
ವರದಿ/ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅಗಸ್ಟ್.06: ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು ಹಾಗೂ ದುಬ್ಯಾ ದೇವಾಡಿಗರ ಸಂಘ ಇವರ ಸಂಯುಕ್ತ ಅಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಶನಿವಾರ ನಗರದ ಮಣ್ಣಗುಡ್ಡೆ, ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಸಮಾಜ ಭವನದಲ್ಲಿ ನಡೆಯಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ ಮರೋಳಿ ಅವರು ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ವೇಳೆ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಮುಂದೆ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಿ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದರು.
ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ. ಎ. ಸದಾನಂದ ಶೆಟ್ಟಿ ಅವರು ಮಾತನಾಡಿ, ದೇವಾಡಿಗ ಸಮಾಜ ಭಾಂದವರು ಒಟ್ಟು ಸೇರಿ ತಮ್ಮ ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ. ಇಂತಹ ಉತ್ತಮ ಕಾರ್ಯಗಳಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ದುಬ್ಯಾಯ ಖ್ಯಾತ ಉದ್ಯಮಿ, ಕೊಡುಗೈ ದಾನಿ, ಪ್ರಸಿದ್ದ ಗಾಯಕರೂ ಆಗಿರುವ ದುಬಾಯಿ ಆಕ್ಮೆ ಬಿಲ್ಡಿಂಗ್ ಎಂಡ್ ಮೆಟಿರಿಯಲ್ಸ್ ಟ್ರೆಂಡಿಂಗ್ ಸಂಸ್ಥೆಯ ಆಡಳಿತಾ ನಿರ್ದೇಶಕ ಹಾಗೂ ದುಬ್ಯಾ ದೇವಾಡಿಗರ ಸಂಘದ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಶೇರಿಗಾರ್ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೇವೆ ಸಲ್ಲಿಸಬೇಕು ಹಾಗೂ ಬಡ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಸಂಕಲ್ಪ ತೊಟ್ಟು ನಾನು ಅಂದಿನಿಂದ ಇಂದಿನವರೆಗೂ ಓದಿನಲ್ಲಿ ಆಶಕ್ತಿ ಇರುವ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇನೆ. ಈ ರೀತಿ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗ ಬೇಕು ಎಂದು ಹೇಳಿದರು.
ಇಂದು ನಾವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನ ತುಂಬಾ ಕಡಿಮೆಯಾಗಬಹುದು. ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಪ್ರಯೋಜವಾಗದಿರ ಬಹುದು. ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲಾ ಸಮಾಜ ಬಾಂಧವರು ಒಟ್ಟು ಸೇರಿ ಒಂದೇ ಸ್ಥಳದಲ್ಲಿ ಇಂತಹ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಗ್ಲೋಬಲ್ ಫಂಡ್ ರಚನೆ ಮಾಡಬೇಕು ಈ ಕೆಲಸ ಜಾಗತೀಕ ಮಟ್ಟದಲ್ಲಿ ನಡೆಯ ಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ಲಭಿಸಲು ಸಾಧ್ಯ ಎಂದು ಹೇಳಿದರು.

