
ಶ್ರೀಕಾಂತ್
ಮಂಗಳೂರು, ಜೂ.19 ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಪಿ. ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ನರೇಶ್ ಶೆಣೈಯ ಸ್ನೇಹಿತ ಎನ್ನಲಾದ ಮತ್ತೋರ್ವ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾವೂರು ಶಾಂತಿನಗರದ ನಿವಾಸಿ ಶ್ರೀಕಾಂತ್ (42) ಎನ್ನಲಾಗಿದ್ದು, ಉರ್ವಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಶ್ ನಾಯ್ಕರ ನೇತೃತ್ವದ ತಂಡವು ಶ್ರೀಕಾಂತ್‌ನನ್ನು ಮುಲ್ಕಿ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದೆ.
ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು.
ಅಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಪ್ರಕರಣಕ್ಕೆ ಸಂಬಂಧಿಸಿ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ, ಶಿವ @ ಶಿವಪ್ರಸಾದ್, ಶೈಲೇಶ್ @ ಶೈಲು ಹಾಗೂ ಬಾಳಿಗ ಕೊಲೆ ಈ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ನರೇಶ್ ಶೆಣೈಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸ್ಥಳಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಾ ಆರೋಪಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಕೆ ಮಂಜುನಾಥ್ ಶೆಣೈ ಯಾನೆ ಮಂಜು ನಿರೇಶ್ವಾಲ್ಯ ಯಾನೆ ಮಂಜು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇದೀಗ ಶ್ರೀಕಾಂತ್‌ನ ಸೆರೆಯಾಗುವುದರೊಂದಿಗೆ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಒಟ್ಟು ಸಂಖ್ಯೆ 6ಕ್ಕೇರಿದೆ. ಇವರಲ್ಲಿ ಮಂಜು ನಿರೇಶ್ವಾಲ್ಯರಿಗೆ ಈಗಾಗಲೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಶಂಕಿತ ಆರೋಪಿ ನರೇಶ್ ಶೆಣೈ ಸೇರಿದಂತೆ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿರುತ್ತದೆ.
Comments are closed.