ಕರಾವಳಿ

ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಸರಿಯಾಗಿ ಬಳಸಲು ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

Indian_Flag

ಮಂಗಳೂರು, ಜು. 27: ರಾಷ್ಟ್ರಧ್ವಜವನ್ನು ಅರಳಿಸುವ ಧ್ವಜಸ್ಥಂಭದ ಕೆಳಗಡೆ ಇರುವ ರಾಷ್ಟ್ರ ಲಾಂಛನ (4 ಸಿಂಹಗಳನ್ನು ಹೊಂದಿರುವ ಅಶೋಕ ಲಾಂಛನ )ದಲ್ಲಿ ಸಿಂಹಗಳ ಕೆಳಗಡೆ ‘ಸತ್ಯ ಮೇವ ಜಯತೇ’ಎಂಬ ಧ್ಯೇಯ ವಾಕ್ಯವನ್ನು ದೇವನಾಗರಿ ಭಾಷೆಯಲ್ಲಿ ಇಲ್ಲದೆ ಇರುವುದು ಸರಕಾರದ ಗಮನಕ್ಕೆ ಬಂದಿರುತ್ತದೆ. ‘ಸತ್ಯ ಮೇವ ಜಯತೇ’ ಎಂಬ ಧ್ಯೇಯ ವಾಕ್ಯ ಇರದಂತಹ ರಾಷ್ಟ್ರೀಯ ಲಾಂಛನವನ್ನು ಧ್ವಜಸ್ಥಂಭಗಳಲ್ಲಿ, ಕೇಂದ್ರ ಸರಕಾರದ ಕಚೇರಿ ನಾಮ ಫಲಕಗಳಲ್ಲಿ, ಕೇಂದ್ರ ಸರಕಾರದ ಅಧಿಕಾರಿಗಳು, ಸಂಸದರು ಉಪಯೋಗಿಸುವಂತಹ ಲೆಟರ್ ಹೆಡ್ಗಳಲ್ಲಿ ಬಳಕೆಯಾದಲ್ಲಿ ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆಯ ನಿಷೇಧ) ಅಧಿನಿಯಮ 2005 ಮತ್ತು ಭಾರತದ ರಾಷ್ಟ್ರ ಲಾಂಛನ (ಬಳಕೆ ನಿಯಂತ್ರಣ) ನಿಯಮಗಳು 2007ರ ಉಲ್ಲಂಘನೆಯಾಗುವುದು ಮಾತ್ರವಲ್ಲದೆ ಶಿಕ್ಷಾರ್ಹ ಅಪರಾಧವಾಗಲಿದೆ.

Ashoka_sthambha

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಂದ್ರ ಸರಕಾರದ, ರಾಜ್ಯ ಸರಕಾರದ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ, ಬ್ಯಾಂಕ್, ವಾಣಿಜ್ಯ ಮಳಿಗೆಗಳ, ನಿಗಮ ಮಂಡಳಿಗಳ, ವಿದ್ಯಾ ಸಂಸ್ಥೆಗಳ ಕಚೇರಿಗಳಲ್ಲಿ, ಶಾಲಾ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಮತ್ತು ರಾಷ್ಟ್ರೀಯ ಹಬ್ಬಗಳಂದು ಸಾರ್ವಜನಿಕವಾಗಿ ರಾಷ್ಟ್ರೀಯ ಧ್ವಜ ವಂದನೆ ಸ್ವೀಕರಿಸುವ ಸ್ಥಳಗಳಲ್ಲಿ (ಮೈದಾನದಲ್ಲಿ) ಇರುವ ಧ್ವಜ ಸ್ಥಂಭಗಳ ಕೆಳಗೆ ಇರುವ ರಾಷ್ಟ್ರೀಯ ಲಾಂಛನ (4 ಸಿಂಹಗಳಿರುವ ಅಶೋಕ ಲಾಂಛನ )ದ ಕೆಳಭಾಗದಲ್ಲಿ ದೇವ ನಾಗರಿ ಭಾಷೆಯಲ್ಲಿ ‘ಸತ್ಯ ಮೇವ ಜಯತೇ’ ಎಂಬ ಧ್ಯೇಯ ವಾಕ್ಯವನ್ನು ಅಳವಡಿಸುವಂತೆ, ಅಥವಾ ‘ಸತ್ಯ ಮೇವ ಜಯತೇ’ ಧ್ಯೇಯ ವಾಕ್ಯದಿಂದ ಕೂಡಿದ ಹೊಸ ಲಾಂಛನವನ್ನು ಅಳವಡಿಸ ಬೇಕು.

