
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೂಲತಃ ವಾಗ್ಮಿ. ಯಾವುದೇ ಸಾರ್ವಜನಿಕ ಸಮಾರಂಭ/ ವಿದೇಶ ಪ್ರವಾಸದಲ್ಲಿ ಅರ್ಧ, ಮುಕ್ಕಾಲು ಗಂಟೆ ನಿರರ್ಗಳವಾಗಿ ಮಾತನಾಡುತ್ತಾರೆ. ವಿದೇಶ ಪ್ರವಾಸದಲ್ಲಿ ಮೋದಿ ಟೆಲಿಪ್ರಾಂಪ್ಟರ್ ಮೂಲಕ ಭಾಷಣ ಮಾಡಿದರೂ, ಅವರಿಗೆ ಈ ವಿಶೇಷ ಭಾಷಣವನ್ನು ಸಿದ್ಧಪಡಿಸಿಕೊಡುವವರು ಯಾರು ಎನ್ನುವ ಪ್ರಶ್ನೆ ಜನ ಸಾಮಾನ್ಯರಲ್ಲಿ ಹುಟ್ಟುವುದು ಸಹಜ.
ಮೋದಿ ಭಾಷಣವನ್ನು ಪಕ್ಷದ ಕೆಲ ನಾಯಕರು, ಸಚಿವರು, ವಿಷಯಗಳ ಪರಿಣಿತರು, ವಿದೇಶದಲ್ಲಿ ನೆಲೆಸಿರುವ ಸಂಘಟನೆಗಳು, ಜೊತೆಗೆ ಅವರ ಬಳಿ ಇರುವ ತಂಡ ಸಿದ್ಧಪಡಿಸುತ್ತದೆ ಎಂದು ಮೋದಿ ಅವರ ಸಾರ್ವಜನಿಕ ಬದುಕಿನ ಬಗ್ಗೆ ಅಧ್ಯಯನ ನಡೆಸಿದ ಸಾಮಾಜಿಕ ವಿಜ್ಞಾನಿ ಶಿವ್ ವಿಶ್ವನಾಥ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಮೋದಿಯವರಿಗೆ ಒಬ್ಬರೇ ಭಾಷಣವನ್ನು ಬರೆದುಕೊಡುವುದಿಲ್ಲ. ಇದೊಂದು ಸಂಘಟಿತ ಸಾಧನೆ. ಮೋದಿ ಹಿಂದಿರುವ ಈ ವ್ಯಕ್ತಿಗಳಿಗೆ ಈ ವಿಚಾರದಲ್ಲಿ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ಶಿವ್ ವಿಶ್ವನಾಥ್ ಹೇಳುತ್ತಾರೆ.
ಹಿಂದೆ ಯಾರು ಬರೆದುಕೊಡುತ್ತಿದ್ದರು?
ಮಾಜಿ ಪ್ರಧಾನಿ ಮನಮೋಹನ್ ಅವರು ಮೂಲತಃ ಭಾಷಣಗಾರರಲ್ಲ. ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ಭಾಷಣವನ್ನು ಸಿದ್ಧಪಡಿಸುತ್ತಿದ್ದರು. ಸಂಜಯ್ ಬಾರು ಹೇಳುವಂತೆ ಇದುವರೆಗೂ ಅವರು ಸಿಂಗ್ಗಾಗಿ 1 ಸಾವಿರಕ್ಕೂ ಅಧಿಕ ಭಾಷಣವನ್ನು ಬರೆದಿದ್ದಾರೆ.
ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರ ಭಾಷಣವನ್ನು ಅವರೇ ಸಿದ್ಧಪಡಿಸುತ್ತಿದ್ದರು. ಇಂದಿರಾ ಗಾಂಧಿ ಅವರಿಗೆ ಕನ್ನಡಿಗ ಎಚ್ವೈ ಶಾರದಾ ಪ್ರಸಾದ್ ಮಾಧ್ಯಮ ಸಲಹೆಗಾರರಾಗಿದ್ದು ಅವರೇ ಭಾಷಣವನ್ನು ಸಿದ್ಧಪಡಿಸಿಕೊಡುತ್ತಿದ್ದರು. ಇಂದಿರಾ ಗಾಂಧಿ ಅವಧಿ ಅಲ್ಲದೇ ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ ಅವಧಿಯಲ್ಲೂ ಶಾರದಾ ಪ್ರಸಾದ್ ಮಾಧ್ಯಮ ಸಲಹೆಗಾರರಾಗಿ ಮುಂದುವರಿದ್ದರು.
