ಕರಾವಳಿ

ಮಂಗಳೂರಿನಲ್ಲಿ ದಿಢೀರ್ ದಾಳಿ : ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ಇಲ್ಲ : ಎರಡು ಅಂಗಡಿಗಳಿಗೆ ಬೀಗ

Pinterest LinkedIn Tumblr

Mcc_raid_shop_1

ಮಂಗಳೂರು,ಜುಲೈ.1: : ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ನೇತೃತ್ವದ ತಂಡ ಇಂದು ನಗರದ ಕೆಲವು ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಹಾಗೂ ಉದ್ದಿಮೆ ಪರವಾನಿಗೆಯ ನವೀಕರಣ ಬಗ್ಗೆ ಕಾರ್ಯಾಚರಣೆ ನಡೆಸಿ ಪರವಾನಿಗೆ ಹೊಂದಿರದ ಎರಡು ಅಂಗಡಿಗಳಿಗೆ ಬೀಗ ಜಡಿದು ಎಚ್ಚರಿಕೆ ನೀಡಿದೆ.

ಪ್ಲಾಸ್ಟಿಕ್ ಬಳಕೆ ನಿಷೇಧ ಕಾನೂನು ಜಾರಿಗೆ ಬಂದ ಬಳಿಕವೂ ಕೆಲವು ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಹಾಗೂ ಉದ್ದಿಮೆ ಪರವಾನಿಗೆ ನವೀಕರಣಗೊಳಿಸದಿರುವ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ದಾಳಿಯ ನೇತ್ರತ್ವ ವಹಿಸಿದ ಮನಪಾ ಅರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್ ತಿಳಿಸಿದ್ದಾರೆ.

”ಉದ್ದಿಮೆ ಪರವಾನಿಗೆ ನವೀಕರಣ, ಹಾಗೂ ಪರವಾನಿಗೆ ಹೊಂದದವರು ನವೀಕರಣ ಮಾಡುವಂತೆ ಹಾಗೂ ಜುಲೈ 1ರಿಂದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಪತ್ರಿಕಾ ಪ್ರಕಟನೆ ಹಾಗೂ ನೋಟಿಸು ನೀಡುವ ಮೂಲಕ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಪ್ರತಿಷ್ಠಿತ ಮಳಿಗೆಗಳ ಮೂಲಕವೇ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಲಾಗಿದೆ” ಎಂದರು.

Mcc_raid_shop_2

ಎರಡು ಅಂಗಡಿಗಳಿಗೆ ಬೀಗ :

ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದ ತಂಡ ಇಂದು ಸಂಜೆ ಆರೋಗ್ಯ ನಿರೀಕ್ಷಕರು, ಇಂಜನಿಯರ್ ಗಳು ಹಾಗೂ ಕೆಲ ಮನಾಪ ಸದಸ್ಯರ ಜತೆ ನಗರದ ಸಿಟಿ ಸೆಂಟರ್ ಮಾಲ್ ನ ಕೆಲ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂದರ್ಭ ಅಲ್ಲಿ ಪರವಾನಿಗೆ ನವೀಕರಿಸದ 3 ಅಂಗಡಿಗಳಿಗೆ ನೋಟೀಸು ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಮುನ್ನೆಚ್ಚರಿಕೆಯ ಜತೆಗೆ ಪರವಾನಿಗೆಯೇ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕಂಪೆನಿಯೊಂದರ ಮಳಿಗೆಗೆ ಅಧಿಕಾರಿಗಳು ಬೀಗ ಜಡಿದರು.

ಈ ಮಾಲ್ ನಲ್ಲಿ ತಂಡ ಪರಿಶೀಲನೆ ನಡೆಸುತ್ತಿದ್ದ ವೇಳೆ ಉದ್ದಿಮೆ ಪರವಾನಿಗೆ ಹೊಂದಿರದ ಕೆಲವೊಂದು ಮಳಿಗೆಗಳವರು ಸ್ವಯಂ ಪ್ರೇರಿತವಾಗಿ ಬೀಗ ಹಾಕಿದ ಪ್ರಸಂಗವೂ ನಡೆಯಿತು. ಮಾಲ್ ನ ಮಹಡಿಗಳ ಪ್ಯಾಸೇಜ್ ಗಳಲ್ಲಿ ಡೋರ್ ನಂಬ್ರ, ಪರವಾನಿಗೆ ಇಲ್ಲದೆಯೇ ಕಾರ್ಯಾಚರಿಸುತ್ತಿರುವ ತೆರೆದ ಮಳಿಗೆಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಕವಿತಾ ಸನಿಲ್ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಮಾಲ್ ಸಮೀಪದ ಅಂಗಡಿಗಳತ್ತ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ತಂಡ, ಅಲ್ಲಿಯೂ ಉದ್ದಿಮೆ ಪರವಾನಿಗೆ ನವೀಕರಣಗೊಳಿಸದ ಒಂದು ಅಂಗಡಿಗೆ ನೋಟೀಸು ಹಾಗೂ ಪರವಾನಿಗೆಯನ್ನೇ ಮಾಡಿರದ ಅಂಗಡಿಯೊಂದಕ್ಕೆ ಬೀಗ ಜಡಿಯಿತು. ಜೊತೆಗೆ ಈ ಅಂಗಡಿಯಲ್ಲಿದ್ದ ನಿಷೇಧಿತ ಪ್ಲಾಸ್ಟಿಕನ್ನು ಅಧಿಕಾರಿಗಳು ವಶಪಡಿಸಿಕೊಂಡರು.

