ಬೆಳ್ತಂಗಡಿ, ಜು.31: ಬೆಳ್ತಂಗಡಿ ಕೋರ್ಟ್ ರಸ್ತೆಯ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿ ಸನಿಹ ವಿವಿಧ ಔಷಧಿಗಳ ರಾಶಿ ಕಂಡು ಬಂದಿದ್ದು, ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು, ನ.ಪಂ. ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿವಿಧ ಕಂಪೆನಿಯ ಮಾತ್ರೆಗಳ ಸಹಿತ ರ್ಯಾಪರ್ ಗಳು, ಸಿರಪ್ ಗಳ ಸೀಸೆಗಳು, ಮುಲಾಮ್ ಟ್ಯೂಬ್ ಗಳು, ಇಂಜೆಕ್ಷನ್ ಸಿರಿಂಜ್ ಗಳ ರಾಶಿ ಹಾಕಲಾಗಿದೆ. ಲಕ್ಷಾಂತರ ರೂ. ಮೌಲ್ಯದ ಔಷಧಿ ವಸ್ತುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿರುವುದನ್ನು ನೋಡಿದರೆ ಇವು ಅವಧಿ ಮೀರಿದ ಔಷಧಗಳಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ರಾತ್ರಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏನಿದ್ದರೂ ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಔಷಧಗಳನ್ನು ಎಸೆದಿರುವುದು ಅಪಾಯಕಾರಿಯಾಗಿದೆ. ಪರಿಸರದಲ್ಲಿ ಹಲವಾರು ಮನೆಗಳಿವೆ. ಚರಂಡಿ ಇದ್ದು ಇವು ನೀರಿನಲ್ಲಿ ಮಿಶ್ರವಾದಲ್ಲಿ ಅಥವಾ ಪ್ರಾಣಿಗಳು ಸೇವಿಸಿದಲ್ಲಿ ಜೀವಕ್ಕೆ ಅಪಾಯವಿರುವುದು ನಿಚ್ಚಳವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಈ ರೀತಿ ಹಾಕಿದ್ದು ಯಾರು ಎಂಬುದು ಗೊತ್ತಾಗಬೇಕಾಗಿದೆ. ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು, ನ.ಪಂ. ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
Comments are closed.