ಬೆಂಗಳೂರು : ರಾಜಸ್ಥಾನದಿಂದ ಹಾರಿ ಬಂದು ಸ್ಯಾಂಡಲ್‌ವುಡ್‌ಗೆ ಹೊಸ ಎಂಟ್ರಿ ಪಡೆದ ರಾಜಸ್ಥಾನದ ಬೆಡಗಿ ಇದೀಗ ಸ್ಯಾಂಡಲ್ ವುಡ್`ಗೆ ಕಿಚ್ಚು ಹಚ್ಚುವ ಎಲ್ಲಾ ಲಕ್ಷಣಗಳು ಕಾಣುತಿದೆ. ದೂರದ ರಾಜಸ್ಥಾನದಿಂದ ಸ್ಯಾಂಡಲ್‌ವುಡ್‌ಗೆ ಹಾರಿ ಬಂದ ಈ ನಟಿಯ ಹೆಸರು ಇತಿ ಆಚಾರ್ಯ.
‘ಕನ್ನಡ ಅಂದ್ರೆ ನನಗಿಷ್ಟ’ ಎನ್ನುತ್ತ ಬೆಂಗಳೂರಿಗೆ ಬಂದ ಈಕೆಯನ್ನು ಮೊದಲು ಕೈಹಿಡಿದಿದ್ದು ಮಾಡೆಲಿಂಗ್. ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಿಗದಿದ್ದಾಗ ರ್‍ಯಾಂಪ್ ಮೇಲೆ ಮಿನುಗುವುದು ಅನಿವಾರ್ಯವೇ ಆಯಿತು. ಹಾಗೆ ಖ್ಯಾತಿ ಪಡೆದ ಮಾಡೆಲ್ ಅನ್ನು ಈಗ ಸ್ಯಾಂಡಲ್ವುಡ್ ಬರಮಾಡಿಕೊಂಡಿದೆ. ಸಿನಿಮಾಗಳಲ್ಲಿ ನಟನೆ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಜತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲಿದ್ದಾರಂತೆ ಇತಿ ಆಚಾರ್ಯ.
ಸದ್ಯಕ್ಕೆ, ಇತಿ ಆಚಾರ್ಯ ನಟನೆಯ ‘ಡೀಲ್‌ರಾಜ’ ಬಿಡುಗಡೆಯಾಗಿದೆ. ‘ಬದ್ಮಾಶ್’ ಹಾಗೂ ‘ಸಾಯಿಬಾಬಾ’ ಚಿತ್ರಗಳು ತೆರೆ ಕಾಣಬೇಕಿವೆ. ಅದರಲ್ಲೂ ‘ಬದ್ಮಾಶ್’ ಚಿತ್ರದಲ್ಲಿ ಒಳ್ಳೆಯ ಪಾತ್ರ ಮಾಡಿರುವುದಾಗಿ ಹೇಳುವ ಇತಿಗೆ ಈ ಚಿತ್ರ ತೆರೆಕಂಡರೆ ಕನ್ನಡದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ ಎನ್ನುವ ಭರವಸೆಯಲ್ಲಿದ್ದಾರೆ.
ಜಾಹೀರಾತು, ಮಾಡೆಲಿಂಗ್ ಲೋಕದಲ್ಲೇ ಹೆಚ್ಚು ಗುರುತಿಸಿಕೊಂಡಿರುವ ಇತಿ, ಸಾಕಷ್ಟು ಜ್ಯುವೆಲರಿಗೆ ಮಾಡೆಲ್ ಆಗಿದ್ದಾರೆ. ಮಾಡೆಲಿಂಗ್ ಲೋಕದ ಖ್ಯಾತಿಯನ್ನೇ ಬಳಸಿಕೊಂಡು ಚಿತ್ರರಂಗಕ್ಕೆ ಬಂದವರಿಗೆ ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.
‘ನನಗೆ ಇಂಥದ್ದೇ ಪಾತ್ರ ಮಾಡಬೇಕೆಂಬ ಷರತ್ತು ಇಲ್ಲ. ಕಥೆಯ ಬೇಡಿಕೆಗೆ ತಕ್ಕಂತೆ ಯಾವುದೇ ರೀತಿಯ ಪಾತ್ರ ಮಾಡುವುದಕ್ಕೂ ನಾನು ಸಿದ್ಧ. ಅಲ್ಲದೆ ಗ್ಲ್ಯಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೂ ನನ್ನ ಅಭ್ಯಂತರವಿಲ್ಲ. ಹಿಂದಿಯ ‘ಸತ್ಯವತಿ’ ಚಿತ್ರದಲ್ಲಿ ಅಂಥ ರೊಮ್ಯಾಂಟಿಕ್ ಪಾತ್ರ ಮಾಡಿದ್ದೇನೆ. ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳುವುದಕ್ಕೆ ನನಗೆ ನಟಿಯರಾದ ರಾಧಿಕಾ ಆಪ್ಟೆ, ಹುಮಾ ಖುರೇಷಿ ಹಾಗೂ ರಿಚಾ ಚಡ್ಡಾ ಅವರೇ ಸ್ಫೂರ್ತಿ’ ಎನ್ನುತ್ತಾರೆ ಇತಿ ಆಚಾರ್ಯ.
ಬೆಂಗಳೂರಿಗೆ ಬಂದ ಮೇಲೆ ಬಹುಬೇಗ ಕನ್ನಡವನ್ನೂ ಕಲಿತಿರುವ ಈ ರಾಜಸ್ಥಾನಿ ಕುವರಿ, ಕರ್ನಾಟಕದಲ್ಲಿ ನೆಲೆ ನಿಲ್ಲುವ ಕನಸು ಕಂಡಿದ್ದಾರಂತೆ. ಧನಂಜಯ್ ನಾಯಕನಾಗಿ ನಟಿಸುವ ‘ಬದ್ಮಾಶ್’ ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ. ಈ ಪಾತ್ರದಿಂದ ತಾನೂ ಒಬ್ಬ ನಟಿ ಎನ್ನುವ ಭರವಸೆ ಮೂಡಿದ್ದು, ಈ ಚಿತ್ರ ತನ್ನ ಕೆರಿಯರ್ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗುತ್ತದೆಂಬ ನಂಬಿಕೆ ಇದೆ ಎನ್ನುತ್ತಾರೆ ಇತಿ.
ಇದರ ಹೊರತಾಗಿ ಕನ್ನಡದಲ್ಲೇ ಹೆಸರಿಡದ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಕನ್ನಡದ ನಟ ಸೂರ್ಯ ವಸಿಷ್ಠ ಹಿಂದಿಯಲ್ಲಿ ನಟಿಸುತ್ತಿರುವ ‘ಸತ್ಯವತಿ’ ಚಿತ್ರಕ್ಕೆ ಇತಿ ಆಚಾರ್ಯ ನಾಯಕಿ. ಸೂರ್ಯ ವಸಿಷ್ಠ ಈಗಾಗಲೇ ಕನ್ನಡದಲ್ಲಿ ‘ಸಾಯಿಬಾಬಾ’ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ ತಮಿಳು ನಟ ಅಥರ್ವ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲೂ ಮುಖ್ಯ ಪಾತ್ರ ಮಾಡುತ್ತಿದ್ದಾರೆ.
Comments are closed.