ಬೆಂಗಳೂರು: ಪುತ್ರನಿಗಾಗಿ ಮಿಡಿಯಲೋ, ರಾಜ್ಯಕ್ಕಾಗಿ ತುಡಿಯಲೋ ಎಂದು ಚಿಂತೆಯಲ್ಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಹಾಯ ಹಸ್ತ ಚಾಚಿ ಅವರ ನೋವನ್ನು ಕಡಿಮೆ ಮಾಡಿದ್ದಾರೆ.
ಹೌದು. ನಾಲ್ಕು ದಿನಗಳಿಂದ ಪುತ್ರನಿಗಾಗಿ ಕೊರಗಿದ ಸಿಎಂ ಸಿದ್ದರಾಮಯ್ಯ ಹಿಂದೆ ದೊಡ್ಡ ಕಥೆಯಿದೆ. ಶನಿವಾರ ರಾತ್ರಿ ಸಿದ್ದರಾಮಯ್ಯನವರಿಗೆ ಮಗ ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ತಿಳಿಯುತ್ತದೆ. ಭಾನುವಾರ ಸಂಜೆ ಪರಿಸ್ಥಿತಿ ಗಂಭೀರವಾಗಿದೆ ಎನ್ನುವುದು ಗೊತ್ತಾಗುತ್ತದೆ. ಸೋಮವಾರವೇ ಬೆಲ್ಜಿಯಂಗೆ ಹೋಗಲು ಸಿದ್ದರಾಮಯ್ಯ ಮುಂದಾದರೂ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಿಂದೇಟು ಹಾಕಿದರು. ಹೀಗಾಗಿ ಕೂಡಲೇ ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್‍ರನ್ನು ಬೆಲ್ಜಿಯಂಗೆ ಸಿಎಂ ಕಳಹಿಸಿದರು.
ಸೋಮವಾರವೇ ಆಪ್ತ ವೈದ್ಯರು, ಸೊಸೆಯನ್ನು ಬೆಲ್ಜಿಯಂಗೆ ಕಳುಹಿಸಿಕೊಟ್ಟ ಸಿಎಂ, ಪತ್ನಿ ಪಾವರ್ತಿಯ ಪಾಸ್‍ಪೋರ್ಟ್, ವೀಸಾಗಾಗಿ ಸುಷ್ಮಸ್ವರಾಜ್‍ಗೆ ಫೋನ್‍ನಲ್ಲಿ ಮನವಿ ಮಾಡಿಕೊಂಡರು. ಅಷ್ಟರಲ್ಲಿ ಸೋನಿಯಾಗಾಂಧಿ ಅವರಿಗೂ ಈ ವಿಚಾರದ ತಲುಪಿತು. ಕೂಡಲೇ ಫೋನ್ ಮಾಡಿದ ಸೋನಿಯಾ ಗಾಂಧಿ ಒಬ್ಬರಿಗೆ ಜವಾಬ್ದಾರಿ ವಹಿಸಿ, ಮಗನ ಬಳಿ ಹೋಗಿ, ಜನ ತಪ್ಪು ತಿಳಿಯುವುದಿಲ್ಲ ಸಿಎಂಗೆ ಧೈರ್ಯ ತುಂಬಿದರು.
ಈ ವಿದ್ಯಮಾನಗಳು ನಡೆಯುತ್ತಿರುವಾಗ ಅಧಿಕಾರಿಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಹಿತಿ ಸಿಗುತ್ತದೆ. ಕೂಡಲೇ ಸಿಎಂಗೆ ಫೋನ್ ಮಾಡಿ ಮೋದಿ ಸಂಪೂರ್ಣವಾಗಿ ಸಹಾಯ ನೀಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಸಾಮಾನ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಕೇಶ್ ಅವರನ್ನು ಕೂಡಲೇ ಬ್ರಸೆಲ್ಸ್‍ನ ಪ್ರತಿಷ್ಠಿತ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲು ಮೋದಿಯಿಂದ ಅಧಿಕಾರಿಗಳಿಗೆ ಕರೆ ಹೋಗುತ್ತದೆ. ಪಾಸ್‍ಪೋರ್ಟ್, ವೀಸಾ, ಧೂತವಾಸ ಕಚೇರಿ ಹೀಗೆ ಎಲ್ಲೆಡೆಗೂ ಮೋದಿ ಕಚೇರಿಯಿಂದಲೇ ಫೋನ್ ಹೋಗುತ್ತದೆ.
