*ಯೋಗೀಶ್ ಕುಂಭಾಸಿ
ಕುಂದಾಪುರ: ಕಳೆದ ಒಂದೂವರೆ ವರ್ಷಗಳಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಆಗಿರುವ ಮುಖ್ಯಮಂತ್ರಿ ಸ್ವರ್ಣ ಪದಕ ಪುರಸ್ಕ್ರತರಾದ ಎಂ. ಮಂಜುನಾಥ ಶೆಟ್ಟಿ ಅವರನ್ನು ವರ್ಗಾಯಿಸಲಾಗಿದೆ. ಸದ್ಯ ಅವರಿಗೆ ವರ್ಗಾವಣೆ ಸ್ಥಳ ನೀಡಿಲ್ಲ ಎನ್ನಲಾಗಿದೆ.

(ಎಂ. ಮಂಜುನಾಥ ಶೆಟ್ಟಿ)
ಜನವರಿ 2015ರ ಎರಡನೇ ವಾರದಿಂದ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಮಂಜುನಾಥ ಶೆಟ್ಟಿ ಅವರು ಕುಂದಾಪುರ ಉಪವಿಭಾಗದ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಗಳಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಶ್ರಮವಹಿಸಿದವರು. ಇವರ ಆಗಮನದ ವೇಳೆ ಕುಂದಾಪುರ ತಾಲ್ಲೂಕಿನ ಕೋಡಿ ಹಾಗೂ ಗಂಗೊಳ್ಳಿ ಭಾಗದಲ್ಲಿ ಕೋಮುಗಲಭೆ ಪ್ರಕರಣಗಳು ಅಧಿಕವಾಗಿದ್ದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಖಡಕ್ ಕ್ರಮಕ್ಕೆ ಮುಂದಾಗಿದ್ದರು.
ಅಲ್ಲದೇ ರಾಜ್ಯವನ್ನೇ ಬೆಚ್ಚಿಬೀಳಿಸಿದ ಅಕ್ಷತಾ ದೇವಾಡಿಗ ಮರ್ಡರ್ ಕೇಸ್, ಗೋಳಿಯಂಗಡಿ ಸುಚಿತ್ರಾ ನಾಯ್ಕ್ ಮರ್ಡರ್ ಮೊದಲಾದ ಪ್ರಕರಣಗಳಲ್ಲಿ ತನಿಖೆಯ ಮುಂದಾಳತ್ವವನ್ನು ವಹಿಸಿಕೊಂಡು ಕ್ಷಿಪ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗುವಲ್ಲಿ ಕುಂದಾಪುರ ಡಿವೈಎಸ್ಪಿ ಆಗಿದ್ದ ಮಂಜುನಾಥ ಶೆಟ್ಟಿ ಅವರ ಪಾತ್ರ ಮಹತ್ತರವಾದುದು.
ಜನಸ್ನೇಹಿಯಾಗಿ ಗುರುತಿಸಿಕೊಂಡ ಇವರು ಬಹುತೇಕ ಸಿವಿಲ್ ಮೊದಲಾದ ಪ್ರಕರಣಗಳನ್ನು ನಾಜೂಕಾಗಿ ಪರಿಹರಿಸುವ ಮೂಲಕ ನೊಂದು ಬಂದವರಿಗೆ ನ್ಯಾಯ ಒದಗಿಸಿಕೊಟ್ಟವರಾಗಿದ್ದಾರೆ. ತನ್ನ ಸರಳತೆ ಮೂಲಕವೇ ಜನರ ಪ್ರೀತಿಗೆ ಪಾತ್ರರಾದ ಡಿವೈಎಸ್ಪಿ ಆಗಿದ್ದರು ಮಾತ್ರವಲ್ಲದೇ ತನ್ನ ಅಧೀನದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದು ಅವರಿಗೆ ಮಾರ್ಗದರ್ಶಕರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇವರ ಸೇವೆ ಗುರುತಿಸಿ ಎಪ್ರಿಲ್ ತಿಂಗಳಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭ ಅವರಿಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ನೀಡಲಾಗಿತ್ತು.
ಕುಂದಾಪುರಕ್ಕೆ ಪ್ರವೀಣ್ ನಾಯಕ್..
ಕುಂದಾಪುರಕ್ಕೆ ನೂತನ ಡಿವೈಎಸ್ಪಿ ಆಗಿ ಪ್ರವೀಣ್ ನಾಯಕ್ ಅವರು ವರ್ಗಾವಣೆ ಆಗಿದ್ದಾರೆನ್ನಲಾಗಿದೆ. ಈ ಮೊದಲು ಉಡುಪಿ ಡಿಸಿಐಬಿಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಪ್ರವೀಣ್ ನಾಯಕ್ ಅವರು ಸದ್ಯ ಗುಪ್ತಚರ ಇಲಾಖೆಯಲ್ಲಿದ್ದಾರೆನ್ನಲಾಗಿದೆ.
ಇದನ್ನೂ ಓದಿರಿ:
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ
ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಎಮ್. ಮಂಜುನಾಥ ಶೆಟ್ಟಿ-http://kannadigaworld.com/kannada/136474.html
Comments are closed.