
ಬೆಂಗಳೂರು: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಜೆ.ಪಿ. ನಗರದಿಂದ ಹೆಬ್ಬಾಳದವರೆಗೆ ಹಾಗೂ ಮಾಗಡಿ ರಸ್ತೆಯ ಟೋಲ್‌ಗೇಟ್‌ನಿಂದ ವರ್ತುಲ ರಸ್ತೆವರೆಗೆ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದರ ವಿಸ್ತೃತ ಯೋಜನಾ ವರದಿ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಅಂತಿಮಗೊಳಿಸಲಾಗಿದೆ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಈ ಯೋಜನೆ ಜಾರಿಯಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಹಣಕಾಸು ಹಂಚಿಕೆಯಾದ ಕೂಡಲೇ ಯೋಜನೆಯ ಕಾಮಗಾರಿ ಆರಂಭಗೊಳ್ಳಲಿದೆ. ಜೆ.ಪಿ. ನಗರದಿಂದ ಹೆಬ್ಬಾಳದವರೆಗೆ ೩೧.೩೦ ಕಿಲೋ ಮೀಟರ್ ಹಾಗೂ ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ವರ್ತುಲ ರಸ್ತೆವರೆಗೂ ೧೦.೬೦ ಕಿಲೋ ಮೀಟರ್ ಲಘು ರೈಲು ಸಾರಿಗೆ ಜಾರಿಗೊಳ್ಳಲಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ರನ್ ವೇ ಮತ್ತು ಟರ್ಮಿನಲ್ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಿದ್ದು, ೨೦೨೦ರ ವೇಳೆಗೆ ಪೂರ್ಣಗೊಳ್ಳಲಿದೆ. ದೇವನಹಳ್ಳಿಯ ೪೦೮ ಎಕರೆ ಪ್ರದೇಶದಲ್ಲಿ ಬಿಸ್‌ನೆಸ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಇದೊಂದು ವೈಶಿಷ್ಟ್ಯಪೂರ್ಣ ಯೋಜನೆಯಾಗಿದ್ದು, ವೈವಿಧ್ಯಮಯ ಬಳಕೆಯ ಕಲ್ಪನೆಯನ್ನು ಹೊಂದಲಾಗಿದೆ ಎಂದರು.
ದೇವನಹಳ್ಳಿಯ ಬಿಸಿನೆಸ್ ಪಾರ್ಕ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ೩೫ ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಅನುಮತಿ ನೀಡಲಾಗಿದೆ. ಇದರಲಲಿ ಸಮಾವೇಶ ಸಭಾಂಗಣ, ಪ್ರದರ್ಶನ ಸಭಾಂಗಣ, ಫುಡ್ ಕೋರ್ಟ್ ಮತ್ತಿತರ ಸೌಲಭ್ಯಗಳಿರುತ್ತವೆ.
೫ ಸ್ಟಾರ್ ಮತ್ತು ೩ ಸ್ಟಾರ್ ಹೋಟೆಲ್‌ಗಳು ಇರಲಿವೆ ಎಂದ ಅವರು, ಕೈಗಾರಿಕಾ ಪ್ರದೇಶಗಳಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲ ೧,೩೨,೦೦೦ ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಸರಬರಾಜು ಮಾಡಲು ನಿರ್ಧರಿಸಲಾಗಿದೆ ಎಂದರು.
ಉತ್ತನ ಕನ್ನಡ ಜಿಲ್ಲೆಯ ತದಡಿಯಲ್ಲಿ ೩೪.೨೫ ಎಂಟಿಪಿಎ ಸಾಮರ್ಥ್ಯದ ಸರ್ವಋತು ಬಂದರನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಹಂತ ಹಂತವಾಗಿ ಸಗಟು ಸಾಮಗ್ರಿಗಳಿಗಾಗಿ ೪ ಬರ್ತ್ ಮತ್ತು ಸಾಮಾನ್ಯ ಸರಕಿಗಾಗಿ ೩ ಬರ್ತ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ಚಿಕ್ಕಮಗಳೂರು, ಕಾರವಾರ, ಮಡಿಕೇರಿ, ಉಡುಪಿ, ರಾಯಚೂರು, ಗದಗ, ಬಾಗಲಕೋಟೆ, ದಾವಣಗೆರೆಯಲ್ಲಿ ಕಿರುವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಸೋಲಾಪುರ-ಗದಗ ರೈಲ್ವೆ ಹಳಿಗಳ ಗದಗ ಗೇಜ್ ಪರಿವರ್ತನೆ, ಶಿವಮೊಗ್ಗ-ತಾಳಗುಪ್ಪ, ಕೋಲಾರ-ಚಿಕ್ಕಬಳ್ಳಾಪುರ ರೈಲ್ವೆ ಗೇಜ್ ಪರಿವರ್ತನೆ ಕೊಟ್ಟೂರು-ಹರಿಹರ, ಕಡೂರು- ಚಿಕ್ಕಮಗಳೂರು ಹೊಸ ರೈಲು ಮಾರ್ಗ ಯೋಜನೆಗಳು ಪೂರ್ಣಗೊಂಡಿದ್ದು, ರಾಮನಗರ-ಮೈಸೂರು ಜೋಡಿ ರೈಲು ಮಾರ್ಗ, ಬೆಂಗಳೂರು-ಹಾಸನ ಹೊಸ ರೈಲು ಮಾರ್ಗ, ಬೀದರ್-ಕಲಬುರಗಿ, ಗಿಣಿಗೇರಾ-ರಾಯಚೂರು, ತುಮಕೂರು-ರಾಯದುರ್ಗ, ಬಾಗಲಕೋಟೆ-ಕುಡಚಿ, ಚಿಕ್ಕಮಗಳೂರು-ಸಕಲೇಶಪುರ, ಗದಗ-ವಾಡಿ, ಹೆಜ್ಜಾಲ-ಚಾಮರಾಜನಗರ, ತುಮಕೂರು-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಗಳಿಗೆ ೨,೧೮೦.೦೪ ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Comments are closed.