*ಯೋಗೀಶ್ ಕುಂಭಾಸಿ
ಕುಂದಾಪುರ: ಕುಂದಾಪುರ ತಾಲ್ಲೂಕಿನೆಲ್ಲೆಡೆ ಬಾಯ್ತೆರೆದು ನಿಂತಿರುವ ಅಪಾಯಕಾರಿ ಮದಗಗಳು ಇನ್ನೆಷ್ಟು ಬಲಿಪಡೆಯಬೇಕು ಎಂಬ ಪ್ರಶ್ನೆ ಇದೀಗಾ ಪ್ರಜ್ಞಾವಂತ ನಾಗರೀಕರನ್ನು ಕಾಡುತ್ತಿದೆ. ತಾಲ್ಲೂಕಿನ ಹಟ್ಟಿಯಂಗಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕೆಂಚನೂರು ಸಮೀಪದ ಮಾವಿನಕೆರೆ ಎಂಬಲ್ಲಿನ ಅಪಾಯಕಾರಿ ಮದಗಕ್ಕೆ ಬಿದ್ದ ಯುವಕನೋರ್ವ ಮೃತಪಟ್ಟು ಇಂದಿಗೆ (ಜುಲೈ26) ಒಂದು ವರ್ಷದ ಕರಾಳ ನೆನಪು.
ಮಾವಿನಕೆರೆ ನಿವಾಸಿ ಮುತ್ತಯ್ಯ ದೇವಾಡಿಗ ಹಾಗೂ ಲಲಿತಾ ದಂಪತಿಗಳ ಪುತ್ರ ರಜಿತ್ ದೇವಾಡಿಗ (17) ಮದಗಕ್ಕೆ ಬಿದ್ದು ಮೃತಪಟ್ಟು ವರ್ಷವೇ ಉರುಳಿದರೂ ಆತನಿಗೆ ಸರಕಾರದ ಯಾವುದೇ ಪರಿಹಾರ ಸಿಕ್ಕಿಲ್ಲ. ಅಲ್ಲದೇ ಅಪಾಯಕಾರಿ ಮದಗಕ್ಕೆ ತಡಬೇಲಿ ಹಾಕುವ ಕಾರ್ಯವಾಗಲೀ ಅಥವಾ ಸೂಚನಾ ಫಲಕ ಅಳವಡಿಕೆಯಾಗಲೀ ಈವರೆಗೂ ನಡೆದಿಲ್ಲ.
ಅಷ್ಟಕ್ಕೂ ಆಗಿದ್ದಾದರೂ ಏನು..?
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ರಜಿತ್ ಕುಂದಾಪುರದ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ವಿದ್ಯಾಭ್ಯಾಸಕ್ಕಾಗಿ ತನ್ನ ತಂದೆಯ ಮನೆಯಾದ ಕೆಂಚನೂರು ಸಮೀಪದ ಮಾವಿನಕೆರೆಯಲ್ಲಿ ವಾಸವಿದ್ದ ರಜಿತ್ ಇಲ್ಲಿಂದಲೇ ನಿತ್ಯ ಶಾಲೆಗೆ ಹೋಗಿಬರುತ್ತಿದ್ದ. ಕಳೆದ ವರ್ಷ ಜುಲೈ26ರಂದು ಭಾನುವಾರ ರಜಾ ದಿನವಾದ ಕಾರಣ ಮನೆಯಲ್ಲಿಯೇ ಇದ ಈತ ಮಧ್ಯಾಹ್ನದ ಸುಮಾರಿಗೆ ಮನೆ ಸಮೀಪದಲ್ಲಿ ಬಂದ ದನಗಳನ್ನು ಓಡಿಸಲು ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಮದಗಕ್ಕೆ ಬಿದ್ದಿದ್ದ. ಸರಕಾರಿ ಹಾಗೂ ಪಟ್ಟಾ ಜಾಗದ ಆಜುಬಾಜಿನಲ್ಲಿರುವ ಈ ಮದಗಕ್ಕೆ ಯಾವುದೇ ರಕ್ಷಣಾ ಬೇಲಿಗಳಿರಲಿಲ್ಲ. ಮಾತ್ರವಲ್ಲದೇ ಈ ಮದಗವು ಆಳವಿದ್ದು ಈತನಿಗೆ ಈಜಲು ಬಾರದ ಕಾರಣ ಮದಗದ ನೀರಿನಲ್ಲಿಯೇ ಮುಳುಗಿ ಮೃತಪಟ್ಟಿದ್ದ. ಸತತ ಹುಡುಕಾಟದ ಬಳಿಕ ರಜಿತ್ ಶವ ಪತ್ತೆಯಾಗಿತ್ತು.