Mcc_raid_shop_3

ದಿಢೀರ್ ಕಾರ್ಯಾಚರಣೆ : ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ಇಲ್ಲ

ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನೀಲ್ ಅವರು ಇಬ್ಬರು ಕಾರ್ಪೊರೇಟರ್ಗಳಾದ ರಜನೀಶ್ ಹಾಗೂ ನಾಗವೇಣಿ ಜತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಪೂರ್ವ ಮಾಹಿತಿ ನೀಡದೆಯೇ ದಿಢೀರ್ ದಾಳಿ ನಡೆಸುವ ಮೂಲಕ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ”ಯಾವೆಲ್ಲಾ ಅಂಗಡಿಗಳಿಗೆ ಪರವಾನಿಗೆ ನವೀಕರಣವಾಗಿಲ್ಲ ಎಂಬ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾರ್ಯಾಚರಣೆಗೆ ಮುಂದಾದರೆ ತಕ್ಷಣ ಮಾಹಿತಿ ಮಳಿಗೆಗಳವರಿಗೆ ಮುಟ್ಟುತ್ತದೆ. ಇಂತಹ ವ್ಯವಸ್ಥೆ ನಮ್ಮಲ್ಲಿದೆ. ಹಾಗಾಗಿ ನೇರವಾಗಿ ಇಂದು ಮೇಯರ್ ಹಾಗೂ ಮುಖ್ಯ ಸಚೇತಕರ ಅನುಮತಿಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಈ ಬಗ್ಗೆ ಕವಿತಾ ಸನೀಲ್ ಪ್ರತಿಕ್ರಿಯಿಸಿದ್ದಾರೆ.

ಇದರಿಂದ ಜಾಗೃತಿ ಮೂಡಿಸಿ ಪರವಾನಿಗೆ ಮಾಡಿಸುವುದು, ನವೀಕರಣಗೊಳಿಸಲು ಪ್ರೇರೇಪಿಸುವುದು ನಮ್ಮ ಪ್ರಮುಖ ಉದ್ದೇಶ. ಹಾಗಾಗಿ ಯಾವುದೇ ಸಣ್ಣ ಅಂಗಡಿಗಳಲ್ಲಿ ಈ ಕಾರ್ಯಾಚರಣೆ ನಡೆಸದೆ ಪ್ರತಿಷ್ಠಿತ ಮಳಿಗೆಗಳ ಮೂಲಕವೇ ಆರಂಭಿಸಲಾಗಿದೆ. ನಗರದಲ್ಲಿ 29,100ರಷ್ಟು ಉದ್ದಿಮೆಗಳು ಕಾರ್ಯಾಚರಿಸುತ್ತಿವೆ. ಪ್ರತಿ ವರ್ಷ ಫೆಬ್ರವರಿ ತಿಂಗಳೊಳಗೆ ಉದ್ದಿಮೆ ಪರವಾನಿಗೆ ನವೀಕರಣ ಮಾಡುವುದು ಕಡ್ಡಾಯ ಹಾಗಿದ್ದರೂ ಜುಲೈ ತಿಂಗಳು ಆರಂಭವಾದರೂ ನವೀಕರಣ ಮಾಡದಾಗ ಜಿಲ್ಲೆಯ ಅಭಿವೃದ್ಧಿಗಾಗಿ ಕಂದಾಯ ಸಂಗ್ರಹದ ದೃಷ್ಟಿಯಿಂದ ಕಾರ್ಯಾಚರಣೆ ನಡೆಸುವುದು ಅನಿವಾರ್ಯ” ಎಂದು ಕವಿತಾ ಸನಿಲ್ ಹೇಳಿದರು.

ಮನಪಾ ಆರೋಗ್ಯಅಧಿಕಾರಿ ಮಂಜಯ್ಯ ಶೆಟ್ಟಿ, ಅಭಿಯಂತರರಾದ ಮಧು, ಆರೋಗ್ಯ ನಿರೀಕ್ಷಕರಾದ ನಿರ್ಮಲಾ, ಕರುಣಾಕರ, ಯಶವಂತ ಹಾಗೂ ಪೂವಪ್ಪ ಸೇರಿದಂತೆ ಇತರ ಸಂಬಂಧ ಪಟ್ಟ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.