ಕರಾವಳಿ

ಸಿದ್ದಾಪುರ: ಶಿಕ್ಷಕರ ವರ್ಗಾವಣೆ ವಿಚಾರ; ಡಿಡಿಪಿಐ ಭೇಟಿ; ಮತ್ತೆ ಆರಂಭವಾದ ಪಾಠ-ಪ್ರವಚನ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಸಿದ್ದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 220 ಮಕ್ಕಳಿದರೂ ಹೆಚ್ಚುವರಿಯಲ್ಲಿ ಶಿಕ್ಷಕರನ್ನು ವರ್ಗಾವಣೆಗೊಳಿಸಿರುವುದನ್ನು ಖಂಡಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕ ಪ್ರತಿಭಟನೆ ಮೂರು ದಿನ ನಡೇದಿದ್ದು ನಾಲ್ಕನೇ ದಿನವಾದ ಶುಕ್ರವಾರವೂ ಬಂದ್ ಗೆ ಕರೆಕೊಟ್ಟ ಹಿನ್ನೆಲೆ ಶಾಲೆಗೆ ಶಿಕ್ಷಣ ಇಲಾಖೆಯ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಭೇಟಿ ನೀಡಿ ಫೋಷಕರ ಮತ್ತು ಎಸ್.ಡಿ.ಎಂ.ಸಿ.ಯವರ ಮನವೊಲಿಸುವ ಕಾರ್ಯ ಮಾಡಿದರು.

Siddapura_School_Problem (1) Siddapura_School_Problem (2) Siddapura_School_Problem (3) Siddapura_School_Problem (4) Siddapura_School_Problem (5) Siddapura_School_Problem (6) Siddapura_School_Problem (7) Siddapura_School_Problem (8) Siddapura_School_Problem (9) Siddapura_School_Problem (10) Siddapura_School_Problem (11)

ಶುಕ್ರವಾರ ಬೆಳಿಗ್ಗೆ ಸಿದ್ದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಡಿಡಿಪಿಐ ದಿವಾಕರ ಶೆಟ್ಟಿ ಅವರು ಪೋಷಕರು ಮತ್ತು ಎಸ್.ಡಿ.ಎಂ.ಸಿ ಸಭೆ ಕರೆದು ಚರ್ಚೆ ನಡೆಸಿದರು. ಈ ವೇಳೆ ವಸ್ತುಸ್ಥಿತಿಯನ್ನು ಪೋಷಕರಿಗೆ ಹಾಗೂ ಎಸ್.ಡಿಎಂ.ಸಿ.ಯವರಿಗೆ ಮನದಟ್ಟು ಮಾಡುವ ಪ್ರಯತ್ನ ನಡೆಯಿತು. ಇಂಗ್ಲೀಷ್ ತರಗತಿಗಳನ್ನು ಸೇರಿದಂತೆ ೯ ತರಗತಿಗಳು ನಡೆಯುವ ಈ ಶಾಲೆಯಲ್ಲಿನ ಹೆಚ್ಚುವರಿಯಲ್ಲಿ ಶಿಕ್ಷಕರನ್ನು ವರ್ಗಾವಣೆಗೊಳಿಸಿದರೆ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ, ವರ್ಷಂಪ್ರತಿ ಈ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಏರುತ್ತಿದ್ದು ಇಲಾಖೆ ಇಂತಹ ಕನ್ನಡ ಶಾಲೆಗಳನ್ನು ಉಳಿಸಬೇಕು. ಶಿಕ್ಷಕರನ್ನು ವರ್ಗಾವಣೆಗೊಳಿಸುವ ಆದೇಶದಿಂದ ಆತಂಕಗೊಂಡು ಕಳೆದ ಮೂರು ದಿನಗಳಿಂದ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪೋಷಕರು ತಿಳಿಸಿದರು. ಸುಮಾರು ೧ ಗಂಟೆಗಳ ಕಾಲ ನಡೆದ ಚರ್ಚೆ ಹಾಗೂ ಸಭೆಯ ಬಳಿಕ ಶಾಲೆಯ ಬೀಗ ತೆರೆದು ಪಾಠವನ್ನು ನಡೆಸುವ ತೀರ್ಮಾನಕ್ಕೆ ಬರಲಾಯಿತು.

