ಮಂಗಳೂರು, ಜು.25 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಎಂದಿನಂತೆಯೇ ಇದೆ. ದ.ಕ. ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮುಂಜಾನೆ ಸ್ವಲ್ಪ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಗ್ರಾಮೀಣ ಪ್ರದೇಶಗಳ ಏಕೈಕ ಸಂಪರ್ಕ ವ್ಯವಸ್ತೆಯಾಗಿದ್ದ ಸಾರಿಗೆ ಸಂಸ್ಥೆಯ ಬಸ್ ಗಳು ಬಾರದ ಹಿನ್ನೆಲೆಯಲ್ಲಿ ಜನರು ಪೇಟೆಗೆ ಬರಲು ಪರದಾಡುವಂತಾಗಿದೆ. ಧರ್ಮಸ್ಥಳದ ರಾಜ್ಯ ಸಾರಿಗೆ ಸಂಸ್ಥೆಯ ಡಿಪ್ಪೋದಲ್ಲಿ ಬಸ್ ಗಳು ಸಾಲಾಗಿ ನಿಂತಿದ್ದು ನೌಕರರು ಬಸ್ ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಸರಕಾರಿ ಬಸ್‌ಗಳಿಗಿಂತ ಖಾಸಗಿ ಬಸ್ ಸಂಚಾರ ವ್ಯವಸ್ಥಿತವಾಗಿರುವ ಜಿಲ್ಲೆಯ ನಗರ ಪ್ರದೇಶದಲ್ಲಿ ಜನರು ಸಂಚಾರಕ್ಕಾಗಿ ಪರದಾಟ ನಡೆಸುವ ಪ್ರಮೇಯ ಎದುರಾಗಿಲ್ಲ. ಗ್ರಾಮಾಂತರ ಭಾಗವಾದ ಪುತ್ತೂರು, ಸುಳ್ಯ, ಬಂಟ್ವಾಳ ಪ್ರದೇಶದ ಜನರು ನಿತ್ಯ ಪ್ರಯಾಣಿಸುವ ಸರಕಾರಿ ಬಸ್‌ಗಳು ಸಂಚಾರಕ್ಕೆ ಲಭ್ಯವಾಗದ ಕಾರಣ ತುಂಬಿ ತುಳುಕುವ ಖಾಸಗಿ ಬಸ್‌ಗಳಲ್ಲೇ ಕೊಂಚ ವಿಳಂಬವಾಗಿ ಪ್ರಯಾಣ ನಡೆಸಬೇಕಾಯಿತು.
ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆದಿತ್ಯವಾರ ರಾತ್ರಿಯೇ ಸರಕಾರಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿ ನಿಲ್ಲಿಸಲಾಗಿತ್ತು. ಇದರಿಂದ ತುರ್ತಾಗಿ ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಿಗೆ ಪ್ರಯಾಣ ಬೆಳೆಸುವವರು, ಬಸ್ ಮುಷ್ಕರದ ಬಗ್ಗೆ ತಿಳಿಯದೇ ಇದ್ದವರು ಸಂಚಾರಕ್ಕಾಗಿ ಪರದಾಡಿದರು. ಬಿಜೈ ಜಂಕ್ಷನ್ ಬಳಿ ಮಧ್ಯರಾತ್ರಿಯವರೆಗೆ ಪ್ರಯಾಣಿಕರು ಕಾದು ಕುಳಿತಿದ್ದರು. ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಒಮ್ಮೆಲೇ ದುಪ್ಪಟ್ಟುಗೊಳಿಸಿದ್ದು, ತುರ್ತು ಪ್ರಯಾಣಿಸಬೇಕಿದ್ದವರು ಚೌಕಾಸಿ ಮಾಡಿಕೊಂಡು ಸಂಚರಿಸಿದರು. ಇನ್ನು ಖಾಸಗಿ ಬಸ್‌ಗಳು ಸಿಕ್ಕಿದ್ದು ಲಾಭ ಎಂದು ಪ್ರಯಾಣಿಕರನ್ನು ಸಾಮರ್ಥ್ಯಕ್ಕಿಂತ ಜಾಸ್ತಿ ತುಂಬಿಸಿ ಕರೆದೊಯ್ದ ಘಟನೆಯೂ ನಡೆಯಿತು.
ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ನೌಕರರು ಯಾವುದೇ ರೀತಿಯ ಅಹಿತಕರ ಘಟನೆಗಳಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಲು ಪೊಲೀಸ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಸಾರಿಗೆ ಬಸ್‌ಗಳ ಸಂಚಾರ ಹೆಚ್ಚಿರುವ ಸುಳ್ಯ, ಪುತ್ತೂರು, ಬಂಟ್ವಾಳ, ಬಿ.ಸಿ.ರೋಡ್ ಮತ್ತಿತರ ಕಡೆಗಳಲ್ಲಿ ಖಾಸಗಿ ಬಸ್, ಕ್ಯಾಬ್‌ಗಳ ಸಂಚಾರವನ್ನು ಹೆಚ್ಚಿಸಲಾಗಿದೆ. ಇದರಿಂದ ಬಂದ್ ಬಿಸಿ ಇಲ್ಲಿ ಅಷ್ಟಾಗಿ ತಟ್ಟದೇ ಇದ್ದರೂ ಸರಕಾರಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಯಿತು. ಮುಂಜಾನೆ ಶಾಲೆ, ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳು ಸಕಾಲದಲ್ಲಿ ತಲುಪಲು ಸಾಧ್ಯವಾಗಲಿಲ್ಲ.
ಶೇ. ೩೫ರಷ್ಟು ವೇತನ ಪರಿಷ್ಕರಣೆ ಸೇರಿದಂತೆ ೪೨ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 25ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಜು.25 ಮತ್ತು 26ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಡಳಿತ ರಜೆ ಘೋಷಿಸಿಲ್ಲ.
ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲೆಯ ಬಹುತೇಕ ಪ್ರದೇಶಗಳ ಜನರು ಸರಕಾರಿ ಬಸ್ ಗಳನ್ನೇ ಅವಲಂಬಿಸಿದ್ದು, ಬಸ್ ಬಾರದ ಹಿನ್ನೆಲೆಯಲ್ಲಿ ಮಕ್ಕಳು ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದರು.
ಕೆಲವರು ಖಾಸಗಿ ವಾಹನಗಳನ್ನು ಅವಲಂಬಿಸಿದರಾದರೂ ಹೆಚ್ಚು ಮಕ್ಕಳನ್ನು ಸಾಗಿಸಲು ಅವರು ವಿಫಲರಾಗಿದ್ದಾರೆ. ಕೆಲ ಸರ್ವೀಸ್ ವಾಹನಗಳು ಮಕ್ಕಳನ್ನು ಹತ್ತಿಸದೆ ಹೋಗುತ್ತಿದ್ದರು. ಗ್ರಾಮಗಳಿಂದ ಸಿಕ್ಕಿದ ವಾಹನಗಳಲ್ಲಿ ಬಂದವರು ಅಲ್ಲಿಂದ ಮುಂದೆ ಕಾಲೇಜುಗಳಿಗೆ ಹೋಗದೆ ವಾಹನಗಳಿಲ್ಲದೆ ಪರದಾಡಿದರು.ಪ್ರಮುಖ ಸ್ಥಳಗಳಲ್ಲಿ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Comments are closed.