ಸೋನಿಯಾ, ನರೇಂದ್ರ ಮೋದಿ ನೀಡಿದ ಸಾಂತ್ವನ, ಧೈರ್ಯದಿಂದ ನಿರ್ಧಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಮಂಗಳವಾರ ಬೆಲ್ಜಿಯಂಗೆ ಹೋಗಲು ನಿರ್ಧಾರ ಮಾಡುತ್ತಾರೆ. ಆದರೆ ಈ ವೇಳೆ ಅವರ ಪಾಸ್‍ಪೋರ್ಟ್ ಸಿಗದ ಕಾರಣ ಮತ್ತೊಂದು ಪರದಾಟ ಶುರುವಾಯಿತು.
ಕೊನೆ ಕ್ಷಣದಲ್ಲಿ ಹೊಸ ಪಾಸ್‍ಪೋರ್ಟ್ ಮಾಡಿಸಿಕೊಂಡು ಗುರುವಾರ ಮುಂಜಾನೆ ಬೆಲ್ಜಿಯಂಗೆ ಸಿದ್ದರಾಮಯ್ಯ ಹೊರಟರೆ, ಗುರುವಾರ ಮಧ್ಯಾಹ್ನ ಪತ್ನಿಗೂ ಪಾಸ್‍ಪೋರ್ಟ್, ವೀಸಾ ಸಿಕ್ಕಿದ್ದು ಶುಕ್ರವಾರ ಬೆಳಗ್ಗೆ ಬೆಲ್ಜಿಯಂಗೆ ಹೊರಡಲಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿ, ಸುಷ್ಮಸ್ವರಾಜ್ ಸ್ಪಂದನೆ, ಸೋನಿಯಾ ನೀಡಿದ ಧೈರ್ಯಕ್ಕೆ ಸಿಎಂ ಮೆಚ್ಚುಗೆಯ ಮಾತನಾಡಿದ್ದು, ಆಪ್ತರ ಬಳಿ ಮೂವರ ಕುರಿತು ಕೃತಜ್ಞತೆಯ ಮಾತುಗಳನ್ನು ಹೇಳಿದ್ದಾರೆ. ಪರಮೇಶ್ವರ್, ಡಿಕೆಶಿವಕುಮಾರ್ ಸೇರಿದಂತೆ ಹಿರಿಯ ಸಚಿವರಿಂದಲೂ ಸಿಎಂಗೆ ಧೈರ್ಯದ ಮಾತು ಸಿಕ್ಕಿದೆ.
ಮಗ ರಾಕೇಶ್‍ಗೆ ಇಬ್ಬರು ಪುಟ್ಟ ಮಕ್ಕಳಿದ್ದು ಅವರಿಗಾಗಿಯಾದರೂ ಆರೋಗ್ಯ ನೋಡಿಕೊ ಅಂತ ಹೇಳಿದ್ದೆ ಆರೋಗ್ಯ ನೋಡಿಕೊಳ್ಳಬೇಕು, ಆ ಪುಟ್ಟ ಮಕ್ಕಳಿಗಾಗಿಯಾದರೂ ರಾಕೇಶ್ ಚೆನ್ನಾಗಿರಬೇಕು ಎಂದು ಆಪ್ತರಲ್ಲಿ ಸಿಎಂ ಹೇಳಿಕೊಂಡಿದ್ದಾರೆ.
Comments are closed.