ಉಳ್ಳಾಲ, ಜೂ. 15 : ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಿದ್ದ ಶಿಕ್ಷಕನೋರ್ವ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಜೊತೆ ಪ್ರೀತಿ-ಪ್ರೇಮ ಎಂದು ಸುತ್ತಾಡಿದ್ದಲ್ಲದೆ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಆಕೆಯ ನಗ್ನಚಿತ್ರ ತೆಗೆದು ಬ್ಲ್ಯಾಕ್‌ಮೇಲ್ ಮಾಡಿ ಖಾಲಿ ಚೆಕ್‌ಗಳಿಗೆ ಸಹಿ ಪಡೆದ ಘಟನೆ ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸರು ಆರೋಪಿ ಶಿಕ್ಷಕ ಮೈಸೂರು ನಿವಾಸಿ ನರಸಿಂಹ ಮೂರ್ತಿ(34) ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದೇರಳಕಟ್ಟೆಯಲ್ಲಿರುವ ನೇತಾಜಿ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ನರಸಿಂಹ ಮೂರ್ತಿ ಹಾಗೂ ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಡ್ಯ ಮೂಲದ ಯುವತಿಗೆ ಪ್ರೇಮಾಂಕುರವಾಗಿತ್ತು.
ಕಳೆದ 2014ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಮೊರಾರ್ಜಿ ದೇಸಾಯಿ ಶಿಕ್ಷಕರ ತರಬೇತಿ ಸಂದರ್ಭ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ನರಸಿಂಹ ಮೂರ್ತಿ ಶಿಕ್ಷಕಿಯನ್ನು ವಿವಾಹವಾಗುವುದಾಗಿ ನಂಬಿಸಿದ್ದ. ಜೂ.2ರಂದು ಶಿಕ್ಷಕಿಯನ್ನು ತನ್ನ ರೂಮಿಗೆ ಕರೆದಿದ್ದ ನರಸಿಂಹ ಮೂರ್ತಿ ಆಕೆಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ.
ಈ ವೇಳೆ ತನ್ನ ಮೊಬೈಲ್ ಕೆಮರಾ ಬಳಸಿ ಶಿಕ್ಷಕಿಯ ನಗ್ನದೇಹದ ಚಿತ್ರಗಳನ್ನು ಸೆರೆಹಿಡಿದಿದ್ದ. ಆನಂತರ ಶಿಕ್ಷಕಿಗೆ ನಗ್ನಚಿತ್ರವನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದ ಎನ್ನಲಾಗಿದೆ.
ಹಣ ಕೊಡದಿದ್ದರೆ ನಗ್ನಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ ಶಿಕ್ಷಕ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದ. ಸಂತ್ರಸ್ತ ಶಿಕ್ಷಕಿ ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಂತೆ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ, ನಗ್ನಚಿತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ವಿರುದ್ಧ ಬೆದರಿಕೆ, ವಂಚನೆ, ಅತ್ಯಾಚಾರ ಕೇಸ್ ದಾಖಲಾಗಿದೆ.
Comments are closed.