ಕರಾವಳಿ

ಕುಂಭಾಸಿ: ಪ್ರೈವೇಟ್ ಪ್ರಾಪರ್ಟಿಯಲ್ಲಿ ಜುಗಾರಿ ಆಡುತ್ತಿದ್ದ 11 ಮಂದಿ ದಸ್ತಗಿರಿ; 72,350 ಹಣ ವಶ

Pinterest LinkedIn Tumblr

download

(ಸಾಂದರ್ಭಿಕ ಚಿತ್ರ)

ಕುಂದಾಪುರ: ತಾಲ್ಲೂಕಿನ ಕುಂಭಾಸಿಯ ತಾರಾನಾಥ ಶೆಟ್ಟಿ ಎಂಬುವವರ ಮನೆಯಲ್ಲಿ ಹಣವನ್ನು ಪಣವನ್ನಾಗಿ ಇಸ್ಪೀಟು ಜುಗಾರಿ ಆಡುತ್ತಿರುವುದಾಗಿ ಪೊಲೀಸರಿಗೆ ಬಂದ ಖಚಿತ ವರ್ತಮಾನದಂತೆ ಆ ಮನೆಗೆ ದಾಳಿ ನಡೆಸಿದ ಉಡುಪಿ ಡಿಸಿಐಬಿ ಪೊಲೀಸರು ಹನ್ನೊಂದು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳಿಂದ 72,350 ನಗದು, 52 ಇಸೀಟು ಎಲೆಗಳನ್ನು, 1 ವೃತ್ತಾಕಾರದ ಫೈಬರ್‌ಟೇಬಲ್‌, 6 ಫೈಬರ್‌ ಕುರ್ಚಿಗಳನ್ನು ಹಾಗೂ ಒಂದು ಬೆಡ್‌ಶೀಟ್‌ನ್ನು ವಶಕ್ಕೆ ಪಡೆದಿದ್ದಾರೆ. ದಸ್ತಗಿರಿಯಾದ ಆರೋಪಿಗಳಲ್ಲಿ ಓರ್ವರು ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕ್ರಷ್ಣಪ್ರಸಾದ್ ಎನ್ನಲಾಗಿದೆ.

ಘಟನೆ ವಿವರ: ಉಡುಪಿಯ ಡಿಸಿಐಬಿ ಪೊಲೀಸ್ ನಿರೀಕ್ಷಕ ಟಿ.ಆರ್‌ ಜೈಶಂಕರ್‌ ಅವರಿಗೆ ಬಂದ ಖಚಿತ ವರ್ತಮಾನದಂತೆ ಕುಂಭಾಸಿಯ ಆನೆಗುಡ್ಡೆ ದೇವಸ್ಥಾನದ ಕೆಳಭಾಗದ ವಕ್ವಾಡಿ ರಸ್ತೆಯಲ್ಲಿರುವ ತಾರನಾಥ ಶೆಟ್ಟಿ ಎನ್ನುವವರ ಮನೆಗೆ ದಾಳಿ ನಡೆಸಿದಾಗ ಮನೆಯಲ್ಲಿ 11 ಜನರಿದ್ದು, ಕೆಲವರು ಒಳಗೆ 500, ಒಳಗೆ 1000 ಎಂದು ಹೇಳುತ್ತಾ ಹಣ ಹಾಕುತ್ತಿದ್ದು, (ಅಂದರ್ ಬಾಹರ್ ಜುಗಾರಿ) ಇನ್ನು ಕೆಲವರು ಹೊರಗೆ 500 ಹೊರಗೆ 1000 ಎಂಬಿತ್ಯಾದಿಯಾಗಿ ಹೇಳುತ್ತಾ ವೃತ್ತಾಕಾರದ ಟೇಬಲ್‌ಮೇಲೆ ಹಣ ಹಾಕುತ್ತಿದ್ದು, ಇಸ್ಪೀಟು ಜುಗಾರಿ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದಾರೆನ್ನಲಾಗಿದೆ.

ಆರೋಪಿಗಳ ವಿವರ: ಸಜಿತ ಹೆಗ್ಡೆ (48), ರತ್ನಾಕರ ನಾಯಕ್‌(56), ಸತೀಶ್‌ಶೆಟ್ಟಿ (51), ಸುಜನ ಶೆಟ್ಟಿ (46), ಗೌರೀಶ (38), ಸುಜಯ ಶೆಟ್ಟಿ (44), ಕರುಣಾಕರ ಹೆಗ್ಡೆ (50), ಜಯರಾಮ ಶೆಟ್ಟಿ (68), ಗಣೇಶ (44), ಕೃಷ್ಣಪ್ರಸಾದ್ ಅಡ್ಯಂತಾಯ (54), ಸಂತೋಷ ಶೆಟ್ಟಿ (42) ದಸ್ತಗಿರಿ ಮಾಡಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ತೆರಳಿದ ವೇಳೆ ಮಾಧ್ಯಮದವರಿಗೆ ಮನೆಯ ಮುಂಭಾಗ ನೆರೆದಿದ್ದ ಕೆಲವರು ‘ಇದು ಖಾಸಗಿ ಜಾಗ (ಪ್ರೈವೇಟ್ ಪ್ರಾಪರ್ಟಿ) ಇಲ್ಲಿ ಹೇಗೆ ಬರುತ್ತೀರಿ, ಇಲ್ಲಿಂದ ಹೋಗಿ’ ಎಂದು ಧಮ್ಕಿಹಾಕಿದ್ದು ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮೂಕವಿಸ್ಮಿತರಾಗಿದ್ದಲ್ಲದೇ ಪತ್ರಕರ್ತರನ್ನೇ ಸ್ಥಳದಿಂದ ಕಳುಹಿಸಿ ತಮ್ಮ ಮುಂದಿನ ‘ಕೆಲಸ’ ಮುಗಿಸಿದ್ದಾರೆ.

 

Comments are closed.