ಕರಾವಳಿ

ಕೊರ್ಗಿ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣಕ್ಕೆ 1 ವರ್ಷ 1 ತಿಂಗಳು; ತಾಯಿಯ ಹುಡುಕಾಟದ ಹೋರಾಟದಲ್ಲಿ ಪುತ್ರ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ತಾಲೂಕು ತೆಕ್ಕಟ್ಟೆ ಸಮೀಪದ ಕೊರ್ಗಿ ಚಾರುಕೊಟ್ಟಿಗೆ ನಿವಾಸಿ ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಅವರ ಪತ್ನಿ ಮಾಲತಿ ಶೆಟ್ಟಿ (65) ನಾಪತ್ತೆಯಾಗಿ ಜುಲೈ24ಕ್ಕೆ ಒಂದು ವರ್ಷ ಒಂದು ತಿಂಗಳು ಕಳೆದಿದೆ. ಆದರೇ ಇನ್ನೂ ಕೂಡ ಮಾಲತಿ ಅವರ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಶೋಧಕಾರ್ಯ ನಡೆಸಿದರೂ ಕೂಡ ಫಲಿತಾಂಶ ಮಾತ್ರ ಶೂನ್ಯವಾಗಿದೆ.

Korgi Malathi Shetty_Missing_Case

1 ವರ್ಷದಲ್ಲಿ ನಡೆದ ಬೆಳವಣಿಗೆಗಳು….
ಕಳೆದ ವರ್ಷ ಜೂ.24ರಂದು ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಮನೆಯಿಂದ ಊಟ ಮಾಡಿ, ಮತ್ತೆ ಅಕ್ಕಿ ತೊಳೆದು ಅನ್ನಕ್ಕಿಟ್ಟು ಸಮೀಪದ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಇವರು ಮತ್ತೆ ಮನೆಗೆ ಮರಳದೇ ನಿಗೂಢವಾಗಿ ನಾಪತ್ತೆಯಾಗಿದ್ದು ಅವರ ಸುಳಿವು ಇಂದಿಗೂ ಅಲಭ್ಯವಾಗಿದೆ. ಮಾಲತಿಯವರ ನಿಗೂಢ ಕಣ್ಮರೆಯಿಂದ ನೊಂದಿರುವ ಅವರ ಕುಟುಂಬ ಇನ್ನೂ ಗೊಂದಲದಲ್ಲಿಯೇ ಇದೆ. ತನ್ನ ತಾಯಿ ಮಾಲತಿ ಶೆಟ್ಟಿಯವರನಿಗೂಢ ನಾಪತ್ತೆ ಪ್ರಕರಣ ಬಯಲಿಗೆಳೆಯಲೆಬೇಕೆಂಬ ಹಠದಿಂದ ಅವರ ಪುತ್ರ ಅಮೇರಿಕಾದಲ್ಲಿ ಸಾಪ್ಟ್‌ವೇರ್ ಉದ್ಯೋಗಿಯಾಗಿರುವ ಸತೀಶ್ ಶೆಟ್ಟಿ ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ತನಿಖೆಯನ್ನು ತೀವ್ರಗೊಳಿಸುವಂತೆ ಕೋರಿ ಅವರು ಕಳೆದ ನವಂಬರ್ ತಿಂಗಳಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ ತನ್ನ ಭಾವ ರಾಮ ಮನೋಹರ ಶೆಟ್ಟರ ಮೂಲಕ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು. ನವಂಬರ್ 20ರಂದು ಹೈಕೋರ್ಟ್ ಇವರ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ ಮಾಲತಿ ಶೆಟ್ಟಿ ಅವರ ಹುಡುಕಾಟಕ್ಕೆ ಸಂಬಂಧಿಸಿದ ಪ್ರಗತಿ ವರದಿ ಸಲ್ಲಿಸುವಂತೆ ರಾಜ್ಯ ರಾಜ್ಯ ಗೃಹ ಇಲಾಖೆ ಮತ್ತು ಕುಂದಾಪುರ ಪೊಲೀಸ್ ಠಾಣೆ ವಿಭಾಗ ಐಜಿಪಿಗೆ ನಿರ್ದೇಶಿಸಿತ್ತು.

Malathi_Shetty_Missing DSCN1140

(ಮಾಲತಿ ಬಿ.ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ)

