ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ನಿನ್ನೆಯಿಂದ ಆರಂಭಿಸಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇದೇ ಸಂದರ್ಭದಲ್ಲಿ ಇಂದು ಮಧ್ಯಾಹ್ನದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ವೇತನವನ್ನು ಶೇ.35ರಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸೆಡ್ಡು ಹೊಡೆದಿರುವ ರಾಜ್ಯ ಸರ್ಕಾರ ತರಬೇತಿ ನಿರತ ಚಾಲಕರಿಂದ ಬಿಗಿ ಭದ್ರತೆಯಲ್ಲಿ ಕೆಲವು ಬಿಎಂಟಿಸಿ ಮತ್ತು ಕೆಎಸ್‌ಆರ್ ಟಿಸಿ ಬಸ್ ಸಂಚಾರಕ್ಕೆ ಮುಂದಾಗುವ ಮೂಲಕ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ.
ಬೆಂಗಳೂರಿನ ವಿವಿಧೆಡೆ ಪೊಲೀಸ್ ಭದ್ರತೆಯೊಂದಿಗೆ ಬಸ್ ಸಂಚಾರ ಆರಂಭವಾಗಿದೆ. ಶಾಂತಿನಗರ ಬಸ್ ನಿಲ್ದಾಣದಿಂದ 3 ಬಿಎಂಟಿಸಿ ಬಸ್, ಶಾಂತಿನಗರ ಡಿಪೋದಿಂದ 6 ಬಸ್, ಜಯನಗರ, ಶಿವಾಜಿನಗರ ಕಡೆಗೆ ತಲಾ 2 ಬಸ್ ಗಳ ಸಂಚಾರ ಆರಂಭಗೊಂಡಿದೆ. ನೌಕರರ ಮುಷ್ಕರಕ್ಕೆ ಜಗ್ಗದ ರಾಜ್ಯ ಸರ್ಕಾರ ಇದೀಗ ತರಬೇತಿ ನಿರತ ಚಾಲಕರು ಹಾಗೂ ನಿರ್ವಾಹಕರನ್ನು ಬಳಸಿಕೊಂಡು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೆಲವು ಬಸ್ ಗಳ ಸಂಚಾರ ಆರಂಭಿಸಿದೆ.
ಶಾಂತಿನಗರ ಬಸ್ ಡಿಪೋದಿಂದ ಒಟ್ಟು ನಾಲ್ಕು ಬಸ್ ಗಳ ಸಂಚಾರ ಆರಂಭಗೊಂಡಿದ್ದು, ಆ ಪೈಕಿ ಒಂದು ಶಾಂತಿನಗರದಿಂದ ಮೆಜೆಸ್ಟಿಕ್ ಮಾರ್ಗದಲ್ಲಿ 1, ಶಾಂತಿನಗರದಿಂದ ಶಿವಾಜಿನಗರಕ್ಕೆ 1, ಶಾಂತಿನಗರದಿಂದ ಜಯನಗರಕ್ಕೆ 1 ಹಾಗೂ ಶಾಂತಿನಗರದಿಂದ ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿವೆ.
ಇನ್ನು ಕೆಎಸ್‌ಆರ್ ಟಿಸಿ ಸಹ ನಗರದ ವಿವಿಧೆಡೆ ಸಂಚಾರ ಆರಂಭಿಸಿದ್ದು, ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ 8 ಕೆಎಸ್‌ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ.ಅದೇ ರೀತಿ ಮೈಸೂರಿನಿಂದ ಕುಶಾಲನಗರಕ್ಕೆ, ಮಂಡ್ಯದಿಂದ ಮದ್ದೂರಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಶುರುವಾಗಿದೆ ಎನ್ನಲಾಗಿದೆ.
ಎರಡನೇ ದಿನಕ್ಕೆ ಕಾಲಿಟ್ಟಿದ್ದ ಬಸ್ ಮುಷ್ಕರವನ್ನು ಶತಾಯಗತಾಯ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ, ಸಂಜೆಯೊಳಗೆ ಕೆಲಸಕ್ಕೆ ವಾಪಸಾಗದಿದ್ದರೆ ಮುಷ್ಕರ ನಿರತ ನೌಕರರನ್ನು ಕೆಲಸದಿಂದಲೇ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.
Comments are closed.