ಮಂಗಳೂರು, ಆಗಸ್ಟ್ 7 : ಇತಿಹಾಸ ಪ್ರಸಿದ್ಧ ಸಸಿಹಿತ್ಲು ಭಗವತಿ ದೇವಳಕ್ಕೆ ಕಳ್ಳರು ಲಗ್ಗೆಹಾಕಿ ಕಳ್ಳತನಕ್ಕೆ ವಿಫಲಯತ್ನ ನಡೆಸಿದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ದೇವಳದ ಕಂಪೌಂಡ್ ಹಾರಿ ಒಳಪ್ರವೇಶಿಸಿದ್ದ ಕಳ್ಳರು ದೇವಳದ ಮುಖ್ಯ ದ್ವಾರ ಒಡೆದು ಒಳಪ್ರವೇಶಿಸಿದ್ದರೂ ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗದೇ ವಾಪಸ್ ಆಗಿರುವುದು ದೇವಳದೊಳಗೆ ಅಳವಡಿಸಿದ ಸಿ.ಸಿ.ಕೆಮರಾದಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು, ಬೆರಳಚ್ಚು ಹಾಗೂ ಶ್ವಾನದಳ ಆಗಮಿಸಿ ತನಿಖೆ ನಡೆಸುತ್ತಿದೆ.
ಸಸಿಹಿತ್ಲು ದೇವಳಕ್ಕೆ ತಡರಾತ್ರಿ 1:45ರ ಸುಮಾರಿಗೆ ರೈನ್‌ಕೋಟ್ ಹಾಗೂ ಮುಸುಕು ಹಾಕಿದ್ದ ಇಬ್ಬರು ಕಳ್ಳರು ಪ್ರವೇಶಿಸಿದ್ದಾರೆ. ಗೋಪುರ ಹಾರಿ ಒಳಪ್ರವೇಶಿಸಿದ್ದು ಒಳಗಡೆ ಅಳವಡಿಸಲಾಗಿರುವ ಸಿ.ಸಿ.ಕೆಮರಾದಲ್ಲಿ ದಾಖಲಾಗಿದೆ.
ಅಲ್ಲಿಂದ ಮುಂದೆ ದೇವಳದ ಮುಖ್ಯ ದ್ವಾರದ ಕಬ್ಬಿಣದ ಚಿಲಕ ಒಡೆದು ಬಾಗಿಲಿನ ಮಧ್ಯದ ಸಣ್ಣ ಜಾಗದಲ್ಲಿ ಒಬ್ಬಾತ ಒಳನುಸುಳಿದ್ದರೆ ಇನ್ನೊಬ್ಬಾತ ದಪ್ಪ ಶರೀರ ಹೊಂದಿದ್ದ ಕಾರಣ ಒಳಪ್ರವೇಶಿಸಲು ಅಸಮರ್ಥನಾಗಿದ್ದಾನೆ. ಈ ವೇಳೆ ಒಳಗಿನ ಸಿ.ಸಿ. ಕೆಮರಾ ಕಂಡುಬಂದಿದ್ದು, ಅದನ್ನು ಹಾನಿಗೆಡವಲು ಯತ್ನಿಸಿದ್ದಾರೆ. ಕೊನೆಗೆ ಅದರ ವೈರ್ ಎಟುಕದೇ ಇದ್ದಾಗ ಟಾರ್ಚ್ ಲೈಟ್ ಅನ್ನು ಅದರ ಮೇಲೆಯೇ ಬಿಟ್ಟು ದೃಶ್ಯ ಚಿತ್ರೀಕರಣವಾಗದಂತೆ ಮಾಡಿದ್ದಾರೆ.
ಗರ್ಭಗುಡಿಯ ಬಾಗಿಲನ್ನು ತೆರೆಯಲು ವಿಫಲಯತ್ನ ನಡೆಸಿದ ಕಳ್ಳರು ಕೊನೆಗೆ ಅಲ್ಲಿಂದ ತರಾತುರಿಯಲ್ಲಿ ವಾಪಸ್ ಆಗಿರುವುದು ಸಿ.ಸಿ. ಕೆಮರಾದಲ್ಲಿ ದಾಖಲಾಗಿದೆ.
ಇಂದು ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿ.ಸಿ. ಕೆಮರಾ ಫುಟೇಜ್ ಅನ್ನು ಪರಿಶೀಲನೆ ನಡೆಸಿದ್ದಾರೆ. ಅಂತಾರಾಜ್ಯ ಕಳ್ಳರು ಇವರಾಗಿರಬೇಕೆಂದು ಅಂದಾಜಿಸಲಾಗಿದ್ದು, ದೇವಳದ ಹೊರಗೂ ಕಳ್ಳರು ಕಾದಿರಬೇಕೆಂದು ಶಂಕಿಸಲಾಗಿದೆ. ಬೆರಳಚ್ಚು ದಳ, ಶ್ವಾನದಳ ತಪಾಸಣೆ ನಡೆಸಿದೆ.
Comments are closed.