ಕರಾವಳಿ

ಸಿ.ಎಂ ಆಪ್ತನ ವಿರುದ್ಧ ದೂರು ನೀಡಿ ಜೈಲಿಗಟ್ಟಿದ ಮೈಸೂರು ಜಿಲ್ಲಾಧಿಕಾರಿ ಎತ್ತಂಗಂಡಿ : ಒಳ್ಳೆಯವರಿಗೆ ಇದು ಕಾಲವಲ್ಲ..!

Pinterest LinkedIn Tumblr

Mysore_Dc_Shikha

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರ ವಿರುದ್ಧ ದೂರು ನೀಡಿ, ಜೈಲಿಗೆ ಕಳುಹಿಸಿದ್ದ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ಬುಧವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಶಿಖಾ ಸೇರಿದಂತೆ ಒಟ್ಟು 11 ಐಎಎಸ್ ಅಧಿಕಾರಿಗಳನ್ನು ಇಂದು ವರ್ಗಾವಣೆ ಮಾಡಿರುವ ಸರ್ಕಾರ, ಜಿಲ್ಲಾಧಿಕಾರಿ ಹುದ್ದೆಯಿಂದ ಶಿಖಾ ಅವರನ್ನು ಎತ್ತಂಗಡಿ ಮಾಡಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಿದೆ.

ಸದ್ಯ ಜೈಲಿನಲ್ಲಿರುವ ಸಿಎಂ ಆಪ್ತ ಮರಿಗೌಡ ಅವರು ಕಳೆದ ಜುಲೈ 3ರಂದು ಶಿಖಾ ಅವರಿಗೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಖಾ ಅವರು ಜುಲೈ 3ರಂದೇ ಸಂಜೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಸಿಎಂ ಆಪ್ತನ ವಿರುದ್ಧ ದೂರು ದಾಖಲಿಸಿದ್ದರು.

ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮರಿಗೌಡ ಸುಮಾರು ಒಂದು ತಿಂಗಳ ನಂತರ ಪೊಲೀಸರಿಗೆ ಶರಣಾಗಿದ್ದರು. ನಂತರ ಕೋರ್ಟ್ ಆರೋಪಿಯನ್ನು ಆಗಸ್ಟ್ 16ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಜಯಪುರ ಜಿಲ್ಲಾಧಿಕಾರಿ ಡಿ. ರಂದೀಪ್‌ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ:

ರಾಜ್ಯ ಸರ್ಕಾರ 11 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದ್ದು, ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ವರ್ಗಾಯಿಸಿದೆ. ವಿಜಯಪುರ ಜಿಲ್ಲಾಧಿಕಾರಿ ಡಿ. ರಂದೀಪ್‌ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿದೆ.

ಸಮಾಜಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಎಂ.ವಿ. ಸಾವಿತ್ರಿ ಅವರನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಾರ್ಪೋರೇಷನ್‌ (ಕೆಎಸ್‌ಎಸ್‌ಐಡಿಸಿ) ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಮಹತ್ವ ಪಡೆದ ವರ್ಗಾವಣೆ

ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಂಬಂಧ ಜಿಲ್ಲಾಧಿಕಾರಿ ಸಿ.ಶಿಖಾ ಅವರು, ಕೆ.ಮರೀಗೌಡ ಅವರ ವಿರುದ್ಧ ಮೈಸೂರಿನ ನಜರಬಾದ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದ್ದರಿಂದ ಈ ವರ್ವಾಗವಣೆ ಮಹತ್ವ ಪಡೆದು ಕೊಂಡಿದೆ ಎನ್ನಲಾಗಿದೆ.

ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ತಿಂಗಳ ಅಜ್ಞಾತವಾಸದ ಬಳಿಕ ನಜರಬಾದ್ ಪೊಲೀಸ್‌ ಠಾಣೆಗೆ ಶರಣಾಗಿದ್ದಾರೆ. ಬಂಧನಕ್ಕೊಳಗಾಗಿರುವ ಅವರು ಜೈಲಿನಲ್ಲಿದ್ದು, ಅವರನ್ನು ಕಾಂಗ್ರೆಸ್‌ ಅಮಾನತು ಮಾಡಿದೆ.