ಅಮೆರಿಕಾದಿಂದ ಬಂದ ಮಗ…
ತಾಯಿ ಮಾಲತಿ ಬಿ.ಶೆಟ್ಟಿ ಅವರ ಹುಡುಕಾಟಕ್ಕೆ ಪುತ್ರ ಸತೀಶ್ ಶೆಟ್ಟಿ ನಿರಂತರ ಶ್ರಮಿಸುತ್ತಿದ್ದಾರೆ. ಕಳೆದ ವರ್ಷ ತಾಯಿ ನಾಪತ್ತೆಯಾದ ವಿಚಾರ ತಿಳಿದ ತಕ್ಷಣ ಅಮೆರಿಕಾದಿಂದ ಊರಿಗೆ ಆಗಮಿಸಿದ ಸತೀಶ ಶೆಟ್ಟಿ ತಿಂಗಳುಗಳ ಕಾಲ ಊರಲ್ಲಿದ್ದು ಸತತ ಡುಕಾಟ ನಡೆಸಿದರು. ಆದರೇ ಯಶಸ್ಸು ಸಿಗದಾಗ ಪುನಃ ಅಮೇರಿಕಾಗೆ ತೆರಳಿದ ಅವರು ಅಲ್ಲಿ ಸುಮ್ಮನೇ ಕೂರದೇ ನಿರಂತರವಾಗಿ ಪೊಲೀಸ್ ಇಲಾಖೆಯ ಸಂಪರ್ಕದಲ್ಲಿದ್ದರು. ತಾಯಿಯ ಹುಡುಕಾಟಕ್ಕೆಂದು ವೆಬ್‌ಸೈಟ್‌ವೊಂದನ್ನು ಆರಂಭಿಸಿದರು. ಅಷ್ಟೇ ಅಲ್ಲ ತಾಯಿಯ ಸುಳಿವು ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವ ಘೋಷಣೆ ಜೊತೆ ಜೊತೆಗೆ ರಾಜ್ಯಾದ್ಯಂತ ತಾಯಿಯ ನಾಪತ್ತೆ ಬಗೆಗಿನ ಫೋಸ್ಟರ್ ಅಂಟಿಸಿ ಪತ್ತೆಗೆ ಮನವಿ ಮಾಡಿಕೊಂಡಿದ್ದರು. ತಾಯಿ ನಾಪತ್ತೆಗೆ ವರ್ಷವಾಗುತ್ತಿದ್ದು ಯಾವುದೇ ಸುಳಿವು ಸಿಕ್ಕದ ಹಿನ್ನೆಲೆ ಈ ವರ್ಷವೂ ಅಮೆರಿಕಾದಿಂದ ಊರಿಗೆ ಬಂದ ಮಗ ಅದೇ ಪ್ರಕರಣದ ಬೆನ್ನು ಬಿದ್ದಿದ್ದಾರೆ.

ಗೊಂದಲದ ಗೂಡಾದ ಪ್ರಕರಣ…
ಕೊರ್ಗಿಯ ಮಾಲತಿ ಶೆಟ್ಟಿ ಅವರು ಅವರು ಮನೆಯಿಂದ ತೆರಳುವ ದಿನದಂದು ಕೂಡಾ ನಾಲ್ಕು ಚಿನ್ನದ ಬಳೆಗಳು, ಚಿನ್ನದ ಕರಿಮಣಿ, ಮೂಗೂತಿ, ಬೆಂಡೋಲೆ ಹಾಗೂ ಉಂಗುರ ಸೇರಿಂದತೆ ಅಂದಾಜು ೩.೫ ಲಕ್ಷ ಮೌಲ್ಯದ ಆಭರಣ ಧರಿಸಿದ್ದರು. ಯಾರೋ ಆಗಂತುಕರು ಮಾಲತಿ ಶೆಟ್ಟಿಯವರು ಧರಿಸಿದ್ದ ಚಿನ್ನಕ್ಕಾಗಿ ಅವರನ್ನು ಅಪಹರಿಸಿರಬಹುದೇ ಅಥವಾ ಯಾರಾದರೂ ಅವರ ಜೀವಕ್ಕೆ ಕುತ್ತು ತಂದಿರಬಹುದೇ ಎಂಬ ಎನ್ನುವ ಅನುಮಾನಗಳು ಕಾಡತೊಡಗಿವೆಯಾದರೂ ಎಲ್ಲೆಡೆ ಹುಡುಕಾಟ ನಡೆಸಿದರೂ ಕೂಡಾ ಮಾಲತಿ ಪತ್ತೆಯಾಗಿಲ್ಲ, ಕುರುಹು ಲಭ್ಯವಾಗಿಲಲ್ಲ. ಇನ್ನು ಒಂದು ಮೂಲಗಳ ಪ್ರಕಾರ ಅವರು ಬೇರ್ಯಾವುದೋ ಪ್ರದೇಶಕ್ಕೆ ಮನನೊಂದು ತೆರಳಿರಬಹುದೆಂಬ ಮಾತುಗಳಿದ್ದರೂ ಕೂಡ ಅನಾರೋಗ್ಯವಿರುವ ಮಾಲತಿ ಅವರು ಮಾತ್ರೆ ಔಷದವಿಲ್ಲದೇ ಇಷ್ಟು ದಿನ ಹೊರಗಡೆ ಇರುವುದು ಅಸಾಧ್ಯ ಎನ್ನುವ ಮಾತುಗಳು ಅವರ ಕುಟುಂಬ ಮೂಲಗಳಿಂದ ಕೇಳಿಬರುತ್ತಿದೆ.

ಮಾಲತಿ ಶೆಟ್ಟಿ ನಿಗೂಢವಾಗಿ ನಾಪತ್ತೆಯಾಗಿ ಇಂದಿಗೆ ಒಂದು ವರ್ಷ ಒಂದು ತಿಂಗಳಾಗಿದೆ. ವಿವಿದ ಗೊಂದಲ ಹಾಗೂ ಸಂಶಯದ ನಡುವೆಯೇ ಅವರ ಕುಟುಂಬ ಜೀವನ ನಡೆಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಕಂಡುಹಿಡಿದು ಪ್ರಕರಣಕ್ಕೊಂದು ಅಂತ್ಯ ಹಾಡಬೇಕೆಂದು ಸತೀಶ್ ಶೆಟ್ಟಿ ಸಜ್ಜಾಗಿದ್ದಾರೆ.

Comments are closed.