ಇನ್ನೂ ಸಿಗದ ಪರಿಹಾರ…
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಅಂದಿನ ಕುಂದಾಪುರ ತಹಶಿಲ್ದಾರ್ ಆಗಿದ್ದ ಗಾಯತ್ರಿ ನಾಯಕ್ ಪ್ರಾಕೃತಿಕ ವಿಕೋಪ ನಿಧಿಯಲ್ಲಿ ಪರಿಹಾರ ಒದಗಿಸುವ ಎಲ್ಲಾ ಭರವಸೆ ನೀಡಿದ್ದರು. ಈ ಬಗ್ಗೆ ಸ್ಥಳಿಯ ಗ್ರಾಮಪಂಚಾಯತ್ ಅಧಿಕಾರಿಗಳು ವರದಿ ನೀಡಿದ್ದರು. ಘಟನೆ ನಡೆದು ಒಂದು ವರ್ಷವಾದರೂ ಕೂಡ ಈವರೆಗೂ ರಜಿತನ ಬಡ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ.
ಯಾರದ್ದೋ ತಪ್ಪಿಗೆ ಪರಿಹಾರ ಮರಿಚಿಕೆ..?
ಘಟನೆಯ ಮೊದಲು ಮನೆಯಲ್ಲಿದ್ದ ರಜಿತ್ ದನಗಳನ್ನು ಓಡಿಸಲೆಂದು ತಾನು ಧರಿಸಿದ್ದ ಚಡ್ಡಿಯಲ್ಲಿಯೇ ಈ ಮದಗದತ್ತ ಹೋಗುತ್ತಾನೆ. ಅಲ್ಲಿ ಮಳೆಯ ನೀರಿದ್ದ ಕಾರಣ ಮದಗದ ಅಂಚಿನಲ್ಲಿ ಬರುವಾಗ ಆತ ಕಾಲು ಜಾರಿ ನೀರಿಗೆ ಬಿದ್ದಿದ್ದು ವಾಸ್ತವ ಸಂಗತಿಯಾಗಿತ್ತು. ಆದರೇ ಅಂದು ಘಟನೆಯ ತರುವಾಯ ಕೆಲವರು ಆತನ ಶವದ ಫೋಟೋಗಳನ್ನು ವಾಟ್ಸಾಪಿಗೆ ಹರಿಬಿಟ್ಟಿದ್ದರು. ಮತ್ತು ಮರುದಿನದ ಒಂದೆರಡು ಪತ್ರಿಕೆಯಲ್ಲಿಯೂ ಈಜಲು ತೆರಳಿ ಬಿದ್ದಿದ್ದೆಂಬ ವರದಿ ಜೊತೆಗೆ ಆತ ಚಡ್ಡಿಯಲ್ಲಿರುವ ಫೋಟೋ ಪ್ರಕಟವಾಗಿದ್ದು ಈ ಬಗ್ಗೆ ಕೆಲವು ಗೊಂದಲಗಳು ಏರ್ಪಟ್ಟಿತ್ತು. ಒಂದು ಹಂತದಲ್ಲಿ ಆತ ಈಜಲು ತೆರಳಿ ಸತ್ತಿರಬಹುದೆಂಬ ನಿರ್ಧಾರಕ್ಕೆ ಈ ಫೋಟೋಗಳು ಸಾಕ್ಷೀಕರಿಸಿದ್ದವು ಎನ್ನಲಾಗಿದೆ. ತಹಶಿಲ್ದಾರ್ ಅವರು ಫೋಟೋ ಸಮೆತ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು ಜಿಲ್ಲಾಧಿಕಾರಿಗಳು ಈ ಪರಿಹಾರವನ್ನು ತಡೆಹಿಡಿದಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಕೆಲ ಅಡಚಣೆಗಳಿರುವ ಕಾರಣ ಕಾನೂನು ತೊಶ್ಡಕಿನ ಬಗ್ಗೆ ಪರಾಮರ್ಷಿಸಿ ಬೇರ್ಯಾವುದಾದರೂ ಮೂಲದಿಂದ ಪರಿಹಾರ ಒದಗಿಸುವ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.
