ಮಂಗಳೂರು: ನಗರದ ಪಡೀಲ್‌ನಲ್ಲಿ ಇತ್ತೀಚಿಗೆ ನಡೆದಿದ್ದ ಗಣೇಶ್ ಆಚಾರ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಡೀಲ್ ಅಳಪೆಯ ಉಮಾಶಂಕರ ( 39 ) , ಕಣ್ಣೂರುನ ಶಶಿರಾಜ್ (30), ವೀರನಗರದ ನಿತಿನ್ ಕುಮಾರ್ ( 32) ಹಾಗೂ ಪಡೀಲ್ನ ಆಲ್ವಿನ್ ಸಿಕ್ವೇರಾ ( 25) ಎಂದು ಹೆಸರಿಸಲಾಗಿದೆ.
ಜುಲೈ 20ರಂದು ಮಂಗಳೂರಿನ ಪಡೀಲ್ ಎಂಬಲ್ಲಿರುವ ಅಜಿತ್ ಬಾರ್ ನ ಬಳಿಯಲ್ಲಿರುವ ಬಾವಿಯಲ್ಲಿ ಕಣ್ಣೂರು ನಿವಾಸಿ ಗಣೇಶ್ ಆಚಾರ್ಯ ಎಂಬವರ ಮೃತದೇಹವು ಸಿಕ್ಕಿದ್ದು, ಈ ಮೃತದೇಹವನ್ನು ಪರಿಶೀಲಿಸಿದ ಗಣೇಶ್ ಆಚಾರ್ಯ ಎಂಬವರ ಅಣ್ಣ ಸುಧಾಕರ ಆಚಾರ್ಯ ಎಂಬವರು ದೂರು ನೀಡುವ ಸಮಯದಲ್ಲಿ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಈ ಪ್ರಕರಣ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಶಯಿತ ಅಸ್ವಾಭಾವಿಕ ಮರಣವೆಂದು ಪ್ರಕರಣ ದಾಖಲಾಗಿದ್ದು,ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆ ನಡೆಸಲು ಸಿಸಿಬಿ ಸೇರಿದಂತೆ ತಂಡಗಳನ್ನು ರಚಿಸಿದ್ದರು. ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು ಕೊಲೆ ಮಾಡಿದ ಆರೋಪಿಗಳ ಬಗ್ಗ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಜು.23 ರಂದು ಸಂಜೆ 4.30 ಗಂಟೆಗೆ ನಾಲ್ವರು ಆರೋಪಿಗಳನ್ನು ಕಂಕನಾಡಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಗಣೇಶ್ ಆಚಾರ್ಯರ ಮೇಲೆ ಮಾರಣಾಂತಿಕ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಗಣೇಶ್ ಆಚಾರ್ಯ ಆರೋಪಿ ಉಮಾಶಂಕರ್ ನ ತಂದೆಗೆ ಅವ್ಯಾಚ್ಯವಾಗಿ ನಿಂದಿಸುತ್ತಿದ್ದು ಇದಕ್ಕೆ ಪ್ರತಿಕಾರವಾಗಿ ಈ ಕೊಲೆಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತರ ಆದೇಶದಂತೆ ಕಾನೂನು ಹಾಗೂ ಸುವ್ಯವಸ್ಥೆ ಡಿಸಿಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್ಐ ರವರಾದ ಶ್ಯಾಮ್ ಸುಂದರ್.ಹೆಚ್.ಎಂ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
Comments are closed.