನರು ವಿಶಿಷ್ಟವಾಗಿ ಆಷಾಡ ತಿಂಗಳಲ್ಲಿ ಆಚರಿಸುವ ಆಸಾಡಿ ಹಬ್ಬವು ನಂಬಿಕೆಯ ಆಧಾರದ ಮೇಲೆ ನಿಂತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬಗಳ ಹಿನ್ನೆಲೆ ಹಾಗೂ ಆಚರಣೆಯನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಿಲ್ಲ. ಜನಪದ ಸಾಹಿತ್ಯ ಬಾಯಿಂದ ಬಾಯಿಗೆ ಹರಿದು ಹೇಗೆ ಬಂದಿದೆಯೋ ಅದೇ ರೀತಿ ಆಸಾಡಿ ಹಬ್ಬಕ್ಕೆ ಸಂಪ್ರದಾಯ, ಅನುಕರಣೆ ಹಾಗೂ ನಂಬಿಕೆಯೇ ಆಧಾರ. ಆಷಾಢ ಮಾಸದಲ್ಲಿ ಮಂಗಳಕರ ಕಾರ್ಯ ನಿಷಿದ್ದ, ದೇವತಾ ಆರಾಧನೆಗಳು ಈ ಸಮಯದಲ್ಲಿ ಕಡಿಮೆ ಇದ್ದು ವಿಪರೀತ ಮಳೆ ಬರುವ ಈ ತಿಂಗಳಿನಲ್ಲಿ ಹಿಂದಿನ ಕಾಲದ ಜನರು ಹೊರ ಹೋಗಲೂ ಹಿಂಜರಿಯುತ್ತಿದ್ದರು ಎನ್ನುತ್ತಾರೆ ಹಿರಿಯರು. ಕುಂದಾಪುರ ಕನ್ನಡ ಮಾತನಾಡುವ ಜನರು ಈಗಲೂ ಈ ಹಬ್ಬವನ್ನು ಕರ್ಕಾಟಕ ಸಂಕ್ರಮಣದಿಂದ ಸೋಣೆ ಸಂಕ್ರಮಣದವರೆಗೂ ಆಚರಿಸುತ್ತಾರೆ. ಜಡಿ ಮಳೆಗೆ ಬೇಸತ್ತು ಜನರ ವಿಶ್ರಾಂತಿ ಸಮಯ ಈ ಹಬ್ಬಕ್ಕೆ ಸಕಾಲವಾಗಿದೆ. ವಿವಿಧ ಭಕ್ಷ-ಭೋಜನಗಳನ್ನು ಮಾಡಿ ತಿನ್ನುವ ಜನರು ಮಳೆಗಾಲದ ಸವಿಯನ್ನು ಅನುಭವಿಸುತ್ತಾರೆ.
ಹಬ್ಬದ ಹಿನ್ನಲೆ: ಜಮೀನ್ದಾರರ ಮನೆಯಲ್ಲಿ ಕೆಲಸಕ್ಕಿದ್ದ ಕೂಲಿಯಾಳು ಮಳೆಗಾಲದ ನೆಟ್ಟಿ ಕಾರ್ಯವನ್ನು ಪೂರೈಸಿ ಇನ್ನೇನು ಜಡಿ ಮಳೆಯಲ್ಲಿ ಮನೆಯ ಚಾವಡಿಯಲ್ಲಿ ವಿಶ್ರಾಂತಿಯಲ್ಲಿರುವಾಗ ಈಗ ದೊಡ್ಡ ಸಾಹೇಬರು ಸತ್ತಿದ್ದರೆ ದೊಡ್ಡ ಕುಕ್ಕಿಯಲ್ಲಿ ತಿನ್ನಬಹುದಿತ್ತು ಎನ್ನುತ್ತಿದ್ದನಂತೆ. ಇದನ್ನು ಕೇಳಿದ ಮನೆಯೊಡತಿ ನಮ್ಮ ಯಜಮಾನ್ರು ಸಾಯೊದು ಬೇಡ ನಿನಗೇ ಬೇಕಾದರೆ ಈ ದಿನವೇ ಹಬ್ಬ ಮಾಡಿ ಬಡಿಸುತ್ತೇನೆ ಎಂದು ಹಬ್ಬ ಮಾಡಿ ಅವನಿಗೆ ಹೊಟ್ಟೆ ತುಂಬಾ ಊಟ ಹಾಕಿದಳಂತೆ. ಎಂಬ ವಿಭಿನ್ನ ಕಥೆಯೊಂದು ಜನರ ಬಾಯಲ್ಲಿ ಪ್ರಚಲಿತದಲ್ಲಿದ್ದು ಇದೇ ಆಸಾಡಿ ಹಬ್ಬ ಎಂದು ಆಚರಣೆಯಾಗಿ ಬಂತು ಎನ್ನುತ್ತಾರೆ ಹಿರಿಯರು.
(ಸಾಂದರ್ಭಿಕ ಚಿತ್ರಗಳು)
Comments are closed.