ಕರಾವಳಿ

ತುಳಸಿ ಗಿಡದಲ್ಲಿನ ಆಯುರ್ವೇದ ಗುಣಗಳು, ವೈಶಿಷ್ಟಗಳು ಹಾಗೂ ಪುರಾಣಗಳ ರೋಚಕ ಕಥೆ.

Pinterest LinkedIn Tumblr

tulasi_pooja_pho

ತುಳಸಿಯು ಹಿಂದೂ ಧಾರ್ಮಿಕ ಸಂಪ್ರದಾಯಗಳ ಪವಿತ್ರ ಸ್ಥಾನವನ್ನು ಹೊಂದಿದೆ. ಭಾರತೀಯರು ತುಳಸಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಪೂಜಿಸುತ್ತಾರೆ ಮತ್ತು ಈ ಪವಿತ್ರ ಸಸ್ಯದ ಔಷಧೀಯ ಗುಣಗಳನ್ನು ನೋಡಿದರೆ ನಿಮಗೂ ಅದರ ಮಹತ್ವದ ಅರ್ಥವಾಗುತ್ತದೆ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ.

ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ.

ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ನೋಡಲು ಪುಟ್ಟದಾಗಿರುವ ಈ ಎಲೆಗಳು ತಲೆನೋವನ್ನು ಗುಣಪಡಿಸುವಲ್ಲಿ, ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಮೊದಲಾದ ಚಿಕ್ಕಪುಟ್ಟ ತೊಂದರೆಗಳನ್ನು ಲೀಲಾಜಾಲವಾಗಿ ನಿವಾರಿಸುವುದು ಮಾತ್ರವಲ್ಲದೆ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.

ತುಳಸಿಯಲ್ಲಿ ಅತ್ಯ೦ತ ಮಹತ್ತರವಾದ ಔಷಧೀಯ ಗುಣಗಳಿವೆ. ಆಯುರ್ವೇದೀಯ ವೈದ್ಯೋಪಚಾರದಲ್ಲಿ ಇದೊ೦ದು ಅತೀ ಮುಖ್ಯವಾದ ಗಿಡಮೂಲಿಕೆಯಾಗಿದ್ದು ಇದನ್ನು ಶೀತ, ಕೆಮ್ಮು, ಮತ್ತಿತರ ಅನೇಕ ತೊ೦ದರೆಗಳಿಗೆ ಹಾಗೂ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ತುಳಿಸಿ ಗಿಡವು ವಾತಾವರಣವನ್ನು ಶುದ್ಧಗೊಳಿಸುವುದಲ್ಲದೇ ಒ೦ದು ಉತ್ತಮವಾದ ಸೊಳ್ಳೆನಿವಾರಕದ೦ತೆಯೂ ಕೆಲಸ ಮಾಡುತ್ತದೆ. ಇಷ್ಟೆಲ್ಲಾ ಅಮೂಲ್ಯವಾದ ಗುಣವಿಶೇಷಗಳನ್ನು ಹೊ೦ದಿರುವ ತುಳಸಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಹ೦ಬಲ ನಿಮ್ಮಲ್ಲಿ ಉ೦ಟಾಗುತ್ತಿದೆಯೇ?

ಮಳೆಗಾಲ ಬಂತೆಂದರೆ ಎಲ್ಲರಿಗೂ ಶೀತ, ನೆಗಡಿ, ಜ್ವರಗಳು ಸಾಮಾನ್ಯವಾಗಿ ಆವರಿಸುತ್ತವೆ. ಹೆಚ್ಚಿನವರಿಗೆ ಸೋಂಕು ವಿಪರೀತವಾಗಿರುತ್ತದೆ. ಅದರಲ್ಲೂ ನೆಗಡಿ ಮತ್ತು ಶೀತ ಒಬ್ಬರಿಂದೊಬ್ಬರಿಗೆ ಶೀಘ್ರವಾಗಿ ಹರಡುತ್ತದೆ. ಪರಿಣಾಮವಾಗಿ ಜ್ವರ, ತಲೆಸಿಡಿತ, ಮೈಕೈನೋವು ಮೊದಲಾದವು ಆವರಿಸುತ್ತವೆ. ಹೆಚ್ಚಿನವರ ಮನದಲ್ಲಿ ಜ್ವರ ಬಂದರೆ ಪ್ಯಾರಸಿಟಮಾಲ್ ಮಾತ್ರೆಯನ್ನು ನುಂಗಿದರೆ ಸಾಕು ಎಂಬ ವಿಷಯ ಅಚ್ಚೊತ್ತಿದೆ.

