
File Photo
ಮಂಗಳೂರು: ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಜು. 15ರಂದು ಬಂಧನಕ್ಕೊಳಗಾಗಿದ್ದ ಜೆಟ್ ವಿಮಾನದ ಸಿಬಂದಿಗಳಾದ ಮಹಮದ್ ಅನೀಫ್ (ಸಿನಿಯರ್ ಸಿಎಸ್ಇ, ಏರ್ಪೋರ್ಟ್ ಸರ್ವೀಸಸ್) ಮತ್ತು ಒ.ಎ. ಮುದ್ದಯ್ಯ (ಸೆಕ್ಯುರಿಟಿ ಆಫೀಸರ್) ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜೆಟ್ ಕಂಪೆನಿಯ ಪ್ರಕಟನೆ ತಿಳಿಸಿದೆ.
ಈ ಇಬ್ಬರು ಸಿಬಂದಿಗಳನ್ನು ಇಲಾಖಾ ವಿಚಾರಣೆ ಮತ್ತು ತನಿಖೆ ಕಾದಿರಿಸಿ ತತ್ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಸಿಬಂದಿಯ ಕರ್ತವ್ಯಲೋಪಗಳನ್ನು ಎಷ್ಟು ಮಾತ್ರಕ್ಕೂ ಕಂಪೆನಿ ಸಹಿಸುವುದಿಲ್ಲ. ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಅಂತಹವರ ವಿರುದ್ಧ ಅಗತ್ಯ ಬಿದ್ದರೆ ಕಠಿನ ಕ್ರಮ ಜರಗಿಸಲಿದೆ.ಮಾತ್ರವಲ್ಲದೇ ತನಿಖಾ ಪ್ರಕ್ರಿಯೆ ಸರಿಯಾದ ಮಾರ್ಗದಲ್ಲಿಯೇ ನಡೆಯುವಂತೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಆರೋಪಿಗಳಾದ ಮಂಗಳೂರಿನ ಮಹಮ್ಮದ್ ಅನೀಫ್ ಮತ್ತು ಕೊಡಗಿನ ಒ.ಎ. ಮುದ್ದಯ್ಯ ಜು. 15ರಂದು ಅಪರಾಹ್ನ 1.30ಕ್ಕೆ ಮಂಗಳೂರಿನಲ್ಲಿ ಬಂದಿಳಿದ ಜೆಟ್ ವಿಮಾನದಲ್ಲಿ 75,26,225 ರೂ. ಮೌಲ್ಯದ 2566.050 ಗ್ರಾಂ ತೂಕದ 22 ಚಿನ್ನದ ಬಿಸ್ಕತ್ತುಗಳನ್ನು ಸೀಟಿನ ಅಡಿ ಭಾಗದಲ್ಲಿ ಇರಿಸಿ ಅಕ್ರಮವಾಗಿ ಸಾಗಿಸಿದ್ದರು. ಡಿ.ಆರ್.ಐ. ಅಧಿಕಾರಿಗಳು ಇದನ್ನು ವಶ ಪಡಿಸಿಕೊಂಡಿದ್ದರು. ಈ ವಿಮಾನ ದುಬೈನಿಂದ ಮುಂಬಯಿ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿತ್ತು.
ಕಳ್ಳ ಸಾಗಾಟಗಾರರು ಈ ಚಿನ್ನವನ್ನು ದುಬೈನಿಂದ ಮುಂಬಯಿಗೆ ಬಾಡಿಗೆ ಬಂಟನ ಮೂಲಕ ಕಳುಹಿಸಿದ್ದು, ಅದನ್ನು ಈ ಇಬ್ಬರು ಆರೋಪಿಗಳು ಮುಂಬಯಿ ಯಿಂದ ಮಂಗಳೂರಿಗೆ ರವಾನಿಸಲು ಸಹಕರಿಸಿದ್ದರು. ಈ ಹಿಂದೆ ಆರೋಪಿಗಳು 6 ಬಾರಿ ಅಕ್ರಮ ಚಿನ್ನ ಸಾಗಾಟಗಾರರಿಗೆ ಸಹಾಯ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
Comments are closed.