
ಮಂಗಳೂರು,ಜುಲೈ.11 : ಡಿ.ವೈ.ಎಸ್.ಪಿ. ಎಂ.ಕೆ.ಗಣಪತಿಯವರ ಅತ್ಮಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಮತ್ತು ಉಲ್ಲೇಖಿಸಿದ ಎಲ್ಲಾ ಅಧಿಕಾರಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ದ.ಕ.ಜಿಲ್ಲಾಧಿಕಾರಿಯವರ ಕಚೇರಿ ಎದುರುಗಡೆ ಸೋಮವಾರ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ರಾಜ್ಯದ ಜನತೆ ತಮ್ಮ ನೆಮ್ಮದಿಯ ಬಾಳನ್ನು ಕಳೆದುಕೊಂಡು ಚಿಂತೆಯ ವಾತಾವರಣದಲ್ಲಿ ಜೀವಿಸುವ ದಿನಗಳು ನಮ್ಮ ಮುಂದೆ ನಿಂತಿವೆ. ದಿನದಿಂದ ದಿನಕ್ಕೆ ಕೊಲೆ, ದರೋಡೆ, ಅಕ್ರಮ ಚಟುವಟಿಕೆಗಳು, ಭ್ರಷ್ಟಾಚಾರ ತಾಂಡವವಾಡುತ್ತಿದ್ದರೆ ಈಚೆ ಯುವಜನತೆಯ ದೊಡ್ಡ ಪಾಲು ಡ್ರಗ್ಸ್ ಜಾಲದಲ್ಲಿ ಮುಳುಗಿದೆ. ರಾಜ್ಯವನ್ನು ಆಳುತ್ತಿರುವ ನಿಮ್ಮ ಕಾಂಗ್ರೆಸ್ ಸರಕಾರ ಎಲ್ಲವನ್ನೂ ನೋಡಿಯೂ ಕುರುಡರಂತೆ ವರ್ತಿಸುತ್ತಿದೆ. ರಾಜ್ಯವನ್ನು ಆಳುವ ನಿಮ್ಮ ಮಂತ್ರಿಗಳು, ರಾಜಕೀಯ ಪುಢಾರಿಗಳು, ಕೆಲವು ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ಅಕ್ರಮ ದಂಧೆಗಳಲ್ಲಿ ಭಾಗಿಯಾಗಿದ್ದರೆ, ಈಚೆ ಸರಕಾರವು ನಿಷ್ಕ್ರಿಯವಾಗಿ ಆಡಳಿತ ಕುಸಿತವನ್ನು ಕಂಡಿದೆ. ಈ ಹಿಂದೆ ದಕ್ಷ ಜಿಲ್ಲಾಧಿಕಾರಿ ಡಿ.ಕೆ.ರವಿ ಪ್ರಕರಣ ಹಲವಾರು ಏರಿಳಿತವನ್ನು ಕಂಡು ಸುಮ್ಮನಾಗಿದೆ. ಡಿವೈಎಸ್.ಪಿ ಅನುಪಮ ಶೆಣೈಯವರು ಮಾನಸಿಕ ಖಿನ್ನತೆಗೆ ಒಳಗಾಗಿ ಮಂತ್ರಿವರ್ಯರಾದ ಪರಮೇಶ್ವರ ನಾಯ್ಕರವರ ಒತ್ತಡಕ್ಕೆ ಸಿಲುಕಿ ರಾಜೀನಾಮೆ ನೀಡಿದ ಪ್ರಸಂಗ ಓರ್ವ ಮಹಿಳೆಗಾದ ಹಿಂಸೆ ಮತ್ತು ರಾಜ್ಯದ ಮಹಿಳೆಯರ ಮೇಲಾದ ದಬ್ಬಾಳಿಕೆ ಎಂದೇ ಹೇಳಬೇಕು.

ಮೈಸೂರಿನ ದಕ್ಷ ಜಿಲ್ಲಾಧಿಕಾರಿಯಾದ ಶ್ರೀಮತಿ ಶಿಖಾ ಅವರನ್ನು ಮಾನ್ಯ ಮುಖ್ಯಮಂತ್ರಿಯವರ ಆಪ್ತನೆಂದು ಹೇಳಿಕೊಂಡು ಬೆದರಿಕೆಯನ್ನು ಒಡ್ಡಿ ನಾನು ಹೇಳಿದಂತೆ ಇಲ್ಲಿ ನಡೆಯಬೇಕೆಂಬ ನಿಂದನೆಯ ಮಾತುಗಳಿಂದ ಜಿಲ್ಲಾಧಿಕಾರಿಯವರನ್ನು ಬೆದರಿಸುತ್ತಿರುವ ಮರೀಗೌಡರವರ ದಬ್ಬಾಳಿಕೆಯನ್ನು ನಾವು ಖಂಡಿಸುತ್ತೇವೆ.