ವಿವರ: ಮೈಸೂರಿನಲ್ಲಿ ಜುಲೈ 3ರಂದು ಸಿದ್ದಿಕ್ಕಿ ನಗರದಲ್ಲಿ ಆಯೋಜಿಸಿದ್ದ ಇಫ್ತಾರ್‌ ಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಸರ್ಕಾರಿ ಅತಿಥಿಗೃಹಕ್ಕೆ ಬಂದಿದ್ದ ಮುಖ್ಯಮಂತ್ರಿಯನ್ನು ಜಿಲ್ಲಾಧಿಕಾರಿ ಸಿ.ಶಿಖಾ ಶಿಷ್ಟಾಚಾರದಂತೆ ಸ್ವಾಗತಿಸಿದ್ದರು. ಯಾದಗಿರಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಮೈಸೂರು ತಹಶೀಲ್ದಾರ್‌ ನವೀನ್‌ ಜೋಸೆಫ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸುವ ಸಂಬಂಧ ಕೆ.ಮರೀಗೌಡ ಹಾಗೂ ಜಿಲ್ಲಾಧಿಕಾರಿ ಶಿಖಾ ನಡುವೆ ವಾಗ್ವಾದ ನಡೆದಿತ್ತು.

ಮುಖ್ಯಮಂತ್ರಿ ಇಫ್ತಾರ್‌ ಕೂಟಕ್ಕೆ ತೆರಳಿದ ಬಳಿಕ ಜಿಲ್ಲಾಧಿಕಾರಿ ಕಾರನ್ನು ಮರೀಗೌಡ ಬೆಂಬಲಿಗರು ಅಡ್ಡಹಾಕಿದ್ದರು. ಮಹಿಳಾ ಅಧಿಕಾರಿಗೆ ಏಕವಚನದಲ್ಲಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಸಂಬಂಧ ನಜರಬಾದ್‌ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು.

11 ಐಎಎಸ್‌ ಅಧಿಕಾರಿಗಳ ವರ್ಗಾವಣೆ : ವರ್ಗಾವಣೆಗೊಂಡವರ ಪಟ್ಟಿ

* ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ಎನ್‌. ಅಜಯ್‌ ನಾಗಭೂಷಣ್‌ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರನ್ನಾಗಿ ವರ್ಗ ಮಾಡಲಾಗಿದೆ.

* ಯಾದಗಿರಿ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

* ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್‌ ಚೌಧರಿ ಅವರನ್ನು ಯಾದಗಿರಿ ಜಿಲ್ಲಾದಿಕಾರಿಯಾಗಿ ವರ್ಗಾಯಿಸಲಾಗಿದೆ.

* ಹುಬ್ಬಳ್ಳಿ–ಧಾರವಾಡದ ಬಿಆರ್‌ಟಿಎಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಮಣದೀಪ್‌ ಚೌಧರಿ ಅವರನ್ನು ಕಲಬುರ್ಗಿಯ ಡಿಪಿಐನ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.

* ಎಂ ನರೇಗ ಯೋಜನೆಯ ಆರ್‌ಡಿ ಮತ್ತು ಪಿಆರ್‌ ವಿಭಾಗದ ಮುಖ್ಯಾಧಿಕಾರಿ ಎಚ್‌.ಆರ್‌. ಮಹಾದೇವ್‌ ಅವರನ್ನು ಬೆಂಗಳೂರಿನ ದಕ್ಷಿಣ ವಲಯದ ಕಮರ್ಷಿಯಲ್‌ ಟ್ಯಾಕ್ಸ್‌ (ಎನ್‌ಫೋರ್ಸ್‌ಮೆಂಟ್‌) ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

* ಹಟ್ಟಿ ಚಿನ್ನದ ಗಣಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌. ಜಿಯಾವುಲ್ಲಾ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

* ಬೆಂಗಳೂರಿನ ದಕ್ಷಿಣ ವಲಯದ ಕಮರ್ಷಿಯಲ್‌ ಟ್ಯಾಕ್ಸ್‌ (ಎನ್‌ಫೋರ್ಸ್‌ಮೆಂಟ್‌) ಹೆಚ್ಚುವರಿ ಆಯುಕ್ತ ಕೆ.ಬಿ. ಶಿವಕುಮಾರ್‌ ಅವರನ್ನು ವಿಜಯಪುರ ಜಿಲ್ಲಾಧಿಕಾರಿ ವರ್ಗಾಯಿಸಲಾಗಿದೆ.

* ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಹೆಚ್ಚುವರಿ ಆಯುಕ್ತ ಎಂ.ಜಿ. ಹಿರೇಮಠ್‌ ಅವರನ್ನು ಹುಬ್ಬಳ್ಳಿ–ಧಾರವಾಡದ ಬಿಆರ್‌ಟಿಎಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

Comments are closed.