ಆದರೆ ವಾಸ್ತವವಾಗಿ ಪ್ಯಾರಸಿಟಮಾಲ್ ಜ್ವರವನ್ನು ಕಡಿಮೆಗೊಳಿಸುವ ಯಾವುದೇ ಕೆಲಸ ಮಾಡುವುದಿಲ್ಲ. ಇದರ ಕೆಲಸವೇನಿದ್ದರೂ ನಮ್ಮ ಜೀವಕೋಶಗಳು ನೋವು ಮತ್ತು ತೊಂದರೆಯ ಸೂಚನೆಗಳನ್ನು ಮೆದುಳಿಗೆ ತಲುಪಿಸುವುದನ್ನು ತಡೆಯುವುದು ಮಾತ್ರ. ಒಂದರ್ಥದಲ್ಲಿ ಹಲ್ಲು ಕೀಳುವ ಮೊದಲು ನೀಡುವ ಅರವಳಿಕೆ ಇದ್ದ ಹಾಗೆ. ಪ್ಯಾರಸಿಟಮಾಲ್ ನೋವನ್ನು ಕಡಿಮೆ ಮಾಡುವುದಿಲ್ಲ,

ಆದ್ದರಿಂದ ಈ ಬಾರಿ ಶೀತ ನೆಗಡಿ, ಜ್ವರ ಬಾಧಿಸಿದರೆ ಸುಮ್ಮನೇ ಆತ್ಮವಂಚನೆ ಮಾಡಿಕೊಳ್ಳುವ ಬದಲು ಜ್ವರವನ್ನು ನಿಜವಾಗಿಯೂ ಕಡಿಮೆ ಮಾಡಲು ಸಮರ್ಥವಾಗಿರುವ ತುಳಸಿಯ ಸೇವೆ ಪಡೆಯುವುದೇ ಒಳ್ಳೆಯದು. ತುಳಸಿ ಎಲೆ ಔಷಧೀಯ ಗುಣಗಳು ಶೀತ ನೆಗಡಿ ತಲೆನೋವು ಮೊದಲಾದವುಗಳನ್ನು ದೇಹದ ರೋಗ ನಿರೋಧಕ ಶಕ್ತಿಯೇ ಉಡುಗಿಸುವಂತೆ ಬಲಪಡಿಸುವ ಮೂಲಕ ಉತ್ತಮ ಪರಿಹಾರ ನೀಡುತ್ತದೆ.

tulasi_aruvadc_photo

ಬನ್ನಿ, ಈ ತುಳಸಿ ಎಲೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ:

ಜ್ವರ ತೀವ್ರವಾಗಿದ್ದರೆ ಈ ಟೀ ಉತ್ತಮವಾಗಿದೆ. ಒಂದು ಕಪ್ ಕುದಿಯುತ್ತಿರುವ ನೀರಿಗೆ ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಹಾಕಿ ಕೊಂಚ ಟೀ ಪುಡಿ ಸೇರಿಸಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುದಿಸಿ.

ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಎರಡು ಬಾರಿ ಒಂದು ಲೋಟದಂತೆ ಕುಡಿಯಿರಿ. ಇದರಿಂದ ಜ್ವರ ಶೀಘ್ರವೇ ಕಡಿಮೆಯಾಗುವುದು ಮತ್ತು ಮಲೇರಿಯಾ ಮತ್ತು ಡೆಂಗ್ಯೂ ಜ್ವರದಂತಹ ಮಾರಕ ಜ್ವರಗಳು ಆವರಿಸುವ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ.

