ಮಂಗಳೂರು : ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಸಮಾರಂಭ ಶನಿವಾರ ಬ್ಯಾಂಕಿನ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ 2015-16ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪುರಸ್ಕರಿಸಲಾಯಿತು. ಜೊತೆಗೆ ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಇತರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವಿದ್ಯಾರ್ಥಿಗಳನ್ನು ಉತ್ಸಾಹಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಬದ್ಧತೆಯೊಂದಿಗೆ ಬೆಳೆಯಬೇಕು. ಜಿಲ್ಲೆಯಲ್ಲಿ ಸಾಕಷ್ಟು ಬ್ಯಾಂಕ್ಗಳಿವೆ. ಆದರೆ, ಸಹಕಾರಿ ಬ್ಯಾಂಕ್ ಬೆಳೆಯುತ್ತಾ ಎಲ್ಲ ರಂಗವನ್ನು ಪ್ರೋತ್ಸಾಹಿಸುತ್ತಿರುವುದು ವಿಶೇಷ ,,,ಯಾವುದೇ ವಿದ್ಯಾರ್ಥಿಗಳು ವಿದ್ಯೆ ಕಲಿಯಲು ಪರದಾಟಪಡುವಂತಾಗಬಾರದು. ಬಡವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ವಿದ್ಯಾರಂಗವನ್ನು ಬೆಳೆಸುವ ಕೆಲಸಗಳಾಗಬೇಕು ಎಂದು ಅವರು ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಆರ್ಥಿಕ ಸಬಲರನ್ನಾಗಿಸುವ ದೃಷ್ಟಿಯಿಂದ ಬ್ಯಾಂಕ್ ವತಿಯಿಂದ ಸಮ್ಮಾನಿಸುತ್ತಾ ಬರಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದೇ ಪ್ರಮುಖ ಉದ್ದೇಶ. ಎಸ್ಸಿಡಿಸಿಸಿ ಬ್ಯಾಂಕ್ನ ಸಿಬಂದಿಯ ಮಕ್ಕಳಿಗೂ ಪ್ರೋತ್ಸಾಹ ನೀಡಲಾಗುತ್ತಿದ್ದು, ಅವರು ಇನ್ನಷ್ಟು ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವಂತಾಗಬೇಕು ಎಂದು ಎಂ.ಎನ್.ಆರ್ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಜಿಲ್ಲೆಯ 18 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸಮ್ಮಾನಿಸಲಾಯಿತು. ಅಲ್ಲದೇ, ಬ್ಯಾಂಕ್ ಸಿಬಂದಿ ಮಕ್ಕಳು, ಸ್ವಸಹಾಯ ಸಂಘದ ಸದಸ್ಯರ ಮಕ್ಕಳು ಹಾಗೂ ಇತರ ಅರ್ಜಿಗಳು ಸೇರಿ ಒಟ್ಟು 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ವಿನಯಕುಮಾರ್ ಸೂರಿಂಜೆ, ಭಾಸ್ಕರ್ ಎಸ್. ಕೋಟ್ಯಾನ್, ಕೆ.ಎಸ್. ದೇವರಾಜ್, ಎಂ.ವಾದಿರಾಜ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ಎಂ. ಮತ್ತಿತರರು ಪಾಲ್ಗೊಂಡಿದ್ದರು.
Comments are closed.