ಕರಾವಳಿ

ಬೆಂಗಳೂರು :ಭಾರೀ ಮಳೆಗೆ ಟ್ರಾಫಿಕ್ ಜಾಮ್ – ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತ

Pinterest LinkedIn Tumblr

Bangalore_Havi_Raiin_1

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನ ಹಲವು ಭಾಗಗಳಲ್ಲಿ ಇಡೀ ರಾತ್ರಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ನಗರದ ಹಲವು ರಸ್ತೆಗಳು ಜಲಾವೃತವಾಗಿ, ಶುಕ್ರವಾರ ಭಾರಿ ಸಂಚಾರದಟ್ಟಣೆ ಉಂಟಾಯಿತು.

‘ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಜಯದೇವ ಆಸ್ಪತ್ರೆ, ಮಡಿವಾಳ ಚೆಕ್ಪೋಸ್ಟ್ನಿಂದ ಸಿಲ್ಕ್ಬೋರ್ಡ್ ಜಂಕ್ಷನ್, ಅಲ್ಲಿಂದ ಬಿಟಿಎಂ ಬಡಾವಣೆಯವರೆಗೂ ದಟ್ಟಣೆ ಇತ್ತು. ಈ ರಸ್ತೆಯಲ್ಲಿ ವಾಹನಗಳು ಒಂದು ಕಿ.ಮೀ ದೂರ ಕ್ರಮಿಸಲು 25ರಿಂದ 45 ನಿಮಿಷದವರೆಗೂ ಕಾಲಾವಕಾಶ ಹಿಡಿಯಿತು’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.’ಮಡಿವಾಳ ಚೆಕ್ಪೋಸ್ಟ್ನಿಂದ ಸಿಲ್ಕ್ಬೋರ್ಡ್ ಜಂಕ್ಷನ್, ಅಲ್ಲಿಂದ ಬಿಟಿಎಂ ಬಡಾವಣೆಯವರೆಗೂ ದಟ್ಟಣೆ ಇತ್ತು. ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಹೊಸೂರು ಮಾರ್ಗವಾಗಿ ಹೋಗುತ್ತಿದ್ದ ಸವಾರರು ನಿಗದಿತ ಸ್ಥಳ ತಲುಪಲು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಯಿತು’.

Bangalore_Havi_Raiin_2

ಮಳೆಯಿಂದ ಬಿಳೇಕಳ್ಳಿಯ ಕೋಡಿಚಿಕ್ಕನಹಳ್ಳಿ ಕೆರೆ ತುಂಬಿ ಹರಿದ ಪರಿಣಾಮ ಆ ಭಾಗವೆಲ್ಲ ಜಲಾವೃತಗೊಂಡಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಕೆಲಸಕ್ಕೆ ಹೋಗುವವರಿಗೆ ತೀವ್ರ ತೊಂದರೆಯಾಯಿತು. ರಾತ್ರಿಯೆಲ್ಲ ಮಳೆ ಸುರಿದು ಬೆಳಗ್ಗೆ ಕೊಂಚ ಬಿಡುವು ಕೊಟ್ಟಿದ್ದರಿಂದ ಏಕಕಾಲದಲ್ಲಿ ಎಲ್ಲರೂ ತಮ್ಮ ವಾಹನಗಳನ್ನು ಹೊರತೆಗೆದಿದ್ದರಿಂದ ಟ್ರಾಫಿಕ್ ಜಾಮ್ ಆಗಲು ಕಾರಣವಾಯಿತು. ಅಲ್ಲದೆ, ರಸ್ತೆಯಲ್ಲಿ ನೀರು, ಬಿಬಿಎಂಪಿ ಕಾಮಗಾರಿ ನಡೆಯುತ್ತಿರುವುದು ಟ್ರಾಫಿಕ್ ಅಡಚಣೆಗೆ ಕಾರಣವಾಯಿತು. ಕೃಷ್ಣ ಫ್ಲೋರ್‍ಮಿಲ್, ಟೌನ್‍ಹಾಲ್, ಕಾಫಿಬೋರ್ಡ್, ಜೆಸಿ ರೋಡ್, ರಿಚ್ಮಂಡ್ ರಸ್ತೆ, ಬಿಟಿಎಂ ರೋಡ್, ನಾಯಂಡಹಳ್ಳಿ, ಡಾ.ರಾಜ್‍ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಮಳೆಯ ಅವಾಂತರಕ್ಕೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿಹೋಗಿತ್ತು.

ಹತ್ತಾರು ಕಡೆ ಭಾರೀ ಗಾತ್ರದ ಮರಗಳು ಧರೆಗುರುಳಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು, ಸಾರ್ವಜನಿಕರು ಕಿರಿಕಿರಿ ಅನುಭವಿಸಬೇಕಾಯಿತು. ಕಾಂಪೌಂಡ್ ಕುಸಿದು ಏಳೆಂಟು ವಾಹನಗಳು ಜಖಂಗೊಂಡಿವೆ. ಬೆಂಗಳೂರಿನಲ್ಲಿ ನಿನ್ನೆ ರಾತ್ರಿ 38 ಮಿಲಿ ಮೀಟರ್ ಮಳೆಯಾಗಿದೆ. ಬೆಂಗಳೂರಿನ ಆಗ್ನೇಯ ಭಾಗ ಮಳೆಯ ಅನಾಹುತಕ್ಕೆ ಸಿಲುಕಿದೆ. ಅವಳಿ ಶೃಂಗೇರಿ ನಗರ, ಅರಕೆರೆ ಕೆರೆ ಕೋಡಿ ಬಿದ್ದು ಬಿಟಿಎಂ ಲೇಔಟ್ ಅರಕೆರೆ ಸುತ್ತಮುತ್ತ ನೀರು ಹರಿದು ಅವಾಂತರ ಸೃಷ್ಟಿಸಿದೆ.