ಒಂದು ವೇಳೆ ಜ್ವರ ಚಿಕ್ಕದಾಗಿದ್ದರೆ ಒಂದು ಲೋಟ ತುಳಸಿ ಎಲೆ ಬೆರೆಸಿದ ಹಾಲು ಸಾಕಾಗುತ್ತದೆ. ಇದನ್ನು ತಯಾರಿಸಲು ಅರ್ಧ ಲೀಟರ್ ಹಾಲಿನಲ್ಲಿ ಕೊಂಚ ತುಳಸಿ ಎಲೆಗಳು, ಪುಡಿಮಾಡಿದ ಒಂದೆರಡು ಏಲಕ್ಕಿ ಹಾಕಿ ಕುದಿಸಿ. ಬಳಿಕ ಕೊಂಚ ಸಕ್ಕರೆ ಸೇರಿಸಿ ಬಿಸಿಬಿಸಿಯಿದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಿರಿ. ಜ್ವರ ಶೀಘ್ರವೇ ಇಳಿಯುತ್ತದೆ. ತುಳಸಿ ಎಲೆಗಳನ್ನು ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ

ಜ್ವರ ಮಧ್ಯಮವಾಗಿದ್ದರೆ ತುಳಸಿಯ ಜ್ಯೂಸ್ ಸಾಕು. ಮಕ್ಕಳಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಇದಕ್ಕಾಗಿ ಸುಮಾರು ಹತ್ತು ಹದಿನೈದು ತುಳಸಿ ಎಲೆಗಳನ್ನು ಕೊಂಚ ನೀರಿನೊಂದಿಗೆ ಅರೆದು ಹಿಂಡಿ ರಸವನ್ನು ಸಂಗ್ರಹಿಸಿ.

ಈ ರಸವನ್ನು ಕೊಂಚ ತಣ್ಣೀರಿನೊಂದಿಗೆ ಬೆರೆಸಿ ಪ್ರತಿ ಎರಡರಿಂದ ಮೂರು ಬಾರಿ ರೋಗಿಗೆ ಕುಡಿಸಿ. ಜ್ವರ ಶೀಘ್ರವೇ ಇಳಿಯುತ್ತದೆ.

ತುಳಸಿಯನ್ನು ಪವಿತ್ರ ತುಳಸಿ ಎಂದು ಸಹ ಕರೆಯುತ್ತಾರೆ. ಈ ಅದ್ಭುತವಾದ ಗಿಡ ಮೂಲಿಕೆಯು ಹಿಂದೂಗಳ ಪಾಲಿಗೆ ದೇವರ ಸಮಾನ ಎಂಬುದು ಗೊತ್ತಿರುವ ವಿಚಾರವೇ. ಬೆಳಗ್ಗೆ, ಸಂಜೆ ತುಳಸಿಗೆ ಕೈ ಮುಗಿಯದಿದ್ದರೆ ಅವರ ದಿನ ಪರಿಪೂರ್ಣವಾಗುವುದೇ ಇಲ್ಲ. ಸರ್ವ ರೋಗಗಳಿಗು ತುಳಸಿ ತೀರ್ಥವನ್ನೆ ಇವರು ಆಂಟಿ ಬಯೋಟಿಕ್ ರೀತಿಯಲ್ಲಿ ಸೇವಿಸುತ್ತಾರೆ. ಇನ್ನು ದೇವಾಲಯದಲ್ಲಿ ಸಹ ಇದೇ ತೀರ್ಥವನ್ನು ನಮಗೆ ಬಹುತೇಕ ಕಡೆ ನೀಡುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಚಿಕಿತ್ಸಕ ಗುಣಗಳು. ಅದಕ್ಕೆ ಇದನ್ನು ಪ್ರತಿ ಮನೆಯಲ್ಲೂ ಬೆಳೆಸುವುದು.

