ಬೆಂಗಳೂರು: ಬೇಡಿಕೆಗಳು ಈಡೇರುವವರೆಗೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸ್ಪಷ್ಟಪಡಿಸಿದೆ.
ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದಿನಿಂದ ಕೆಎಸ್‍ಆರ್‍ಟಿಸಿ ನಾಲ್ಕೂ ನಿಗಮಗಳ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ. ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ವೇತನ ಹೆಚ್ಚಳ ಸಂದರ್ಭದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡು 1.25 ಲಕ್ಷ ನೌಕರರಿಗೆ ಅನ್ಯಾಯ ಮಾಡಿದೆ ಎಂದು ಎಐಟಿಯುಸಿ ಮುಖ್ಯಸ್ಥ ಎಚ್.ವಿ.ಅನಂತಸುಬ್ಬರಾವ್ ಆರೋಪಿಸಿದರು. ಕೆಎಸ್‍ಆರ್‍ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 41 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿತ್ತು.
ನಾವು ಏಕಾಏಕಿ ಪ್ರತಿಭಟನೆ ನಿರ್ಧಾರ ಕೈಗೊಂಡಿಲ್ಲ. ಕಳೆದ ಆರು ತಿಂಗಳ ಹಿಂದೆಯೇ ಸರ್ಕಾರದ ಗಮನಕ್ಕೆ ತಂದಿದ್ದೆವು. ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸಂಪುಟದಲ್ಲಿ ಕೇವಲ ಶೇ.8ರಷ್ಟು ವೇತನ ಹೆಚ್ಚಳ ನಿರ್ಧಾರ ಕೈಗೊಂಡಿದೆ.
ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸದೆ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಕ್ರಮವನ್ನು ನಾವು ವಿರೋಧಿಸುತ್ತೇವೆ. ಕೇಂದ್ರ ಸರ್ಕಾರ ನೌಕರರಿಗೆ 23.55 ವೇತನ ಹೆಚ್ಚಳ ಮಾಡಲಾಗಿದೆ. ಆದರೆ, ನಮ್ಮ ನೌಕರರಿಗೆ ತೀವ್ರ ಅನ್ಯಾಯವಾಗಿದೆ. ಅದಕ್ಕಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. ನಿಗಮ ನಷ್ಟವುಂಟಾದಾಗ ಸರ್ಕಾರ ನಷ್ಟ ಎಂದು ಹೇಳುತ್ತದೆ. ಆದರೆ, ಲಾಭ ಬಂದಾಗ ಲಾಭಾಂಶವನ್ನು ನೌಕರರಿಗೆ ಕೊಡುತ್ತದೆಯೇ ಎಂದು ಪ್ರಶ್ನಿಸಿದರು. ಅಖಿಲ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಶರ್ಮ ಮಾತನಾಡಿ, ಪ್ರತಿಭಟನೆಯಿಂದ ಜನರಿಗಾಗುವ ತೊಂದರೆಗೆ ಕ್ಷಮೆ ಯಾಚಿಸುತ್ತೇವೆ. ಸರ್ಕಾರ ನಮ್ಮೆಲ್ಲ ಬೇಡಿಕೆಗಳನ್ನೂ ಸಂಪೂರ್ಣವಾಗಿ ಕಡೆಗಣಿಸಿದೆ.
ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಹೇಳಿದರು. ನೌಕರರ ಅವಲಂಬಿತ ತಂದೆ-ತಾಯಿಯರು ಸೇರಿದಂತೆ ವೈದ್ಯಕೀಯ ವೆಚ್ಚದ ಪೂರ್ಣ ಹಣವನ್ನು ಚಾಲಕರಿಗೆ ಮರು ಪಾವತಿಸಬೇಕು. ಚಾಲಕರು ಹಾಗೂ ನಿರ್ವಾಹಕರು ಮಾಡುವ ಕೆಲಸಕ್ಕೆ ಪೂರ್ಣ ಸಂಬಳ ಕೊಡದೆ ಹೆಚ್ಚುವರಿ ವೇತನದಿಂದ ವಂಚಿತರಾಗುವಂತೆ ಸರ್ಕಾರ ಮಾಡಿದೆ. ಕಾನೂನು ಬಾಹಿರ ವೇತನ ಕಡಿತಗಳಿಂದ, ನೌಕರರ ವೇತನದಿಂದ ಶೇ.10 ರಿಂದ 20ರಷ್ಟು ವೇತನವನ್ನು ಆಡಳಿತವರ್ಗ ದೋಚುತ್ತಿದೆ. ಅನಗತ್ಯವಾಗಿ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳೂ ಪರಿಹಾರವಾಗಬೇಕೆಂದು ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದೆವು. ಆದರೆ, ಸರ್ಕಾರ ಯಾವುದನ್ನೂ ಪರಿಗಣಿಸದೆ ಕೇವಲ ಶೇ.8ರಷ್ಟು ವೇತನ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಹಾಗಾಗಿ ನಾವು ಮುಷ್ಕರಕ್ಕಿಳಿದಿದ್ದೇವೆ. ನೌಕರರಿಗೆ ನ್ಯಾಯ ಒದಗಿಸುವುದು ನಮ್ಮ ಹೋರಾಟ ಎಂದು ಅವರು ತಿಳಿಸಿದರು.
ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಅಧ್ಯಕ್ಷ ಎ.ವಿ.ಬೋರಶೆಟ್ಟಿ , ಕೆಎಸ್‍ಆರ್‍ಟಿಸಿ ಎಸ್‍ಸಿ-ಎಸ್‍ಟಿ ಪಂಗಡ, ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಮಲ್ಲಿಕಾರ್ಜುನ್ ಮೂರ್ತಿ ಮುಂತಾದವರು ಈ ಸಂದರ್ಭದಲ್ಲಿದ್ದರು.
Comments are closed.