ಅಟಲ್ ಬಿಹಾರಿ ಅವರಿಗೆ ಸುಧೀಂದ್ರ ಕುಲಕರ್ಣಿ ಅವರು ಭಾಷಣವನ್ನು ಸಿದ್ಧಪಡಿಸಿಕೊಡುತ್ತಿದ್ದರು. ಭಾಷಣವನ್ನು ಸಿದ್ಧವಾಗಿದ್ದರೂ ವಾಜಪೇಯಿ ಪ್ರತಿಯೊಂದು ಅಂಶವನ್ನು ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದರು. ಒಂದು ವೇಳೆ ಭಾಷಣದಲ್ಲಿ ತಪ್ಪಾಗಿ ಪದ ಪ್ರಯೋಗವಾಗಿ ಅದು ವಿವಾದವಾಗುವ ಮೊದಲೇ ಅಲ್ಲೇ ಸರಿ ಪಡಿಸಿಕೊಳ್ಳುತ್ತಿದ್ದರು ಎಂದು ಕುಲಕರ್ಣಿ ಹೇಳುತ್ತಾರೆ.
ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ವಾಜಪೇಯಿ ಒಮ್ಮೆ, ನಾನು ‘ಸ್ವಯಂಸೇವಕ’ ಎಂದು ಹೇಳಿದ್ದರು. ಕೂಡಲೇ ‘ನಾನು ರಾಷ್ಟ್ರದ ಒಮ್ಮ ಸ್ವಯಂ ಸೇವಕ’ ಎಂದು ಹೇಳುವ ಮೂಲಕ ತಪ್ಪನ್ನು ಸರಿಪಡಿಸಿಕೊಂಡರು ಎಂದು ಕುಲಕರ್ಣಿ ವಾಜಪೇಯಿ ಭಾಷಣದ ಬಗ್ಗೆ ಮೆಲುಕು ಹಾಕುತ್ತಾರೆ.
ಸ್ವಾತಂತ್ರ್ಯ ದಿನಾಚರಣೆ, ವಿದೇಶ ಪ್ರವಾಸ ಇತ್ಯಾದಿ ದೊಡ್ಡ ಸಮಾರಂಭ ಇದ್ದಾಗ ಕುಳಿತುಕೊಂಡು ವಿಷಯ ತಜ್ಞರು ಚರ್ಚೆ ನಡೆಸಿ ಪ್ರಧಾನಿಗಳ ಭಾಷಣವನ್ನು ಸಿದ್ಧಪಡಿಸುತ್ತಾರೆ.
ನರೇಂದ್ರ ಮೋದಿಯವರಿಗೆ ದೇಶದಲ್ಲಿ ಅತಿ ಹೆಚ್ಚು ಪ್ರಚಾರ ಸಿಕ್ಕಿದ್ದು 2013ರ ಸ್ವಾತಂತ್ರ ದಿನಾಚರಣೆ ವೇಳೆ ನಡೆಸಿದ ಭಾಷಣ. ಈ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಭಾಷಣಕ್ಕೆ ಸವಾಲು ಹಾಕಿ ನನ್ನ ಭಾಷಣವನ್ನು ಹೋಲಿಕೆ ಮಾಡಿ ಎಂದು ಮೋದಿ ಹೇಳಿದ್ದರು. ಕೆಂಪುಕೋಟೆಯಲ್ಲಿ ಸಿಂಗ್ ಭಾಷಣ ಮಾಡಿದ ಬಳಿಕ ಗುಜರಾತ್ನಲ್ಲಿ ಮೋದಿ ಮಾತನಾಡಿ ಸಿಂಗ್ ಹೇಳಿದ ಪ್ರಮುಖ ಅಂಶಗಳಿಗೆ ಕೆಲವೇ ಗಂಟೆಗಳಲ್ಲಿ ತಿರುಗೇಟು ನೀಡಿದ್ದರು. ಈ ವೇಳೆ ಮೋದಿ ಅವರನ್ನು ಬಿಜೆಪಿ 2014ರ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರಲಿಲ್ಲ.
Comments are closed.