
ಮಂಗಳವಾರ, ಜುಲೈ. 06 : ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿಯ ಹೊಟೇಲ್ ವೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹೊಟೇಲ್ ಮಾಲಕ ಸಹಿತ ಮೂರು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಆರೋಪಿಗಳಿಂದ ಗಾಂಜಾ ಸಹಿತಾ 93,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ ಕೃಷ್ಣಾಪುರ ಸಮೀಪದ ನಿವಾಸಿಗಳಾದ ಮೊಹಮ್ಮದ್ ರಿಯಾಸ್(30), ಅಬ್ದುಲ್ ಸಮದ್ (27) ಹಾಗೂ ಸುರತ್ಕಲ್ ಗಣೇಶಪುರ ಸಮೀಪದ ಕೈಕಂಬ ನಿವಾಸಿ ರಝಾಕ್ ಆಲಿ (23)ಬಂಧಿತ ಆರೋಪಿಗಳು. ಆರೋಪಿಗಳು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡಿಕೊಂಡು ಹೊಟೇಲ್ ಗೆ ಬರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು.

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಬಸ್ಸು ನಿಲ್ದಾಣದ ಬಳಿಯ ಹೊಟೇಲ್ ಮುಬಾರಕ್ ನಲ್ಲಿ ಹಾಗೂ ಹೊಟೇಲ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ಕೆಎ-19-ಇಎನ್- 1223 ನೇ ಹೊಂಡಾ ಮ್ಯಾಸ್ಟ್ರೋ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಸಣ್ಣ ಸಣ್ಣ ಪ್ಯಾಕೆಟ್ ಗಳಲ್ಲಿ ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮಂಗಳೂರು ಸಿಸಿಬಿ ಪೊಲೀಸರು ಹೋಟೆಲ್‌ಗೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಶದಿಂದ ಒಟ್ಟು 1.2 ಕೆ.ಜಿ ಗಾಂಜಾ, 4 ಮೊಬೈಲ್ ಫೋನ್ ಗಳು, ರೂ. 7300/- ನಗದು ಹಾಗೂ ಗಾಂಜಾ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಹೊಂಡಾ ಮ್ಯಾಸ್ಟ್ರೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 93,000/- ಎಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸಿ.ಸಿ.ಬಿ ಘಟಕದ ಸಬ್ ಇನ್ಸಪೆಕ್ಟರ್ ಶ್ರೀ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
Comments are closed.