*ಯೋಗೀಶ್ ಕುಂಭಾಸಿ
ಕುಂದಾಪುರ: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಹುಬ್ಬಳ್ಳಿ ಸಮೀಪದ ವರೂರು ಎಂಬಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೂವರು ಸಜೀವ ದಹನವಾದ ಘಟನೆ ಬುಧವಾರ ನಡೆದಿದ್ದು ಘಟನೆಯಲ್ಲಿ ಕುಂದಾಪುರ ಮೂಲದ ಪ್ರಸ್ತುತ ಶಿವಮೊಗ್ಗ ನಿವಾಸಿ ವ್ಯಕ್ತಿಯೋರ್ವರು ಸಜೀವ ದಹನವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಕುಂದಾಪುರ ತಾಲ್ಲೂಕಿನ ಬಸ್ರೂರು ಸಮೀಪದ ಮೇರ್ಡಿ ನಿವಾಸಿ ಸುರೇಶ್ ಹೆಗ್ಡೆ(52) ಎನ್ನುವವರೇ ಬೆಂಕಿ ಪ್ರಕರಣದಲ್ಲಿ ಸಜೀವ ದಹನವಾದ ವ್ಯಕ್ತಿ.
ಘಟನೆ ವಿವರ: ಮೂಲತಃ ಕುಂದಾಪುರದ ಮೇರ್ಡಿಯವರಾದ ಸುರೇಶ್ ಹೆಗ್ಡೆ ಅವರು ಈ ಹಿಂದೆ ತರಿಕೆರೆಯಲ್ಲಿ ಸಹೋದರನೊಂದಿಗೆ ಹೋಟೆಲ್ ಉದ್ಯೋಗ ಮಾಡಿಕೊಂಡಿದ್ದು ಬಳಿಕ ಮೆಡಿಸೆರ್ ಎನ್ನುವ ಕಂಪೆನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಶಿವಮೊಗ್ಗದಲ್ಲಿ ಪತ್ನಿ ಕೃಷ್ಣಲೀಲಾ ಹಾಗೂ ಓರ್ವ ಪಿಯುಸಿ ಓದುತ್ತಿರುವ ಪುತ್ರನೊಂದಿಗೆ ನೆಲೆಸಿದ್ದಾರೆ. ಮಂಗಳವಾರ ರಾತ್ರಿ ಕಂಪೆನಿಯ ಮಾರ್ಕೆಂಟಿಂಗ್ ಕೆಲಸಕ್ಕಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್ ಮೂಲಕ ಹೊರಟಿದ್ದರು.ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್ಸು ಇನ್ನೇನು ಕೆಲವೇ ಕ್ಷಣಗಳಿರುವಾಗ ಬೆಂಕಿ ದುರಂತಕ್ಕೆ ಒಳಪಟ್ಟಿತ್ತು. ಈ ದುರ್ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದರು.
ಬಸ್ಸಿಗೆ ಬೆಂಕಿ ತಗುಲಿ ಪ್ರಯಾಣಿಕರು ಮೃತಪಟ್ಟ ಬಗ್ಗೆ ಸುದ್ದಿವಾಹಿನಿಗಳಲ್ಲಿ ವೀಕ್ಷಿಸಿದ ಕುಟುಂಬಿಕರು ಸದ್ಯ ಮೃತ ದೇಹದ ಪತ್ತೆಕಾರ್ಯಕ್ಕಾಗಿ ಹುಬ್ಬಳ್ಳಿ-ದಾರವಾಡದತ್ತ ಪ್ರಯಾಣ ಬೆಳೆಸಿದ್ದಾರೆ. ಸುರೇಶ್ ಹೆಗ್ಡೆ ಅವರು ಅದೇ ಬಾಸಿನಲ್ಲಿ ಚಲಿಸುತ್ತಿದ್ದ ಬಸ್ಸಿನ ಸೀಟ್ ಸಂಖ್ಯೆ ಆಧಾರದಲ್ಲಿ ಅದು ಸುರೇಶ್ ಹೆಗ್ಡೆ ಆಗಿರಬಹುದೆಂಬ ಬಗ್ಗೆ ಬಹುತೇಕ ಖಚಿತವಾಗಿದೆ.
ಗೋವಿಂದ ಹೆಗ್ಡೆ ಹಾಗೂ ಶಾರದ ಹೆಗ್ಡೆ ದಂಪತಿಗಳ ಐವರು ಮಕ್ಕಳ ಪೈಕಿ ಸುರೇಶ್ ಹೆಗ್ಡೆ ಎರಡನೇ ಪುತ್ರ. ಸುರೇಶ್ ಅವರ ಪತ್ನಿ ಕೃಷ್ಣಲೀಲಾ ಅವರು ಅವರು ಉಡುಪಿಯ ಬನ್ನಾಡಿಯವರಾಗಿದ್ದು ವಡ್ಡರ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷೆಯಾಗಿದ್ದರು ಎನ್ನಲಾಗಿದೆ.
Comments are closed.