ಭಾರತೀಯ ಧ್ವಜ ಸಂಹಿತೆ (The Flag Code of India) ಪ್ರಕಾರ ರಾಷ್ಟ್ರಗೀತೆಯನ್ನು (ಜನ ಗಣ ಮನ) 52 ಸೆಕೆಂಡುಗಳ ಅವಧಿಯಲ್ಲಿ ಹಾಡಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಈ ಅವಧಿ ಮೀರಬಾರದು ಅಥವಾ ಕಡಿಮೆಯಾಗ ಬಾರದು. ರಾಷ್ಟ್ರಗೀತೆಯನ್ನು ಹಾಡುವಾಗ ರಾಷ್ಟ್ರೀಯ ಹಬ್ಬಗಳ ಹೊರತಾಗಿಯೂ ಶಿಸ್ತಾಗಿ (Attention Position) ನಿಂತು ಗೌರವ ಸಲ್ಲಿಸಬೇಕು. ಸಾರ್ವಜನಿಕ ಸಭೆ ಸಮಾರಂಭಗಳ ಕೊನೆಯಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ ಏರ್ಪಡಿಸುವ ಸಮಾರಂಭಗಳಲ್ಲಿ, ಶಾಲೆ ಬಿಡುವ ವೇಳೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಪದ್ಧತಿ ಬೆಳೆಸಿ, ಸಾಮಾನ್ಯ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಬೆಳೆಸ ಬಹುದಾಗಿದೆ. ಇದಕ್ಕಾಗಿ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಸುತ್ತೋಲೆಯನ್ನು ಕಳುಹಿಸುವಂತೆ ಸೂಚಿಸಲಾಗಿದೆ.

ಅದೇ ರೀತಿ, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮನಬಂದಂತೆ ಬಳಸಿ, ಎಲ್ಲೆಂದರಲ್ಲಿ ಎಸೆದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಹಾಗೂ ಅಗೌರವ ತೋರುವುದನ್ನು ತಡೆಗಟ್ಟುವ ಅವಶ್ಯಕತೆ ಇದೆ. ಪ್ರಾಮುಖ್ಯ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ ಬಟ್ಟೆಯಿಂದ ಮಾಡಿದ ರಾಷ್ಟ್ರಧ್ವಜಗಳನ್ನು ಮಾತ್ರ ಬಳಸಿ, ಕಾರ್ಯಕ್ರಮ ಮುಗಿದ ಬಳಿಕ ಅವುಗಳನ್ನು ಗೌರವ ಪೂರ್ವಕ ಕಚೇರಿಯಲ್ಲಿ ಇರಿಸಬೇಕು.

ಹಾನಿಗೊಂಡ, ಹರಿದ, ಬಣ್ಣ ಕಳೆದುಕೊಂಡಿರುವ ಉಪಯೋಗಿಸಲಾಗದಂತಹ ಸ್ಥಿತಿಯಲ್ಲಿರುವ ಹಳೆಯದಾಗಿರುವ ರಾಷ್ಟ್ರಧ್ವಜಗಳನ್ನು ಗೌರವಪೂರ್ವಕವಾಗಿ ಗೋಪ್ಯವಾಗಿ, ಖಾಸಗಿಯಾಗಿ ಸುಟ್ಟು ನಾಶಗೊಳಿಸಬೇಕು. ಇದರ ಹೊರತಾಗಿ ಬೇರೆ ಯಾವುದೇ ರೀತಿಯಲ್ಲಿ ವಿಲೇವಾರಿ ಮಾಡಬಾರದು. ರಾಷ್ಟ್ರಧ್ವಜದ ಅನುಕರಣೆ ಮಾದರಿಯಲ್ಲಿ ವಸ್ತ್ರಗಳನ್ನು ಮೇಜಿನ ಹೊದಿಕೆಯಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ಬಳಸಬಾರದು. ರಾಷ್ಟ್ರ ಲಾಂಛನ ಮತ್ತು ರಾಷ್ಟ್ರಧ್ವಜವನ್ನು ವಾಣಿಜ್ಯ ವ್ಯಾಪಾರ ಅಥವಾ ಯಾವುದೇ ಖಾಸಗಿ ಆಮಂತ್ರಣಗಳಿಗಾಗಿ ರಾಷ್ಟ್ರೀಯ ಚಿಹ್ನೆಯನ್ನು ಬಳಸುವಂತಿಲ್ಲ. ಈ ರೀತಿಯಾಗಿ ಮಾಡಿದಲ್ಲಿ ರಾಷ್ಟ್ರಧ್ವಜ ಸಂಹಿತೆಯಲ್ಲಿ ತಿಳಿಸಿದಂತೆ ಶಿಕ್ಷಾರ್ಹ ಅಪರಾಧವಾಗುತ್ತದೆ.

