ಕರಾವಳಿ

‘ಕೋಟಿ ವೃಕ್ಷ ಅಭಿಯಾನ’ ಉದ್ಘಾಟನೆ: ಅರಣ್ಯ ಸಂರಕ್ಷಣೆ ಬಗ್ಗೆ ಅಧಿಕಾರಿಗಳಲ್ಲಿ ದಿಟ್ಟತನ ಇರಲಿ- ಪ್ರಮೋದ್

Pinterest LinkedIn Tumblr

ಉಡುಪಿ: ನಾಡಿನ ಅರಣ್ಯವನ್ನು ಸಂರಕ್ಷಿಸುವ ಕಾರ್ಯದಲ್ಲಿ ಅಧಿಕಾರಿಗಳು ತಮ್ಮ ಪ್ರಮಾಣಿಕತೆ ಮತ್ತು ದಿಟ್ಟತನವನ್ನು ತೋರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಭಾನುವಾರ ಉಡುಪಿಯ ಪುರಭವನದಲ್ಲಿ, ಕನಾಟಕ ಅರಣ್ಯ ಇಲಾಖೆ, ಕುಂದಾಪುರ ವಿಭಾಗ ಇವರ ವತಿಯಿಂದ ನಡೆದ ’ಕೋಟಿ ವೃಕ್ಷ ಅಭಿಯಾನ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅರಣ್ಯದ ಸಂರಕ್ಷಣೆಯಲ್ಲಿ ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವ ಅತ್ಯಂತ ಅಗತ್ಯ, ಅಧಿಕಾರಿಗಳು ಯಾವುದೇ ರಾಜಕೀಯ ಮತ್ತಿತರ ಒತ್ತಡಗಳಿಗೆ ಸಿಲುಕದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಅರಣ್ಯ ಸಂರಕ್ಷಣೆ ಸಾಧ್ಯ, ಸಾರ್ವಜನಿಕರು ಅರಣ್ಯದ ಮಹತ್ವವನ್ನು ಅರಿಯಬೇಕು, ಭೂತಾನ್ ಮಾದರಿಯಲ್ಲಿ ರಾಜ್ಯದಲ್ಲಿ ಅರಣ್ಯ ಅಭಿವೃದ್ಧಿಯಾಗಲಿ , ಅರಣ್ಯ ನಾಶದಿಂದ ಹವಾಮಾನದಲ್ಲಿ ಈಗಾಗಲೇ ವೈಪರೀತ್ಯ ಕಂಡು ಬರುತ್ತಿದೆ, ಇದು ಮುಂದುವರೆದರೆ ಮಾನವನ ವಿನಾಶ ಅಗಲಿದೆ ಆದ್ದರಿಂದ ಪರಿಸರ ಮತ್ತು ನಿಸರ್ಗವನ್ನು ಎಲ್ಲರೂ ಸೇರಿ ಕಾಪಾಡಬೇಕು ಎಂದು ಸಚಿವರು ಹೇಳಿದರು.

Udupi_Forest_Programme (5) Udupi_Forest_Programme (1) Udupi_Forest_Programme (3) Udupi_Forest_Programme (4) Udupi_Forest_Programme (2)

ಜಿಲ್ಲೆಯಲ್ಲಿ 2 ಲಕ್ಷ ಗಿಡ ವಿತರಿಸುವ ಗುರಿ ಇದ್ದು, ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ, ಅ ಮೂಲಕ ಗುರಿ ತಲುಪಲು ಸಾಧ್ಯ, ಅಜ್ಜರಕಾಡಿನ ಭುಜಂಗ ಪಾಕ್ ನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ನಗರಸಭೆಯೊಂದಿಗೆ ಚರ್ಚಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಬಿಜೂರು, ವನಮಹೋತ್ಸವದ ಹೊಸ ರೂಪ ಈ ಕೋಟಿ ವೃಕ್ಷ ಆಂದೋಲನ, ದೇಶದ ಚಿಂತನೆ ನಿಸರ್ಗದ ಕಡೆ ಹೊರಳಿದಾಗ ದೇಶ ಸುಭಿಕ್ಷವಾಗಲು ಸಾಧ್ಯ, ಪ್ರತಿ ದಿನ ಒಬ್ಬ ಮಾನವನಿಗೆ ಸುಮಾರು 3 ಸಿಲೆಂಡರ್ ನಷ್ಟು ಆಮ್ಲಜನಕ ಅಗತ್ಯವಿದೆ, ಒಬ್ಬ ವ್ಯಕ್ತಿ ಸುಮಾರು 65 ವರ್ಷ ಬದುಕಿದರೆ ಅವನಿಗೆ ಸುಮಾರು 5 ಕೋಟಿ ರೂ ಮೊತ್ತದ ಆಮ್ಲಜನಕ ನಿಸರ್ಗದಿಂದ ಉಚಿತವಾಗಿ ದೊರೆಯುತ್ತದೆ, ಮಳೆ ನೀರನ್ನು ಹಿಡಿದು, ಇಂಗಿಸುವ ಶಕ್ತಿ ಕೇವಲ ಅರಣ್ಯಗಳಿಗೆ ಮಾತ್ರ ಇದೆ, ಮಾನವ ನಿಸರ್ಗದ ಒಂದು ಕೊಂಡಿ ಮಾತ್ರ, ಈ ನಿಸರ್ಗವನ್ನು ಕಾಪಾಡುವುದು ಪತ್ರಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.

