ಕರಾವಳಿ

ಹೆಮ್ಮಾಡಿ: ಬಸ್ಸಿನ ಆಕ್ಸಿಲ್ ಕಟ್; ಟಯರ್ ಸ್ಪೋಟ; ನಾಲ್ವರಿಗೆ ಗಾಯ; ತಪ್ಪಿದ ಅನಾಹುತ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಗಂಗೊಳ್ಳಿಯಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸಿನ ಆಕ್ಸಿಲ್ ತುಂಡರಿಸಿ ಟಯರ್ ಸ್ಫೋಟಗೊಂಡ ಪರಿಣಾಮ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಮಣ್ಣಿನ ಗೋಡೆಗೆ ಡಿಕ್ಕಿ ಹೊಡೆದು ಜಖಂಗೊಂಡ ಘಟನೆಯಲ್ಲಿ ಬಸ್ಸಿನಲ್ಲಿದ್ದ ನಿರ್ವಾಹಕ ಹಾಗೂ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ನಡೆದಿದೆ.

ಬಸ್ಸಿನ ನಿರ್ವಾಹಕ ಕುಂದಾಪುರದ ರಾಕೇಶ್ ಖಾರ್ವಿ, ಗಂಗೊಳ್ಳಿಯಿಂದ ಬಸ್ಸಿನಲ್ಲಿ ಬರುತ್ತಿದ್ದ ಬಸ್ರೂರು ಮೂಲದ ಖತೀಜಾ ಗಾಯಗೊಂಡಿದ್ದು ಖತೀಜಾ ಅವರ 10 ವರ್ಷ ಪ್ರಾಯದ ಮೊಮ್ಮಗಳಿಗೂ ಗಾಯವಾಗಿದೆ. ಇನ್ನೋರ್ವ ಪ್ರಯಾಣಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Jaladi_Bus_Accident (1) Jaladi_Bus_Accident (2) Jaladi_Bus_Accident (3) Jaladi_Bus_Accident (4) Jaladi_Bus_Accident (5)

ಘಟನೆ ವಿವರ: ಗಂಗೊಳ್ಳಿಯಿಂದ ಪ್ರಯಾಣಿಕರನ್ನು ಕುಳ್ಳೀರಿಸಿಕೊಂಡು ಕುಂದಾಪುರದತ್ತ ಬರುತ್ತಿದ್ದ ಈ ಖಾಸಗಿ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮತ್ತು ಮೂವರು ಪ್ರಯಾಣಿಕರು ಮಾತ್ರವೇ ಇದ್ದರು. ಹೆಮ್ಮಾಡಿಯಿಂದ ಮುಂದಕ್ಕೆ ಸಾಗುತ್ತಿದ್ದಂತೆಯೇ ಬಸ್ಸಿನ ಆಕ್ಸಿಲ್ ತುಂಡರಿಸಿದೆ. ಅಲ್ಲದೇ ಟಯರ್ ಸ್ಪೋಟಗೊಂಡ ಪರಿಣಾಮ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಓಡಿದೆ. ಚಾಲಕ ರೋಹಿತ್ ಅವರು ಬಸ್ಸಿನ ಮೇಲೆ ಹತೋಟಿ ತಂದು ರಸ್ತೆಯ ಎಡಭಾಗಕ್ಕೆ ಚಲಾಯಿಸಿದಾಗ ಮಣ್ಣಿನ ದಂಡೆಗೆ ಹೊಡೆದು ಬಸ್ಸು ನಿಂತಿದೆ. ಒಮ್ಮೆಲೆ ಬಸ್ಸು ನಿಂತ ಪರಿಣಾಮ ಮುಂಭಾಗದಲ್ಲಿ ಕುಳಿತಿದ್ದ ನಿರ್ವಾಹಕ ಎದುರಿನ ಗಾಜು ಒಡೆದು ಹೊರಬಿದ್ದಿದ್ದಾರೆ. ಬಸ್ಸಿನೊಳಗಿದ್ದ ಮೂವರು ಪ್ರಯಾಣಿಕರಿಗೂ ಈ ಸಂದರ್ಭ ಗಾಯಗಳಾಗಿದೆ.

ತಪ್ಪಿದ ಅನಾಹುತ..
ನಿತ್ಯ ಈ ಸಮಯದಲ್ಲಿ ಗಂಗೊಳ್ಳಿಯ ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ಬಸ್ಸಿನಲ್ಲಿ ಬರುತ್ತಿದ್ದರು. ಮುಳ್ಳಿಕಟ್ಟೆ, ಹೆಮ್ಮಾಡಿ ಹಾಗೂ ಗುಜ್ಜಾಡಿ ಭಾಗದಲ್ಲಿ ವಿದ್ಯಾರ್ಥಿಗಳೆಲ್ಲರೂ ಇಳಿದುಕೊಂಡ ಕಾರಣ ಬಸ್ಸಿನಲ್ಲಿ ಮೂವರು ಪ್ರಯಾಣಿಕರು ಮಾತ್ರ ಇದ್ದರು. ಇದಲ್ಲದೇ ಬಸ್ಸಿನ ಟಯರ್ ಸ್ಪೋಟಗೊಂಡು ಅಡ್ಡಾದಿಡ್ಡಿ ಓಡಿದ ಬಸ್ಸು ಮಣಿನ ಗೋಡೆಯ ಪಕ್ಕ ನಿಂತಿದೆ. ಮಣ್ಣಿನ ಗೋಡೆ ಇಲ್ಲದ ಪಕ್ಷದಲ್ಲಿ ಬಸ್ಸು ಪಲ್ಟಿಯಾಗುವ ಸಂಭವವಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಗಾಯಾಳುಗಳು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.