ಉನ್ನತ ಶಿಕ್ಷಣದ ಬಳಿಕ ಉದ್ಯೋಗದಲ್ಲಿ ತೊಡಗಿಕೊಂಡು ಇಂದಿನ ಅಧುನಿಕ ಸಂಸ್ಕೃತಿಗೆ ಮರುಳಾಗಿ ಯಾವತ್ತು ನಮ್ಮ ಹೆತ್ತವರನ್ನು ಮರೆಯ ಬಾರದು.ಇಂದು ಇಂಟರ್‌ನೆಟ್ ಮೂಲಕ ಎಲ್ಲವನ್ನು ಡೌನ್ ಲೋಡ್ ಮಾಡಬಹುದು. ಅದರೆ ತಂದೆ ತಾಯಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ತಂದೆ ತಾಯಿಯನ್ನು ಉತ್ತಮ ರೀತಿಯಲ್ಲಿ ಪೋಷಿಸ ಬೇಕು ಎಂದು ಹರೀಶ್ ಶೇರಿಗಾರ್ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಹಿಂದೆಲ್ಲಾ ಬಾರೀ ಕಷ್ಟದ ಪರಿಸ್ಥಿತಿ ಇತ್ತು. ಆದರೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳು ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವುದರ ಜೊತೆಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು. ಮಕ್ಕಳ ಸಾಧನೆಗೆ ಬಡತನ ಅಡ್ಡಿ ಬಂದರೆ ಅಂತಾಹ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಲು ನಮ್ಮ ಸಂಘ ಸದಾ ಸಿದ್ದವಿದೆ. ನಮ್ಮ ಸಮಾಜದ ಪ್ರತಿಭಾನ್ವಿತ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ಈ ರೀತಿ ಸ್ಕಾಲರ್ ಶಿಪ್ ನೀಡಲು ಅನುಕೂಲವಾಗುವಂತೆ ನಮ್ಮ ಸಮಾಜದ ಮೇರು ಸ್ಥಾನದಲ್ಲಿರುವ ವ್ಯಕ್ತಿಗಳು ನಮ್ಮ ಸಮಾಜಕ್ಕೆ ಹೆಚ್ಚು ಹೆಚ್ಚು ಸಹಾಯ ಹಸ್ತ ನೀಡುವ ಮೂಲಕ ನಮ್ಮ ಸಂಘಟನೆಯನ್ನು ಬಲಪಡಿಸ ಬೇಕು ಎಂದು ಹರೀಶ್ ಶೇರಿಗಾರ್ ಸಲಹೆ ನೀಡಿದರು.

ಮುಖ್ಯ ಅತಿಥಿ ದುಬ್ಯಾ ದೇವಾಡಿಗರ ಸಂಘದ ಅಧ್ಯಕ್ಷ ಶ್ರೀ ದಿನೇಶ್ ಕುಮಾರ್ ಅವರು ಮಾತನಾಡಿ, ದುಬೈ ದೇವಾಡಿಗ ಸಂಘ ಸಮಾಜ ಭಾಂದವರ ಏಳಿಗಾಗಿ ಹಮ್ಮಿಕೊಂಡಂತಹ ಕಾರ್ಯಗಳ ಬಗ್ಗೆ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಮುಂಬಾಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿಶ್ವ ತುಳು ಒಕ್ಕೂಟದ ಅಧ್ಯಕ್ಷರಾದ ಶ್ರೀ ಧರ್ಮಪಾಲ.ಯು.ದೇವಾಡಿಗ ಅವರು ಮಾತನಾಡಿ,ನಮ್ಮ ಸಮಾಜದ ಹೆಚ್ಚು ಹೆಚ್ಚು ಮಕ್ಕಳು ಓದಿ ವಿದ್ಯಾವಂತರಾಗಿ ಉನ್ನತ ವಿದ್ಯಾಭ್ಯಾಸ ಪಡೆದು ಶ್ರೇಷ್ಠ ಸ್ಥಾನಮಾನ ಪಡೆಯಬೇಕು. ಹಾಗಾದಾಗ ಮಾತ್ರ ನಮ್ಮ ಈ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ದೇವಾಡಿಗ ಸಮಾಜದ ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ತುಂಬಾ ಮಂದಿಗೆ ಪ್ರಯೋಜನವಾಗದಿದ್ದರೂ, ಇದರಿಂದ ಪ್ರಯೋಜನ ಪಡೆಯುವ ಕೆಲವೊಂದು ಮಕ್ಕಳ ಏಳಿಗೆಯಿಂದ ಇತರ ಕೆಲವು ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕೆಂಬುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿವಮೊಗ್ಗ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಬಿ.ಎಸ್.ಶೇರಿಗಾರ್ ಅವರು ಹೇಳಿದರು.

ಶಿಕ್ಷಣಕ್ಕೆ ವಿಪುಲ ಅವಕಾಶವಿರುವ ಈ ಸಂದರ್ಭದಲ್ಲಿ ಪೋಷಕರು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್. ಎಲ್.ಸಿ ಬಳಿಕ ಕೂಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಂಘ – ಸಂಸ್ಥೆಗಳು ಮುಂದೆ ಬರಬೇಕು ಎಂದು ಅವರು ಹೇಳಿದರು.

