
ಬಂಟ್ವಾಳ, ಜೂ. 15: ಮರಳು ಲಾರಿಯ ಆರ್ಭಟಕ್ಕೆ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮುಂಜಾನೆ ನೆಲ್ಯಾಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ನಡೆದಿದೆ. ಈ ಮೂಲಕ ಮರಳು ಲಾರಿಯ ಆರ್ಭಟಕ್ಕೆ ಸತತ ಎರಡು ದಿನಗಳಲ್ಲಿ ಎರಡನೇ ಬಲಿಯಾಗಿದೆ.
ಮೃತಪಟ್ಟ ಮಹಿಳೆಯನ್ನು ನೆಲ್ಯಾಡಿಯ ಕೊನಾಲು ನಿವಾಸಿ ಜಾನಕಿ(35) ಎಂದು ಗುರುತಿಸಲಾಗಿದೆ. ಗೋಳಿತೊಟ್ಟು ಸರಕಾರಿ ಶಾಲೆಯ ಬಿಸಿಯೂಟ ಸಿಬ್ಬಂದಿಯಾದ ಇವರು ರಸ್ತೆ ದಾಟುವ ವೇಳೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮರಳು ಲಾರಿಗೆ ಎರಡನೇ ಬಲಿ :
ಮರಳು ಲಾರಿಯ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು-ಮಣಿಹಳ್ಳ ಸಮೀಪ ನಿನ್ನೆ ರಾತ್ರಿ ಬೈಕ್ ಸವಾರ ಗುರುವಾಯನಕೆರೆ-ಕನ್ನಡಿಕಟ್ಟೆ ನಿವಾಸಿ ಸಂತೋಷ್(22) ಮೃತಪಟ್ಟಿದ್ದರೆ, ಇಂದು ಮುಂಜಾನೆ ನೆಲ್ಯಾಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಮಹಿಳೆಯೋರ್ವರು ದಾರುಣ ಸಾವನ್ನಪ್ಪಿದ್ದಾರೆ.
ಬಿ.ಸಿ.ರೋಡ್ ಕೈಕಂಬದ ಎಸ್.ಆರ್. ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ ನೌಕರರಾಗಿರುವ ಸಂತೋಷ್ ಮತ್ತು ಅಶ್ವಥ್ ನಿನ್ನೆ ರಾತ್ರಿ ಮಣಿಹಳ್ಳ ಸಮೀಪ ಹೆದ್ದಾರಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು. ಈ ವೇಳೆ ಶರವೇಗದಲ್ಲಿ ಧಾವಿಸಿದ ಮರಳು ಸಾಗಾಟ ಲಾರಿ ವಾಹನವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ರಭಸವಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕರು ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದು, ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸಂತೋಷ್ ಚಿಕಿತ್ಸೆ ಫಲಿಸದೆ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಅಶ್ವತ್ಥ್(೨೧) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮರಳು ಲಾರಿ ಆರ್ಭಟಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಲಾರಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ, ಸ್ಥಳದಲ್ಲಿ ಪೊಲೀಸರನ್ನು ತರಾಟೆಗೆ ತೆಗೆದ ಘಟನೆ ನಡೆಯಿತು.
ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು ಗಂಟೆಗಟ್ಟಲೆ ಪರದಾಟ ನಡೆಸಬೇಕಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಠಾಣಾ ಪೊಲೀಸರು ಅಪಘಾತಕ್ಕೀಡಾದ ಬೈಕನ್ನು ಸ್ಥಳದಿಂದ ತೆರವುಗೊಳಿಸಿ ವಾಹನ ಸಂಚಾರವನ್ನು ವ್ಯವಸ್ಥಿತಗೊಳಿಸಿದರಾದರೂ, ವಾಹನಗಳಿಗೆ ಕಲ್ಲು ತೂರಾಟ ನಡೆಸಿದ ಯುವಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಕ್ರಮಕ್ಕೆ ಆಗ್ರಹ : ಜಿಲ್ಲಾಡಳಿತದ ವಿರುದ್ಧ ಆಕ್ರೋಷ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಎಗ್ಗಿಲ್ಲದೆ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ತಿಂಗಳು ತುಂಬೆ ಡ್ಯಾಂ ಪರಿಶೀಲನೆಗೆ ತೆರಳಿದ್ದ ಜಿಲ್ಲಾಧಿಕಾರಿ ಅವರು ಮರಳುಗಾರಿಕೆ ನಡೆಯುತ್ತಿರುವುದನ್ನು ಕಣ್ಣಾರೆ ಕಂಡಿದ್ದರು. ಆದರೂ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ಮತ್ತು ಸಾಗಾಟದ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕಳೆದ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತಕ್ಕೆ ಬೈಕ್ ಸವಾರ ಯುವಕ ಸಾವನ್ನಪ್ಪಿದ್ದು, ಓರ್ವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಮುಂಜಾನೆ ಗೋಳಿತೊಟ್ಟು ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆ ಮರಳು ಲಾರಿಯ ಆರ್ಭಟಕ್ಕೆ ದಾರುಣ ಅಂತ್ಯ ಕಂಡಿದ್ದಾರೆ.
ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸೂಚನೆಗಳನ್ನು ಉಲ್ಲಂಘಿಸಿ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ, ಸಂಬಂಧಪಟ್ಟ ಇಲಾಖೆ ಮೌನವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ಅವರು ದಂಧೆಯನ್ನು ಹತ್ತಿಕ್ಕಲು ಸೂಕ್ತ ನಿರ್ದೇಶನ ನೀಡದಿದ್ದರೆ ಅಮಾಯಕರ ಸಾವಿನ ಸರಣಿ ಮುಂದುವರಿಯುವ ಭೀತಿ ಎದುರಾಗಿದೆ.
Comments are closed.