ಭಟ್ಕಳ, ಜು.29: ಗುರುವಾರ ಸಮಾಪನಗೊಂಡ ಭಟ್ಕಳದ ಪ್ರಸಿದ್ಧ ಮಾರಿಕಾಂಬಾ ಜಾತ್ರಾ ಮಹೋತ್ಸವದ ಮಾರಿಕಾಂಬೆಯ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಸೇರಿದ ಸಾವಿರಾರು ಹಿಂದೂ ಭಕ್ತರಿಗೆ ತಂಪು ಪಾನಿಯಗಳನ್ನು ವಿತರಣೆ ಮಾಡುವುದರ ಮೂಲಕ ಇಲ್ಲಿನ ಮಗ್ದೂಮ್ ಕಾಲೋನಿಯ ಶಾಹಿನ್ ಸ್ಪೋರ್ಟ್ಸ್ ಸೆಂಟರ್‌ನ ಮುಸ್ಲಿಂ ಯುವಕರು ಹಿಂದೂ-ಮುಸ್ಲಿಮ್ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಎರಡು ದಿನಗಳ ವರೆಗೆ ಜರಗಿದ ತಾಲೂಕಿನ ಪ್ರಸಿದ್ಧ ಮಾರಿಕಾಂಬ ಜಾತ್ರ ಉತ್ಸವಕ್ಕೆ ಗುರುವಾರ ತೆರೆಬಿದ್ದು ಸಾವಿರಾರು ಭಕ್ತ ಸಮುದಾಯದ ಹರ್ಷೋದ್ಘಾರಗಳ ನಡುವೆ ಇಲ್ಲಿನ ಜಾಲಿಕೋಡಿ ಸಮುದ್ರದಲ್ಲಿ ಮಾರಿಕಾಂಬೆ ಲೀನಗೊಂಡಳು.ಇಲ್ಲಿನ ಮುಖ್ಯ ರಸ್ತೆಯ ಮಾರಿಕಾಂಬ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗನಿಂದ ವಿಶೇಷ ಪೂಜೆ, ಹರಕೆಗಳೊಂದಿಗೆ ಅಲಂಕೃತಗೊಂಡ ಮಾರಿ ಸಂಜೆವೇಳೆಗೆ ಭಾರಿ ಜನಸ್ಥೋಮ ಮೆರವಣೆಗೆಯ ಮೂಲಕ ಮಾರಿದೇವಿ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸಿದರು.
ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಸೇರಿದ ಸಾವಿರಾರು ಹಿಂದೂ ಭಕ್ತರಿಗೆ ತಂಪು ಪಾನಿಯಗಳನ್ನು ವಿತರಣೆ ಮಾಡುವುದರ ಮೂಲಕ ಇಲ್ಲಿನ ಮುಸ್ಲಿಂ ಯುವಕರು ಹಿಂದೂ-ಮುಸ್ಲಿಮ್ ಸೌಹಾರ್ದತೆ ಮೆರೆದರು.