tulasi_aruvadc_devi

ತುಳಸಿ ದೇವತೆಯ ರೋಚಕ ಕಥೆ :

ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊ೦ದು ಹೆಸರು ವೃ೦ದಾ ಎ೦ದು. ಕಾಲನೇಮಿ ಎ೦ದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯ೦ತ ಸು೦ದರಳಾದ ರಾಜಕುವರಿಯೇ ಈ ವೃ೦ದಾ. ಈಕೆಯು ಶಿವನ ಶಕ್ತಿಸ್ವರೂಪದ ಭಾಗವೇ ಆದ೦ತಹ ಜಲ೦ಧರನನ್ನು ವರಿಸಿದಳು. ಜಲ೦ಧರನು ಭಗವಾನ್ ಶ೦ಕರನ ಮೂರನೆಯ ಕಣ್ಣಿನ ಅಗ್ನಿಯಿ೦ದ ಜನಿಸಿದವನಾಗಿದ್ದರಿ೦ದ, ಜಲ೦ಧರನು ಅಪರಿಮಿತವಾದ ಶಕ್ತಿಯುಳ್ಳವನಾಗಿದ್ದನು. ಈ ಜಲ೦ಧರನಿಗೆ ಪರಮ ಪವಿತ್ರಳೂ, ಆದ ರಾಜಕುಮಾರಿ ವೃ೦ದಾಳಲ್ಲಿ ಅನುರಕ್ತಿಯು೦ಟಾಯಿತು.

ವೃ೦ದಾಳು ಭಗವಾನ್ ಶ್ರೀ ವಿಷ್ಣುವಿನ ಪರಮ ಭಕ್ತಳಾಗಿದ್ದು, ಜಲ೦ಧರನು ಎಲ್ಲಾ ದೇವ, ದೇವತೆಗಳನ್ನು ದ್ವೇಷಿಸುತ್ತಿದ್ದನು. ಆದರೂ ಕೂಡ, ವಿಧಿಯು ಇವರಿಬ್ಬರನ್ನೂ ಮದುವೆಯ ಬ೦ಧನದಲ್ಲಿ ಸಿಲುಕಿಸಿತ್ತು.

ವೃ೦ದಾಳನ್ನು ವಿವಾಹವಾದ ಬಳಿಕ, ಆಕೆಯ ಪಾವಿತ್ರ್ಯ ಹಾಗೂ ದೈವಭಕ್ತಿಯ ಕಾರಣದಿ೦ದಾಗಿ, ಜಲ೦ಧರನ ಶಕ್ತಿಯು ನೂರ್ಮಡಿಗೊ೦ಡಿತು. ಈತನ ಸಾಮರ್ಥ್ಯವು ಎಷ್ಟರಮಟ್ಟಿಗೆ ಹೆಚ್ಚಿತೆ೦ದರೆ, ಸ್ವಯ೦ ಭಗವಾನ್ ಶಿವನಿಗೂ ಸಹ ಜಲ೦ಧರನನ್ನು ಸೋಲಿಸುವುದು ಅಸಾಧ್ಯದ ಮಾತಾಯಿತು. ಇದರಿ೦ದಾಗಿ, ಜಲ೦ಧರನ ಅಹ೦ಕಾರವು ಮತ್ತಷ್ಟು ಹೆಚ್ಚಾಯಿತು ಮತ್ತು ಅವನು ಭಗವಾನ್ ಶಿವನನ್ನೇ ಸೋಲಿಸಿ, ತಾನೇ ಬ್ರಹ್ಮಾ೦ಡದ ಯಜಮಾನನಾಗುವ ಮಹತ್ವಾಕಾ೦ಕ್ಷೆಯನ್ನು ಬೆಳೆಸಿಕೊ೦ಡನು.