ರಜಿತ್ ತೀರಾ ತೀರಾ ಬಡಕುಟುಂಬವಾಗಿದ್ದು ರಜಿತ್ ದೇವಾಡಿಗ ಅವರ ತಂದೆ ಮುತ್ತಯ್ಯ ದೇವಾಡಿಗ ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು ತಾಯಿ ಲಲಿತಾ ಹಾಗೂ ಸಹೋದರಿಯೋರ್ವಳು ಆಲೂರಿನ ಅಜ್ಜಿಮನೆಯಲ್ಲಿ ವಾಸವಿದ್ದಾರೆ. ಉನ್ನತ ವಿದ್ಯಾಭ್ಯಾಸದ ಆಸೆ ಹೊತ್ತಿದ್ದ ರಜಿತ್ ತನ್ನ ತಂದೆ ಮನೆ ಮಾವಿನಕೆರೆಯಲ್ಲಿಯೇ ಕೆಲವು ವರ್ಷಗಳಿಂದ ವಾಸವಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದ.ಆತನ ಸಾವಿನ ನೋವಿನಿಂದ ಇನ್ನೂ ಆತನ ಕುಟುಂಬದವರು ಹೊರಬಂದಿಲ್ಲ. ಇತ್ತ ಸಿಗಬಹುದಾದ ಪರಿಹಾರ ದೊರೆತಿದ್ದರೇ ಆತನ ಸಹೋದರಿಯ ಮುಂದಿನ ಭವಿಷ್ಯಕ್ಕಾದರೂ ಅನುಕೂಲವಾಗುತ್ತಿತ್ತು ಎಂದು ಸಂಬಂಧಿಕರು ಅಳಲನ್ನು ತೋಡಿಕೊಂಡಿದ್ದಾರೆ.
ಹಟ್ಟಿಯಂಗಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕೆಂಚನೂರಿನ ಮಾವಿನಕೆರೆ ಮದಗಕ್ಕೆ ರಜಿತ್ ಎನ್ನುವ ವಿದ್ಯಾರ್ಥಿ ಬಿದ್ದು ಮೃತಪಟ್ಟು ವರ್ಷ ಕಳೆದಿದೆ. ಗ್ರಾಮಪಂಚಾಯತ್ ಮಟ್ಟದಲ್ಲಿ ಇಷ್ಟೊಂದು ಪರಿಹಾರ ನೀಡಲು ಸಾಧ್ಯವಿಲ್ಲ. ಸರಕಾರ ಮಟ್ಟದಿಂದಲೇ ಈ ಪರಿಹಾರ ಒದಗಿಸಬೇಕಾಗಿದ್ದು ಈ ಬಗ್ಗೆ ವಿಧಾನಪರಿಷತ್ ಸದಸ್ಯ ಶ್ರೀನಿವಾಸ್ ಪೂಜಾರಿಯವರ ಜೊತೆಗೆ ಒಂದೆರಡು ದಿನಗಳ ಹಿಂದೆ ಚರ್ಚೆ ನಡೆದಿದ್ದೇನೆ. ಅವರು ಕೂಡ ಸಂಬಂದಪಟ್ಟ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ್ದಾರೆ. ಉಳಿದಂತೆ ಪಂಚಯಾತಿಯಲ್ಲಿ ಅನುದಾನದ ಕೊರತೆ ಇರುವ ಕಾರಣ ತಡಬೇಲಿ ಹಾಗೂ ಎಚ್ಚಾರಿಕಾ ಸೂಚನಾ ಫಲಕ ಅಳವಡಿಸುವುದು ಕೊಂಚ ನಿಧಾನವಾಗಿದೆ. ಶೀಘ್ರವೇ ಕೆಲಸ ಪೂರೈಸುತ್ತೇವೆ ಎಂದು ಹಟ್ಟಿಯಂಗಡಿ ಗ್ರಾ.ಪಂ. ಅಧ್ಯಕ್ಷ ರಾಜೀವ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿರಿ:
ಕುಂದಾಪುರ: ಮೃತ್ಯುಕೂಪವಾದ ಮದಗ; ಕಾಲು ಜಾರಿ ಮದಗಕ್ಕೆ ಬಿದ್ದು ಪಿಯುಸಿ ವಿದ್ಯಾರ್ಥಿ ಸಾವು
Comments are closed.