ಭಟ್ಕಳದ ಹಿಂದೂ ಮುಸ್ಲಿಮರಲ್ಲಿನ ಅಶಾಂತಿ, ಕೋಮುಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಯಾರೇ ಮಾಡಲಿ ಮತ್ತು ಮಾಧ್ಯಮಗಳು ಭಟ್ಕಳದ ಕುರಿತಂತೆ ಎಷ್ಟೆ ಅಪಪ್ರಚಾರ ಮಾಡಲಿ ನಾವಂತೂ ಇಲ್ಲಿ ಹಿಂದೂ-ಮುಸ್ಲಿಮರು ಶಾಂತಿ, ಸೌಹಾರ್ದತೆ ಹಾಗೂ ಪ್ರೀತಿಯಿಂದ ಬದುಕುತ್ತಿದ್ದೇವೆ ಎಂಬ ಸಂದೇಶವನ್ನು ನೀಡಿರುವ ಶಾಹಿನ್ ಸ್ಪೋರ್ಟ್ಸ್ ಸೆಂಟರ್‌ನ ಸದಸ್ಯರು ಇಲ್ಲಿನ ಹಿಂದೂ ಸಮುದಾಯದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಹಿನ್ ಸ್ಪೋರ್ಟ್ಸ್ ಕ್ಲಬ್ ಮುಖಂಡ ಹಾಗೂ ಪುರಸಭೆಯ ಸದಸ್ಯರಾಗಿರುವ ಮುಹಮ್ಮದ್ ಸಾದಿಕ್ ಮಟ್ಟಾ, ಭಟ್ಕಳ ಶಾಂತವಾಗಿದೆ. ಇಲ್ಲಿನ ಶಾಂತತೆಗೆ ಭಂಗವುಂಟು ಮಾಡುವ ಯಾವುದೇ ಘಟನೆಗಳನ್ನು ನಾವು ಸಹಿಸುವುದಿಲ್ಲ, ಇಲ್ಲಿನ ಹಿಂದೂ ಮುಸ್ಲಿಮರು ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ ಎನ್ನುವುದಕ್ಕೆ ಇಂದು ನಾವುಗಳು ವಿತರಿಸಿದ ತಂಪು ಪಾನೀಯವನ್ನು ಸ್ವೀಕರಿಸಿದ ಹಿಂದೂ ಬಾಂಧವರೇ ಸಾಕ್ಷಿಯಾಗಿದ್ದಾರೆ ಎಂದರು.
ಈ ಸಂದರ್ಭ ಮುಖ್ತಾರ್ ಮುಕ್ತೆಸರ್, ಅಸ್ರಾರ್ ಜಮ್ಶೇರ್, ರಾಫಿ ಮೊಹತೆಶಮ್, ಅಬ್ದುಸ್ಸಮಿ ಮೆಡಿಕಲ್ ಮುಂತಾದವರು ಉಪಸ್ಥಿತರಿದ್ದರು.
ಬುಧವಾರ ಬೆಳಿಗ್ಗೆ ವಿದ್ಯುಕ್ತ ಚಾಲನೆ :
ಮಾರಿಗದ್ದುಗೆಯಲ್ಲಿ ಮಾರಿಗೆ ವಿಶೇಷ ಪೂಜೆ ಸಲ್ಲಿಸಿ ವಿಶೇಷ ವಾದ್ಯಗಳೊಂದಿಗೆ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆ ತಂದು ಪ್ರತಿಷ್ಠಾಪಿಸುವುದರೊಂದಿಗೆ ಮಾರಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಬೆಳಿಗ್ಗೆ ವಿದ್ಯುಕ್ತವಾಗಿ ಚಾಲನೆ ದೊರೆತಿತ್ತು.
ಭಟ್ಕಳ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬುಧವಾರ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮಾರಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ವಿಶೇಷವಾಗಿ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಿಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನೇಮಿಸಲಾದ ಸ್ವಯಂ ಸೇವಕರು ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸಿದರು. ಕಣ್ಣಿನ ಮಾದರಿ, ಹೂವಿನ ಟೋಫಿ ಸೇರಿದಂತೆ ವಿವಿಧ ಹರಕೆಗಳು ಮಾರಿಗೆ ಸಲ್ಲಿಕೆಯಾದವು. ದೇವಸ್ಥಾನದ ಆಸುಪಾಸಿನಲ್ಲಿ ಹೂಹಣ್ಣುಗಳ, ಆಟಿಕೆ ಸಾಮಾನುಗಳು, ಮಿಠಾಯಿ ಸೇರಿದಂತೆ ತರೇವಾರಿ ಅಂಗಡಿಗಳು ಜಾತ್ರೆಗೆ ಮೆರುಗನ್ನು ಹೆಚ್ಚಿಸಿದವು. ಗುರುವಾರ ಭಟ್ಕಳ ಶಹರಕ್ಕೆ ಹೊಂದಿಕೊಂಡ ಗ್ರಾಮಗಳ ಜನರು ಮಾರಿಹಬ್ಬವನ್ನು ಆಚರಿಸಲಿದ್ದು, ಸಂಜೆ 4 ಗಂಟೆಗೆ ವಿಸರ್ಜನೆಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಜಾತ್ರೆಯ ಪ್ರಯುಕ್ತ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.





Comments are closed.