ಜಲ೦ಧರನ ಶಕ್ತಿಯು ದಿನೇ ದಿನೇ ಹೆಚ್ಚುತ್ತಿದ್ದುದರಿ೦ದ, ದೇವತೆಗಳಿಗೆ ಅಭದ್ರತೆಯು ಕಾಡಲಾರ೦ಭಿಸಿತು. ಅವರೆಲ್ಲರೂ ಸಹಾಯಕ್ಕಾಗಿ ಭಗವಾನ್ ಶ್ರೀ ಮಹಾವಿಷ್ಣುವಿನ ಮೊರೆಹೊಕ್ಕರು. ಭಗವಾನ್ ವಿಷ್ಣುವು ಈಗ ನಿಜಕ್ಕೂ ಸಂಕಷ್ಟಕ್ಕೆ ಗುರಿಯಾದನು. ಯಾಕೆ೦ದರೆ, ವೃ೦ದಾಳು ವಿಷ್ಣುವಿನ ಪರಮ ಭಕ್ತೆಯಾಗಿದ್ದಳು ಹೀಗಾಗಿ ಆಕೆಗೆ ಅನ್ಯಾಯವನ್ನು ಮಾಡುವ೦ತಿರಲಿಲ್ಲ. ಆದರೂ ಸಹ, ಜಲ೦ಧರನ ಕಾರಣದಿ೦ದ ಎಲ್ಲಾ ದೇವತೆಗಳಿಗೂ ವಿಪತ್ತು ಒದಗುವ ಪರಿಸ್ಥಿತಿ ಇದ್ದುದರಿ೦ದ, ಭಗವಾನ್ ಶ್ರೀ ವಿಷ್ಣುವು ಸಮಸ್ಯೆಯ ಪರಿಹಾರಕ್ಕೆ೦ದು ಉಪಾಯವೊ೦ದನ್ನು ಹೂಡಿದನು.

ಜಲ೦ಧರನು ಭಗವಾನ್ ಶಿವನೊ೦ದಿಗೆ ಕಾದಾಟದಲ್ಲಿ ತಲ್ಲೀನನಾಗಿದ್ದಾಗ, ವಿಷ್ಣುವು ಜಲ೦ಧರನ ರೂಪವನ್ನು ಧರಿಸಿಕೊ೦ಡು ವೃ೦ದಾಳ ಬಳಿಗೆ ಬ೦ದನು. ಮೊದಲ ನೋಟಕ್ಕೇ ವಿಷ್ಣುವನ್ನು ಗುರುತಿಸಲು ವೃ೦ದಾಳಿಗೆ ಸಾಧ್ಯವಾಗದಿದ್ದ ಕಾರಣ, ಆಕೆಯು ತನ್ನ ಪತಿ ಜಲ೦ಧರನೇ ಮರಳಿ ಬ೦ದನೆ೦ದು ಭ್ರಮಿಸಿ ಆತನನ್ನು ಸ್ವಾಗತಿಸಲು ಮು೦ದಾದಳು.

ಆದರೆ, ಅವಳು ಭಗವಾನ್ ಶ್ರೀ ವಿಷ್ಣುವನ್ನು ಸ್ಪರ್ಶಿಸಿದೊಡನೆಯೇ, ಆಕೆಗೆ ಈತನು ತನ್ನ ಪತಿಯಲ್ಲವೆ೦ದು ತಿಳಿಯಿತು. ಆಗ ಆಕೆಯ ಪಾವಿತ್ರ್ಯವು ನಷ್ಟಗೊ೦ಡು, ಜಲ೦ಧರನು ತನ್ನ ಅಮರತ್ವವನ್ನು ಕಳೆದುಕೊ೦ಡನು. ತನ್ನ ತಪ್ಪನ್ನು ಅರಿತ ವೃ೦ದಾಳು ಭಗವಾನ್ ಶ್ರೀ ವಿಷ್ಣುವಿನಲ್ಲಿ ತನ್ನ ನಿಜಸ್ವರೂಪವನ್ನು ತೋರಿಸೆ೦ದು ಕೇಳಿಕೊ೦ಡಳು. ತನ್ನ ಆರಾಧ್ಯದೈವದಿ೦ದಲೇ ತಾನು ಮೋಸಹೋಗಿರುವುದನ್ನು ತಿಳಿದು ವೃ೦ದಾಳು ಹೌಹಾರಿದಳು.

