ಮೀರಠ್ : ಇತ್ತೀಚಿಗೆ ಓರ್ವ ಗೋಲ್ಡನ್ ಬಾಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಸದಾ ಮೈಮೇಲೆ ಚಿನ್ನದ ಅಂಗಿಯನ್ನು ಧರಿಸಿ ಓಡಾಡುತ್ತಿದ್ದ ದತ್ತಾಪುಗೆ ಎಂಬ ಹೆಸರಿನ ಈ ಬಾಬಾ ತುಂಬಾ ಪ್ರಸಿದ್ಧಿ ಪಡೆದಿದ್ದು, ಇತ್ತೀಚಿಗೆ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹತ್ಯೆಗೀಡಾಗಿದ್ದರು. ಇದೇ ರೀತಿ ಬಂಗಾರ ಧರಿಸಿ ಓಡಾಡುವ ಅದೇಷ್ಟು ಬಾಬಾಗಳು ನಮ್ಮ ದೇಶದಲ್ಲಿ ಇದ್ದಾರೆ.
ಇದೀಗ ಈ ಬಾಬಾಗಳ ಸಾಲಿನಲ್ಲಿರುವ ಇನ್ನೋರ್ವ ಬಾಬಾ ಬೆಳಕಿಗೆ ಬಂದಿದ್ದಾರೆ. ಈ ಗೋಲ್ಡನ್ ಸನ್ಯಾಸಿ ಬಾಬಾ ಅಕ್ಷರಶಃ ಹೊಳೆಯುತ್ತಾರೆ. ಜನರನ್ನು ಆಕರ್ಷಿಸುತ್ತಾರೆ. ಇದಕ್ಕೆ ಕಾರಣ ಏನು ಗೊತ್ತೇ? ಈ ಸನ್ಯಾಸಿ ಮೈಮೇಲೆ ಸದಾ 12 ಕೆ.ಜಿ. ಚಿನ್ನ ಕಂಗೊಳಿಸುತ್ತಿರುತ್ತದೆ. ಉಂಗುರ, ಸರ, ಲಾಕೆಟ್ ಸೇರಿದಂತೆ ಸದಾ ನಾಲ್ಕು ಕೋಟಿ ರೂ.ಮೌಲ್ಯದ ಚಿನ್ನ ಧರಿಸಿರುತ್ತಾರೆ. ಈ ಚಿನ್ನದ ಪ್ರೀತಿಯೇ ಅವರಿಗೆ ಗೋಲ್ಡನ್ ಬಾಬಾ ಎಂಬ ಬಿರುದು ಗಳಿಸಿಕೊಟ್ಟಿದೆ. ಇಷ್ಟು ಚಿನ್ನ ಧರಿಸಿರುವುದು ನನ್ನ ಸಂಪತ್ತು ಪ್ರದರ್ಶನಕ್ಕಲ್ಲ. ಚಿನ್ನ ಲಕ್ಷ್ಮಿಯ ಸಂಕೇತ ಎನ್ನುವುದು ಅವರ ವಿವರಣೆ.
ಸಾವಿರಾರು ಮಂದಿ ಕನ್ವರ್ಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಯಾಸದಿಂದ ಬಳಲುತ್ತಿದ್ದರೆ, ಈ ಬಾಬಾ ಮಾತ್ರ ಕನ್ವರ್ ಯಾತ್ರೆ ವೇಳೆ ತಮ್ಮ ಐಷಾರಾಮಿ ಫಾರ್ಚುನರ್ ಕಾರಿನಲ್ಲಿ ಪ್ರಯಾಣದುದ್ದಕ್ಕೂ ಅಪೂರ್ವ ಜನಾಕರ್ಷಣೆಯ ಕೇಂದ್ರವಾಗುತ್ತಾರೆ.ಜನ ಇವರನ್ನು ನೋಡಲು, ಪಾದ ಸ್ಪರ್ಶಿಸಿ ನಮಸ್ಕಾರ ಮಾಡಿ ಪುನೀತರಾಗಲು ಮುಗಿ ಬೀಳುತ್ತಾರೆ, ಪೊಲೀಸರೂ ಸೇರಿದಂತೆ ಇವರ ಪ್ರಭಾವಳಿಯೊಳಗೆ ಕಾಣಿಸಿಕೊಳ್ಳಲು ಮುಗಿಬೀಳುತ್ತಾರೆ. ಅವರ ಜೊತೆ ಭಾವಚಿತ್ರ ತೆಗೆಸಿಕೊಳ್ಳಲು ತುದಿಗಾಲಲ್ಲಿ ನಿಲ್ಲುತ್ತಾರೆ. 24 ಬಾರಿ ಕನ್ವರ್ ಯಾತ್ರೆ ಕೈಗೊಂಡಿರುವ ಅವರು, ಸಾಯುವವರೆಗೂ ಇದನ್ನು ಮುಂದುವರಿಸುವುದಾಗಿ ಹೇಳುತ್ತಾರೆ.
ಕಳೆದ ವರ್ಷ ಹರಿದ್ವಾರದಿಂದ ದಿಲ್ಲಿಯವರೆಗಿನ ಇವರ ಯಾತ್ರೆಗೆ 72 ಲಕ್ಷ ವೆಚ್ಚವಾಗಿದೆಯಂತೆ. ಈ ಬಾರಿಯ ಯಾತ್ರೆಯ ಅಂದಾಜು ವೆಚ್ಚ ಒಂದು ಕೋಟಿ ರೂ.. ಇವರ ಜೊತೆಗೆ 200 ಮಂದಿ ಭಕ್ತರು ಹಾಗೂ 10 ಮಂದಿ ಅಂಗರಕ್ಷಕರು ಸದಾ ಇರುತ್ತಾರೆ.



Comments are closed.