ಕರಾವಳಿ

ತಣ್ಣೀರುಬಾವಿ ಸಮೀಪ ಜೈಸನ್ ಡಿಸೋಜಾ ಶವ ಪತ್ತೆ :ಅವಿನಾಶ್ ಮೃತದೇಹಕ್ಕಾಗಿ ಶೋಧ

Pinterest LinkedIn Tumblr

maravuru_dead_body

ಮಂಗಳೂರು, ಜು.7 : ಮರವೂರು ಡ್ಯಾಂ ಬಳಿ ಮಂಗಳವಾರ ಸಂಜೆ ನೀರಿಗಿಳಿದಿದ್ದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಇಬ್ಬರಲ್ಲಿ ಯುವಕರಲ್ಲಿ ಜೈಸನ್ ಡಿಸೋಜಾ(24) ಮೃತದೇಹ ಗುರುವಾರ ಮುಂಜಾನೆ ಪಣಂಬೂರು ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಸಮೀಪ ಪತ್ತೆಯಾಗಿದೆ. ಅವಿನಾಶ್ ಮೃತದೇಹ ಇನ್ನೂ ಪತ್ತೆಯಾಗದೇ ಇದ್ದ ಹಿನ್ನೆಲೆಯಲ್ಲಿ ಮುಳುಗುತಜ್ಞರು, ಅಗ್ನಿಶಾಮಕದಳ ಸಿಬ್ಬಂದಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಕಾವೂರು ಸಮೀಪದ ಪಂಜಿಮೊಗರು ನಿವಾಸಿ ಅವಿನಾಶ್(26) ಹಾಗೂ ವಿದ್ಯಾನಗರ ನಿವಾಸಿ ಜೈಸನ್ ಡಿ’ಸೋಜಾ(24) ಡ್ಯಾಂ ಬಳಿ ನೀರಿಗಿಳಿದಿದ್ದ ವೇಳೆ ನೀರುಪಾಲಾಗಿದ್ದರು. ಜೊತೆಗಿದ್ದ ಸ್ನೇಹಿತರು ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಅವರ ಮೃತದೇಹಕ್ಕಾಗಿ ಮುಳುಗುತಜ್ಞರು ಶೋಧ ಕಾರ್ಯ ನಡೆಸುತ್ತಿದ್ದರು.

ಫಲ್ಗುಣಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿತ್ತು. ನಿನ್ನೆ ಸಂಜೆಯಿಂದ ಕೂಳೂರು ಭಾಗದಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿದ್ದು, ಇಂದು ಮುಂಜಾನೆಯ ವೇಳೆ ತಣ್ಣೀರುಬಾವಿಯಲ್ಲಿ ಮೃತದೇಹ ಗೋಚರವಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಣಂಬೂರು ಠಾಣಾ ಪೊಲೀಸರು ಮೃತದೇಹವನ್ನು ಮುಳುಗುತಜ್ಞರ ಸಹಾಯದಿಂದ ಮೇಲಕ್ಕೆತ್ತಿ ವೆನ್‌ಲಾಕ್ ಶವಾಗಾರಕ್ಕೆ ಸಾಗಿಸಿದ್ದಾರೆ.

ಪಾಂಡು ಪೈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಜೈ ರಾಜಾ ಯಾನೆ ಶೈಲೇಶ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅವಿನಾಶ್, ಜೈಸನ್ ಡಿಸೋಜ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆಗಾಗ್ಗೆ ಮರವೂರು ಡ್ಯಾಂ ಬಳಿ ತಮ್ಮ ತಂಡದೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಇವರು ಡ್ಯಾಂ ನೀರಿನಲ್ಲಿ ಮೀನು ಹಿಡಿಯುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನೀರುಪಾಲಾದ ಜಾಗ ಬಜ್ಪೆ ಹಾಗೂ ಕಾವೂರು ಠಾಣೆಯ ಸರಹದ್ದಿನಲ್ಲಿ ಇರುವ ಕಾರಣ ಪ್ರಕರಣ ದಾಖಲಾಗಿರಲಿಲ್ಲ. ಈಗ ಮೃತದೇಹ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಸಿಕ್ಕ ಕಾರಣ ಪಣಂಬೂರು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Comments are closed.