ಇನ್ನೋರ್ವ ಅತಿಥಿ ಮಂಗಳೂರಿನ ಎಸ್.ಡಿ.ಎಂ ಉದ್ಯಮ ಆಡಳಿತ ಕಾಲೇಜಿನ ನಿರ್ದೇಶಕ ಡಾ.ದೇವರಾಜ್ ಅವರು ಮಾತನಾಡಿ, ಉತ್ತಮ ಗುಣ ನಡತೆಯನ್ನು ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಪಡೆಯಲು ಸಾಧ್ಯ.ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ, ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ನನ್ನಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ತಾನು ನೀಡುವುದಾಗಿ ಹೇಳಿದ ಅವರು, ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ನೆರವು ಅಗತ್ಯ ಬಿದ್ದಲ್ಲಿ ಇಲ್ಲಿ ವೇದಿಕೆಯಲ್ಲಿರುವ ದಾನಿಗಳ ನೆರವು ಪಡೆದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ಕೊಡುಗೆ :
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ (ಟಾಪರ್) ಗಳಿಸುವ ಮೂಲಕ ವಿಶಿಷ್ಠ ಸಾಧನೆಗೈದ ಕುಂದಾಪುರದ ವಿನಯ ಅಣ್ಣಪ್ಪ ದೇವಾಡಿಗ ಇವರಿಗೆ ಅವರ ಮುಂದಿನ ವಿದ್ಯಾಭ್ಯಾಸದ ಅನುಕೂಲತೆಗಾಗಿ ಹರೀಶ್ ಶೇರಿಗಾರ್ ಅವರು ತಮ್ಮ ವಯಕ್ತಿಕ ನೆಲೆಯಲ್ಲಿ ಲ್ಯಾಪ್‌ಟಾಪ್ ನೀಡಿ ಗೌರವಿಸಿದರು. ಹರೀಶ್ ಶೇರಿಗಾರ್ ಅವರು ಪ್ರತೀ ವರ್ಷ ಸಂಘದ ವತಿಯಿಂದ ನಡೆಯುವ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳ ಹೆಚ್ಚಿನ ಶಿಕ್ಷಣಕ್ಕಾಗಿ, ಸಂಘಕ್ಕೆ ತಮ್ಮ ವಯಕ್ತಿಕ ನೆಲೆಯಲ್ಲಿ ಹೆಚ್ಚಿನ ಸಹಾಯಧನವನ್ನು ನೀಡುತ್ತಾ ಬಂದಿದ್ದಾರೆ. ಮಾತ್ರವಲ್ಲದೇ ಪ್ರತೀ ವರ್ಷ ಉತ್ತಮ ಸಾಧನೆ ಮಾಡಿದ ಓರ್ವ ವಿದ್ಯಾರ್ಥಿಯನ್ನು ಗುರುತಿಸಿ ಲ್ಯಾಪ್‌ಟಾಪ್ ನೀಡಿ ಗೌರವಿಸುತ್ತಿದ್ದಾರೆ.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರು ಲಕ್ಷಕ್ಕೂ ಹೆಚ್ಚು ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತ್ತು.

ಸಂಘದ ಉಪಾಧ್ಯಕ್ಷರಾದ ರತ್ನಾಕರ್ ದೇವಾಡಿಗ, ಪ್ರ.ಕಾರ್ಯದರ್ಶಿ ಎಂ.ದೇವದಾಸ್, ಕೋಶಾಧಿಕಾರಿ ಶಶಿಧರ್ ಮೊಯ್ಲಿ, ಸಂಘಟಾನ ಕಾರ್ಯದರ್ಶಿ, ಯಶವಂತ ದೇವಾಡಿಗ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಕಲ್ಯಾಣ್ ಪುರ್, ಯುವ ಸಂಘಟನೆಯ ಅಧ್ಯಕ್ಷ್ಗ ಯಂ. ಎಚ್. ಪ್ರಶಾಂತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಭಾಶ್‌ಚಂದ್ರ ಕಣ್ವ ತೀರ್ಥ ಸ್ವಾಗತಿಸಿದರು. ವಿಜೇಶ್ ದೇವಾಡಿಗ ಮಂಗಳಾದೇವಿ ಹಾಗೂ ಯಶಸ್ವಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ರತ್ನಾಕರ್ ದೇವಾಡಿಗ ವಂದಿಸಿದರು.
ವರದಿ/ ಚಿತ್ರ : ಸತೀಶ್ ಕಾಪಿಕಾಡ್
Comments are closed.