ಬಳಿಕ ಡಿಡಿಪಿಐ ದಿವಾಕರ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್.ಟಿ.ಇ. ನಿಯಮದನ್ವಯ ಹೆಚ್ಚುವರಿ ಪ್ರಕ್ರಿಯೆಯ ನಿಯಮದಡಿಯಲ್ಲಿ ಬರುವ ಕಾರಣ ವಿದ್ಯಾರ್ಥಿ ಸಂಖ್ಯೆಯನ್ನು ಅನುಸರಿ ಆಗುವ ಹೆಚ್ಚುವರಿ ಪ್ರಕ್ರಿಯೆಯಾಗಿದ್ದು ಈ ಹಂತದಲ್ಲಿ ಅದರ ಮಾರ್ಪಾಡು ಸಾಧ್ಯವಿಲ್ಲ. ಇಂಗ್ಲೀಷ್ ಮಾಧ್ಯಮ ಇರುವ ಶಾಲೆಯಲ್ಲಿ ಹೆಚ್ಚುವರಿಯಾದ ಶಿಕ್ಷಕರನ್ನು ನಿಯೋಜಿಸುತ್ತೇವೆ ಎಂದು ಇಲಾಖಾಧಿಕಾರಿಗಳು ಆಶ್ವಾಸನೆ ನೀಡಿರುವುದರಿಂದಾಗಿ ಹೆಚ್ಚುವರಿ ಶಿಕ್ಷರನ್ನು ಅತೀ ಶೀಘ್ರದಲ್ಲಿ ಈ ಶಾಲೆಗೆ ನಿಯೋಜಿಸಲಾಗುತ್ತದೆ ಎಂದರು.

ತಾ.ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ ಮಾತನಾಡಿ, ಮೂರು ದಿನಗಳ ಪ್ರತಿಭಟನೆಗೆ ಓಗೊಟ್ಟು ಸಿದ್ದಾಪುರ ಶಾಲೆಗೆ ಡಿಡಿಪಿಐ ಅವರು ಆಗಮಿಸಿ ಇಲ್ಲಿನ ಸಮಸ್ಯೆಗಳನ್ನು ಆಲಿಸಿ ಅದರ ಬಗ್ಗೆ ಸಮಜಾಯಿಷಿ ನೀಡಿ ಮುಂದಿನ ೧೫ ದಿನಗಳಲ್ಲಿ ಈ ಶಾಲೆಗೆ ಹೆಚ್ಚುವರಿಯಾಗಿ ಇಬ್ಬರು ಶಿಕ್ಷಕರನ್ನು ಇಲಾಖಾ ಮಟ್ಟದಲ್ಲಿ ನೇಮಿಸುವ ಪ್ರಯತ್ನ ಮಾಡುವ ಭರವಸೆ ನೀಡಿದ್ದು ಇದರಿಂದಾಗಿ ಪ್ರತಿಭಟನೆ ಕೈಬಿಟ್ಟು ಶಾಲೆಯ ಬೀಗ ತೆರವು ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ, ತಾ.ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಸಿದ್ದಾಪುರ ಗ್ರಾ. ಪಂ. ಉಪಾಧ್ಯಕ್ಷ ಭರತ್ ಕಾಮತ್, ಸದಸ್ಯರಾದ ಕೃಷ್ಣ ಪೂಜಾರಿ, ಗೋಪಾಲ ಶೆಟ್ಟಿ, ಶೇಖರ ಕುಲಾಲ, ಪ್ರದೀಪ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಕುಲಾಲ ಕೂಡ್ಗಿ, ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಪ್ರಮುಖರಾದ ಗೋಪಾಲ ಕಾಂಚನ್, ಭಾಸ್ಕರ ಶೆಟ್ಟಿ, ಭೋಜ ಶೆಟ್ಟಿ, ಎಚ್. ಸುಧಾಕರ ಶೆಟ್ಟಿ, ಶಾಲಾ ಮಕ್ಕಳು ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.
ಸುಮಾರು ಮೂರು ದಿನಗಳಿಂದ ಶಾಲೆಯಲ್ಲಿ ಪಾಠಗಳು ನಡೆಯದಿದ್ದು ಶುಕ್ರವಾರದಿಂದ ಮಕ್ಕಳು ಪಾಠ-ಪ್ರವಚನ ಎಂದಿನಂತೆ ಆರಂಭಗೊಂಡಿದೆ.

Comments are closed.