Bangalore_Havi_Raiin_3

‘ಕೆರೆ ಕೋಡಿ ಬಿದ್ದಿದ್ದರಿಂದ ಕುವೆ೦ಪುನಗರ ಹಾಗೂ ಬಿಇಎಂಎಲ್ ಬಡಾವಣೆಗಳಿಗೆ ನೀರು ನುಗ್ಗಿತು. ಕೆರೆಯ ಅಕ್ಕಪಕ್ಕದ ರಸ್ತೆಗಳಲ್ಲೂ ನೀರು ಹರಿದು ದಟ್ಟಣೆ ನಿರ್ಮಾಣವಾಯಿತು. ಇದರಿಂದ ಪೂರ್ವ ವಿಭಾಗದ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ದಟ್ಟಣೆ ಹೆಚ್ಚಿತ್ತು. ಅದನ್ನು ನಿಯಂತ್ರಿಸಲು 10 ಇನ್ಸ್ಪೆಕ್ಟರ್ಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸ ಲಾಗಿತ್ತು’ ಎಂದು ಸಂಚಾರ ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರೀ ಮಳೆಗೆ ಕೋಡಿ ಚಿಕ್ಕನಹಳ್ಳಿ ಕೆರೆ ತುಂಬಿ ಹರಿದು ಹಲವು ಬಡಾವಣೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಈ ತನಕ 50 ಜನರನ್ನು ರಕ್ಷಿಸಿದೆ. ನೀರಿನಿಂದ ಆವೃತವಾಗಿರುವ ಮನೆ ಹಾಗೂ ಅಪಾರ್ಟ್ ಮೆಂಟ್‍ನಲ್ಲಿರುವ ಜನರಿಗೆ ಅಗ್ನಿ ಶಾಮಕ ಸಿಬ್ಬಂದಿ ಹಾಲು, ನೀರು, ಆಹಾರದ ಪೊಟ್ಟಣಗಳನ್ನು ವಿತರಿಸಿದ್ದಾರೆ.

Bangalore_Havi_Raiin_4

ನೂರಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ, 20ಕ್ಕೂ ಹೆಚ್ಚು ವಾಹನಗಳ ಮೂಲಕ ಎಚ್‍ಎಸ್‍ಆರ್ ಲೇಔಟ್, ಹೆಬ್ಬಗೋಡಿ, ದೇವರಚಿಕ್ಕನಹಳ್ಳಿ, ಬೊಮ್ಮಸಂದ್ರ, ವೀರಸಂದ್ರ ಮುಂತಾದೆಡೆ ಕಾರ್ಯಾಚರಣೆ ನಡೆಸಿ ಜಲಾವೃತ ಪ್ರದೇಶದಲ್ಲಿದ್ದ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. 20 ಬೋಟ್‍ಗಳನ್ನು ಉಪಯೋಗಿಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.

ಮನೆಗಳಿಗೆ, ಅಪಾರ್ಟ್‍ಮೆಂಟ್‍ಗಳಿಗೆ ನುಗ್ಗಿದ ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗಿದೆ. ರಾತ್ರಿಯಿಡೀ ಮಳೆ ಸುರಿದು ಕೋಡಿಚಿಕ್ಕನಹಳ್ಳಿ ಕೆರೆ ತುಂಬಿ ಹರಿದು ಆ ಭಾಗದ ಸುತ್ತಮುತ್ತ ಮನೆಗಳಿಗೆ ನೀರು ಹರಿದು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಮಳೆ ಯಿಂದಾಗಿ ಕೆಲವೆಡೆ ವಿದ್ಯುತ್ ಕಂಬ, ಮರ, ಕಾಂಪೌಂಡ್‍ಗಳು ಉರುಳಿ ಬಿದ್ದಿರುವ ವರದಿಯಾಗಿದೆ. ಮೈಸೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕ ಬಳ್ಳಾಪುರ, ಮಂಡ್ಯ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಪ್ರಾರಂಭವಾದ ಮಳೆ ಇಡೀ ರಾತ್ರಿ ಸುರಿದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಹವಾ ಮುನ್ಸೂಚನೆ ಪ್ರಕಾರ ಲಘು ವಾಯುಭಾರ ಕುಸಿತ ಉಂಟಾಗಿದ್ದು ಮೋಡ ಕವಿದ ವಾತಾವರಣವಿರುತ್ತದೆ. ಆಗಾಗ್ಗೆ ಹಗುರ ಮಳೆ ಬೀಳುವ ಲಕ್ಷಣಗಳಿದ್ದು, ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮುಂದಿನ ಎರಡು ದಿನಗಳು ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿಕೆಯಿಂದ ಜಾಗೃತರಾಗಿರುವ ಸಾರ್ವಜನಿಕರು, ಸ್ವತಃ ತಾವೇ ಚರಂಡಿಗಳಲ್ಲಿ ನೀರು ಕಟ್ಟಿಕೊಳ್ಳದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Comments are closed.