ಈ ವರ್ಷ ಉಡುಪಿಯಲ್ಲಿ ಅರಣ್ಯ ಇಲಾಖೆಯ ಪ್ರದೇಶ ಹೊರತುಪಡಿಸಿ ಇತರೆ ಸ್ಥಳಗಳಲ್ಲಿ 50000 ಸಸಿಗಳನ್ನು ನೆಡುವ ಉದ್ದೇಶವಿದೆ, ಅಲ್ಲದೇ ಇಲಾಖೆಯ ನರ್ಸರಿಗಳಲ್ಲಿ 1.50 ಲಕ್ಷ ಸಸಿಗಳು ಇದ್ದು ಸಾರ್ವಜನಿಕರು ಪಡೆಯಬಹುದಾಗಿದೆ, ಜಿಲ್ಲೆಯ ಬಡಗುಬೆಟ್ಟುನಲ್ಲಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪರಿಸರ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸಿದ, ಅಜಯ್ ಗಿರಿ( ಕಾಳಿಂಗ ಸರ್ಪ ಸಂರಕ್ಷಣೆ), ಕೆ.ಪಿ.ಶೆಟ್ಟಿ ( ನಿಸರ್ಗಧಾಮಗಳ ಅಭಿವೃದ್ಧಿ) ಆರೂರು ಮಂಜುನಾಥ ರಾವ್( ಔಷಧೀಯ ಸಸ್ಯಗಳ ಬೆಳವಣಿಗೆ ಮತ್ತು ಸಂರಕ್ಷಣೆ), ಸಮ್ಮಿಲನ ಶೆಟ್ಟ( ಚಿಟ್ಟೆಗಳ ಅಧ್ಯಯನ ಮತ್ತು ಪಾರ್ಕ್ ಸ್ಥಾಪನೆ), ಕೃಷ್ಣ ಮೂರ್ತಿ ಹೆಬ್ಬಾರ್( ನಾಗರಹಾವುಗಳ ಸಂರಕ್ಷಣೆ) ಇವರಿಗೆ ಸನ್ಮಾನಿಸಲಾಯಿತು. ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಾದ ದಿನೇಶ್( ಮೂಡಬಿದ್ರೆ ವಲಯ) ರಮೇಶ್ (ಉಡುಪಿ) ಬ್ರಿಜೇಶ್ ( ಶಂಕರನಾರಾಯಣ) ಮತ್ತು ಸಿಬ್ಬಂದಿಗಳಾದ ಮಂಜುಗಾಣಿಗ, ಸೂರ್‍ಯ ನಾರಾಯಣ, ದೇವರಾಜ ಪಾಣ ಇವರನ್ನು ಹಾಗೂ 5 ಮಂದಿ ರೈತರಿಗೆ ಕೃಷಿ ಪ್ರೋತ್ಸಾಹ ಧನ ವಿತರಿಸಲಾಯಿತು.

ನಗರಸಭೆಯ ಅಧ್ಯಕ್ಷ ಮೀನಾಕ್ಷಿ ಮಾಧವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ವೆರೋನಿಕ ಕರ್ನೇಲಿಯೋ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ , ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತುರಾಜು , ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ಉಪ ಅರಣ್ಯ ಸಂರಕ್ಷಣಾದಿಕಾರಿ ಚಂದ್ರಣ್ಣ ಉಪಸ್ಥಿತರಿದ್ದರು.

ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ ಸ್ವಾಗತಿಸಿದರು. ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ನವೀನ್ ಕೊಪ್ಪ ಮತ್ತು ಸಂಗಡಿಗರಿಂದ ಗಾಯನ ಕಾರ್ಯಕ್ರಮ ನಡೆಯಿತು.

Comments are closed.