ಮಾನ್ಯ ಸಿದ್ಧರಾಮಯ್ಯನವರೇ, ನೀವು ಮುಖ್ಯಮಂತ್ರಿಸ್ಥಾನದಲ್ಲಿ ಕುಳಿತು ರಾಜ್ಯದ ಜನರಿಗೆ ಅನ್ಯಾಯವನ್ನು ಬಗೆದಿರಿ. ಈಗೋಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ದ.ಕ.ಜಿಲ್ಲೆಯ ಎಲ್ಲೆಡೆ ತಮ್ಮ ಕರ್ತವ್ಯವನ್ನು ನಿರ್ವಹಿಸಿ ಇದೀಗ ತಮ್ಮ ಪ್ರಾಣವನ್ನೇ ಕೊನೆಗಾಣಿಸಿದ ಡಿ.ವೈ.ಎಸ್.ಪಿ. ಎಂ.ಕೆ.ಗಣಪತಿ ಇವರ ಆತ್ಮಹತ್ಯೆ ಮತ್ತು ಆತ್ಮಹತ್ಯೆಯ ಮೊದಲು ಬಹಿರಂಗಪಡಿಸಿದ ವಿಷಯಗಳು ಹಾಗೂ ಮರಣಪತ್ರವನ್ನು, ಸುದ್ಧಿವಾಹಿನಿಗೆ ನೀಡಿದ ವಿವರಗಳ ಅನುಸಾರವಾಗಿ ಮಾನ್ಯ ಸಿದ್ಧರಾಮಯ್ಯನವರ ಮಂತ್ರಿಮಂಡಲದ ಸದಸ್ಯ ಕೆ.ಜೆ.ಜಾರ್ಜ್ರವರ ಹೆಸರು ಉಲ್ಲೇಖವಾಗಿರುವುದರಿಂದ ಕೂಡಲೇ ರಾಜೀನಾಮೆಯನ್ನು ಕೊಡಿಸಿ ಅವರ ಮೇಲೆ ಕಾನೂನು ಕ್ರಮ ಜರಗಿಸಿ, ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಘನವೆತ್ತ ರಾಜ್ಯಪಾಲರಾದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.ಇಲ್ಲದಿದ್ದರೆ ಮುಂದಿನ ದಿನ ತೀವ್ರವಾದ ಪ್ರತಿಭಟನೆಯನ್ನು ರಾಜ್ಯಾದ್ಯಂತ ಎದುರಿಸಬೇಕಾದೀತು. ಪೂರ್ತಿ ಮಂತ್ರಿಮಂಡಲ ರಾಜೀನಾಮೆ ನೀಡಬೇಕಾದೀತು ಎಂದು ಹೇಳಿದರು.
ಮ.ನ.ಪಾ ಉಪಮೇಯರ್ ಸುಮಿತ್ರ ಕರಿಯ, ಪಕ್ಷದ ಮಹಿಳಾ ಘಟಕದ ಪ್ರಮುಖರಾದ ಶ್ರೀಮತಿ ಸುಲೋಚನಾ ಜಿ.ಕೆ.ಭಟ್, ಶ್ರೀಮತಿ ಶಾರದಾ ಆರ್.ರೈ., ಶ್ರೀಮತಿ ರೂಪಾ ಡಿ.ಬಂಗೇರಾ, ಶ್ರೀಮತಿ ಸಂಧ್ಯಾ ವೆಂಕಟೇಶ್, ಶ್ರೀಮತಿ ಪ್ರಭಾಮಾಲಿನಿ, ಶ್ರೀಮತಿ ಲಲಿತಾ ಸುಂದರ್, ಶ್ರೀಮತಿ ರಾಜೀವಿ ಕೆಂಪುಮಣ್ಣು, ಶ್ರೀಮತಿ ಪೂಜಾ ಪೈ, ಶ್ರೀಮತಿ ನಮಿತಾ ಶ್ಯಾಮ್, ಶ್ರೀಮತಿ ಧನಲಕ್ಷ್ಮಿ ಗಟ್ಟಿ ಮುಂತಾದವರು ಉಪಸ್ಥಿತರಿದ್ಧರು.
Comments are closed.