ಕುಂದಾಪುರ: ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತನಾಗಿದ್ದು ಕೃಷಿಕನಾಗಿದ್ದ ನನಗೆ ಪಕ್ಷ ವಿಶ್ವಾಸವಿರಿಸಿ 36 ವರ್ಷಗಳಿಂದ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. ದೇಶದ ಅಭಿವೃದ್ಧಿಪರ ಚಿಂತನೆ ಹಾಗೂ ಪಕ್ಷದಲ್ಲಿ ದುಡಿಯುವ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ನೀಡುವ ಪಕ್ಷ ಕಾಂಗ್ರೆಸ್ ಮಾತ್ರ. ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಕಾಂಗ್ರೆಸ್ ಮಾಡಿದೆ ಎಂದು ನೂತನ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದರು.
ಕಾಂಗ್ರೆಸ್ ಸಮಿತಿ ಬೈಂದೂರು, ಬ್ಲಾಕ್ ಕಾಂಗ್ರೆಸ್ ಸಮಿತಿ ವಂಡ್ಸೆ ಇವರ ಆಶ್ರಯದಲ್ಲಿ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ಸಭಾ ಭವನದಲ್ಲಿ ನಡೆದ ನೂತನವಾಗಿ ರಾಜ್ಯ ಸಭೆಗೆ ಪುನಾರಾಯ್ಕೆಯಾದ ಆಸ್ಕರ್ ಫೆರ್ನಾಂಡೀಸ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ದೇಶಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹಾನ್ ನಾಯಕರನ್ನು ನೆನಪಿಸಿಕೊಂಡು ಅವರ ಆದರ್ಶಗಳನ್ನು ಪಾಲಿಸುವ ಕಾರ್ಯವಾಗಬೇಕೆ ಹೊರತು ಅವರ ಹೆಸರನ್ನು ಮರೆಯುವ ಕೆಲಸವಾಗಬಾರದು ಎಂದರು. ವ್ಯಕ್ತಿಗಳಲ್ಲಿ ಸ್ವಾಭಿಮಾನ ಹೆಚ್ಚಬೇಕು. ಜೀವನದಲ್ಲಿ ಬದಲಾವಣೆಗಳು ಆಗಬೇಕು. ಸಂಪನ್ಮೂಲಗಳ ಸದ್ಬಳಕೆ ಆಗಬೇಕು. ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಪ್ರತಿಯೋಬ್ಬರು ಚಿಂತನೆ ಮಾಡಬೇಕು ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು ಆಸ್ಕರ್ ಅವರನ್ನು ಅಭಿನಂದಿಸಿ ಮಾತನಾಡಿ, ಸುದೀರ್ಘ ೩೬ ವರ್ಷಗಳಿಂದ ಲೋಕಸಭೆ, ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗುತ್ತ ಬಂದಿರುವ ಆಸ್ಕರ್ ಫೆರ್ನಾಂಡೀಸ್ ಅವರು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಉಭಯ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಅಭಿವೃದ್ಧಿ ಕೆಲಸದಲ್ಲಿ ಆಸ್ಕರ್ ಫೆರ್ನಾಂಡೀಸ್ ಅವರ ಪರಿಶ್ರಮ ಇದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿ, ಪಕ್ಷದ ಬಲವರ್ಧನೆಗೂ ಅವರ ಕೊಡುಗೆ ನೀಡುವ ಪರಿವರ್ತನೆಯ ಕೆಲಸ ಆಸ್ಕರ್ ಫೆರ್ನಾಂಡೀಸ್ ಮೂಲಕ ಆಗಿದೆ ಎಂದರು.
ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಆಸ್ಕರ್ ಫೆರ್ನಾಂಡೀಸ್ ಅವರ ಕೊಡುಗೆ ಸಾಕಷ್ಟಿದೆ. ಈ ಭಾಗದ ಹೈಕಮಾಂಡ್ ಆಗಿಯೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇವರ ವರ್ಚಸ್ಸಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಸುಲಭದಲ್ಲಿ ಅನುದಾನ ಬಿಡುಗಡೆಯಾಗುತ್ತದೆ. ಆದ್ದರಿಂದಲೇ ಕ್ಷೇತ್ರಗಳಲ್ಲಿ ಇಷ್ಟೊಂದು ಉತ್ತಮ ಕೆಲಸಕಾರ್ಯಗಳು ನಡೆದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಮಾಜಿ ಶಾಸಕ ಯು.ಆರ್.ಸಭಾಪತಿ, ಬ್ಲೊಸಂ ಫೆರ್ನಾಂಡೀಸ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎ ಗಫೂರ್, ಸೇವಾದಳದ ಅಧ್ಯಕ್ಷ ಅಶೋಕ್ ಕೊಡವೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಜ್ಯೋತಿ, ಪಕ್ಷದ ಮುಖಂಡರಾದ ಮೋಹನ್ ನಂಬಿಯಾರ್, ವಾಸುದೇವ ಯಡಿಯಾಳ್, ಎಚ್.ಮಂಜಯ್ಯ ಶೆಟ್ಟಿ, ರಘುರಾಮ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ದೇವಾನಂದ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಗಾಣಿಗ ಕೊಲ್ಲೂರು, ಹೆಮ್ಮಾಡಿ ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ, ಕಟ್ಬೇಲ್ತೂರು ಗ್ರಾ.ಪಂ.ಅಧ್ಯಕ್ಷೆ ಅನುಸೂಯ, ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿ, ತಾ.ಕೆಡಿಪಿ ಸದಸ್ಯ ಪ್ರಸನ್ನಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ತಾ.ಪಂ.ಸದಸ್ಯ ರಾಜು ದೇವಾಡಿಗ ವಂದಿಸಿದರು.
Comments are closed.