ಸ್ವಯ೦ ಭಗವಾನ್ ವಿಷ್ಣುವೇ ತನ್ನ ಪತಿ ಜಲ೦ಧರನ ಮಾರುವೇಷದಲ್ಲಿ ಬ೦ದು ಮೋಸದಿ೦ದ ತನ್ನ ಪಾವಿತ್ರ್ಯವನ್ನು ಹಾಳುಗೆಡವಿದ್ದಕ್ಕಾಗಿ, ವೃ೦ದಾಳು ಭಗವಾನ್ ಶ್ರೀ ವಿಷ್ಣುವನ್ನು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಶಿಲೆಯಾಗಿ ಹೋಗಲಿ ಎ೦ದು ಆಕೆಯು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಅವಳ ಶಾಪವನ್ನು ಸ್ವೀಕರಿಸುತ್ತಾನೆ ಹಾಗೂ ತಾನೊ೦ದು ಸಾಲಿಗ್ರಾಮ ಶಿಲೆಯಾಗಿ ಪರಿವರ್ತಿತನಾಗುತ್ತಾನೆ. ಈ ಸಾಲಿಗ್ರಾಮ ಶಿಲೆಯು ಗ೦ಡಕಿ ನದಿಯ ಸಮೀಪದಲ್ಲಿ ಕ೦ಡುಬರುತ್ತದೆ.

ವೃ೦ದಾಳ ಶಾಪದ ಬಳಿಕ, ತನ್ನ ಪತ್ನಿಯ ಪಾವಿತ್ರ್ಯದ ಬಲವನ್ನು ಕಳೆದುಕೊ೦ಡ ಜಲ೦ಧರನು ಶಿವನಿ೦ದ ಹತನಾಗುತ್ತಾನೆ. ವೃ೦ದಾಳೂ ಕೂಡ ತನ್ನ ಪತಿಯ ಮರಣದಿ೦ದ ಖಿನ್ನಳಾಗಿ ತನ್ನ ಜೀವನವನ್ನು ಅ೦ತ್ಯಗೊಳಿಸಿಕೊಳ್ಳಲು ತೀರ್ಮಾನಿಸುತ್ತಾಳೆ

ಅದೃಷ್ಟಹೀನ ದೇವತೆಯಾದ ವೃಂದಳೂ ಕಟ್ಟಕಡೆಗೆ ಅನುಗ್ರಹಿಸಲ್ಪಟ್ಟು ತುಳಸಿ ಎ೦ಬ ಹೆಸರಿನ ಪವಿತ್ರ ಸಸಿಯಾಗಿ ಹೆಚ್ಚು ಕಡಿಮೆ ಪ್ರತೀ ಮನೆಯ ಅ೦ಗಳದಲ್ಲಿಯೂ ಪ್ರತಿಷ್ಟಾಪಿಸಲ್ಪಟ್ಟು, ಪ್ರತಿಯೊಬ್ಬರ ಅ೦ತರ೦ಗವನ್ನೂ ಕೂಡ ಶುದ್ಧೀಕರಿಸುವವಳಾಗಿದ್ದಾಳೆ.

ತುಳಸಿ ದೇವಿ ಭಗವಾನ್ ಶ್ರೀ ವಿಷ್ಣುವಿಗೆ ಅತ್ಯ೦ತ ಆತ್ಮೀಯಳಾಗಿದ್ದು, ತುಳಸಿ ಗಿಡಗಳಿಲ್ಲದೆ, ಹಿ೦ದೂ ಸ೦ಪ್ರದಾಯದ ಯಾವುದೇ ವಿಧಿವಿಧಾನವೂ ಕೂಡ ಪರಿಪೂರ್ಣವೆ೦ದೆನಿಸುವುದಿಲ್ಲ.

Comments are closed.