ರಾಷ್ಟ್ರಧ್ವಜವನ್ನು ಆರೋಹಣ ಸಂದರ್ಭಗಳಲ್ಲಿ ಧ್ವಜವನ್ನು ತುರ್ತಾಗಿ ಅರಳಿಸಿ ಮತ್ತು ಇಳಿಸುವ ವೇಳೆ ನಿಧಾನವಾಗಿ ಧ್ವಜವನ್ನು ಇಳಿಸುವ ಕ್ರಮ ಮಾಡಬೇಕು. ಯಾವುದೇ ಕಾರಣದಿಂದಲೂ ರಾಷ್ಟ್ರಧ್ವಜ ನೆಲಕ್ಕೆ ತಾಗಬಾರದು. ಭಾರತದ ರಾಷ್ಟ್ರಧ್ವಜವನ್ನು ವರ್ಷದ 365 ದಿನಗಳಲ್ಲೂ ಅರಳಿಸುವ ಸರಕಾರಿ ಕಚೇರಿಗಳಲ್ಲಿ, ನಿಗಮ ಮಂಡಳಿ, ಸರಕಾರಿ ಸೌಮ್ಯಕ್ಕೆ ಒಳಪಟ್ಟ ಕಟ್ಟಡಗಳಲ್ಲಿ ಬ್ಯಾಂಕ್ಗಳು, ಗ್ರಾಮಾಂತರ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ರಾಷ್ಟ್ರೀಯ ಹಬ್ಬಗಳ ದಿನಗಳಲ್ಲಿ ಹಾಗೂ ಸಾರ್ವಜನಿಕ ರಾಷ್ಟ್ರೀಯ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳಲ್ಲಿ ಸೂರ್ಯೋದಯ ಬಳಿಕ ಧ್ವಜವನ್ನು ಅರಳಿಸಬೇಕು. ಸೂರ್ಯ ಅಸ್ತಮ ಸಂದರ್ಭದಲ್ಲಿ ಧ್ವಜವನ್ನು ಧ್ವಜಸ್ಥಂಭದಿಂದ ಇಳಿಸಬೇಕು. ರಾತ್ರಿ ಹೊತ್ತು ಧ್ವಜಸ್ಥಂಭದಲ್ಲಿ ಧ್ವಜ ಹಾರಾಡಬಾರದು. ಕೆಲವು ಕಚೇರಿಗಳಲ್ಲಿ ಕಚೇರಿ ಇರುವ ದಿನಗಳಲ್ಲಿ ಮಾತ್ರ ಧ್ವಜ ಅರಳಿಸುವುದು, ರಜಾ ದಿನಗಳಲ್ಲಿ ಧ್ವಜ ಅರಳಿಸದೇ ತಪ್ಪು ಮಾಡುವುದು ಕಂಡು ಬಂದಿರುತ್ತದೆ.

ರಾಷ್ಟ್ರಧ್ವಜ ಮತ್ತು ರಾಷ್ಟ್ರ ಲಾಂಛನವನ್ನು ನಾಶಗೊಳಿಸುವ, ಅವಮಾನಿಸುವ ಅಥವಾ ಧ್ವಜ ನಿಯಮಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗುವುದರಿಂದ ಸಾರ್ವಜನಿಕರು, ಇಲಾಖಾ ಅಧಿಕಾರಿಗಳು, ಕಚೇರಿ ಸಿಬ್ಬಂದಿ, ವಿದ್ಯಾ ಸಂಸ್ಥೆಗಳ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು , ರಾಷ್ಟ್ರ ಲಾಂಛನ, ರಾಷ್ಟ್ರಧ್ವಜದ ಪ್ರಾಮುಖ್ಯತೆಯನ್ನು ಅರಿತು ಗೌರವ ಪೂರ್ವವಾಗಿ ರಾಷ್ಟ್ರಧ್ವಜವನ್ನು ಬಳಸಬೇಕು.

ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಪ್ರಾಮುಖ್ಯತೆಗೆ ಈ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲೆಯ ಎಲ್ಲಾ ಇಲಾಖೆಗಳಿಗೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟನೆ ತಿಳಿಸಿದೆ.

Comments are closed.