ಕರಾವಳಿ

“ವಿಶ್ವ ರಕ್ತದಾನಿ ದಿನ” ದಂದು ರಕ್ತದಾನಿಗಳಿಗೆ ಸಮ್ಮಾನ.

Pinterest LinkedIn Tumblr

red_cross_photo_1

ಮಂಗಳೂರು,ಜೂನ್.15: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವತಿಯಿಂದ ವಿಶ್ವ ರಕ್ತದಾನಿಗಳ ದಿನ  ಕಾರ್ಯಕ್ರಮವ ಮಂಗಳವಾರ ವೆನ್‌ಲಾಕ್‌ನ ಅರ್‌ಎಪಿಸಿಸಿ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಜಿಲ್ಲೆಯ ಜನರಿಗೆ ತ್ವರಿತವಾಗಿ ರಕ್ತದ ಅಗತ್ಯವನ್ನು ಪೂರೈಸಲು ತಾಲೂಕು ಮಟ್ಟದಲ್ಲಿ ಬ್ಲಡ್‌ಬ್ಯಾಂಕ್‌ಗಳ ಅಗತ್ಯವಿದೆ. ರಕ್ತದಾನ ಅತ್ಯಂತ ಅಮೂಲ್ಯವಾದ ಜೀವ ರಕ್ಷಣೆಯ ಕೆಲಸ. ಈ ಕೆಲಸದಲ್ಲಿ ಸಮಾಜದ ಎಲ್ಲಾ ಜಾತಿ, ಜನಾಂಗದ ಜನ ಯಾವುದೇ ತಾರತಮ್ಯ ಮಾಡದೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ರಕ್ತದಾನ ಮಾಡುವ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅವುಗಳನ್ನು ಹೋಗಲಾಡಿಸಿ ಇನ್ನಷ್ಟು ಹೆಚ್ಚು ಜನರು ರಕ್ತದಾನ ಮಾಡುವಂತಾಗಲು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಬ್ಲಡ್ ಬ್ಯಾಂಕ್ ಆರಂಭಿಸುವ ಅಗತ್ಯವಿದೆ ಎಂದು ಹೇಳಿದರು.

red_cross_photo_2 red_cross_photo_3 red_cross_photo_4 red_cross_photo_5 red_cross_photo_6 red_cross_photo_7

ರಕ್ತ ಎಲ್ಲರಿಗೂ ಅಗತ್ಯವಿರುವ, ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದೆ ಇರುವ ಘಟಕವಾದ ಕಾರಣ ರಕ್ತದಾನ ಸಮಾಜದಲ್ಲಿ ಸೌರ್ಹಾದತೆಯನ್ನು ಕಾಪಾಡಲು ಶಕ್ತಿ ಇರುವ ಕೆಲಸ ಎಂದರು. ಒಂದು ಯೂನಿಟ್ ರಕ್ತ ಕನಿಷ್ಠ ಮೂರು ಜನರ ಪ್ರಾಣ ಉಳಿಸಬಹುದಾದ ಮಹತ್ವ ಹೊಂದಿರುವ ಕಾರಣ ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿರುವವರಿಗೆ ರಕ್ತ ನೀಡುವ ಕೆಲಸ ಆಗಬೇಕಾಗಿದೆ ಎಂದವರು ಹೇಳಿದರು.

ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ವರಿ ದೇವಿ ಅವರು ಮಾತನಾಡಿ,ಜಿಲ್ಲೆಯಲ್ಲಿ ರಕ್ತ ಸಂಗ್ರಹದ ದೃಷ್ಟಿಯಿಂದ ಮೊಬೈಲ್ ಯೂನಿಟ್ ಒಂದನ್ನು ಆರಂಭಿಸುವ ಗುರಿ ಹೊಂದಲಾಗಿದೆ.ವೆನ್‌ಲಾಕ್‌ನ ಬ್ಲಡ್ ಬ್ಯಾಂಕ್ ಮೂಲಕ ಸಂಗ್ರಹವಾಗುವ ರಕ್ತವನ್ನು ರೋಗಿಗಳಿಗೆ ಬದಲಿ ರಕ್ತದ ಬೇಡಿಕೆ ಒಡ್ಡದೆ ನೇರವಾಗಿ ನೀಡಲಾಗುತ್ತದೆ. ರಕ್ತದಾನ ನಮ್ಮನ್ನು ಒಂದು ಗೂಡಿಸುವ ಕೆಲಸ ಮಾಡುತ್ತದೆ. ಆದ ಕಾರಣ ಇದೊಂದು ವಿಶ್ವಭ್ರಾತ್ವದ ಸಂಕೇತವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕ್‌ನ ಸೇವೆ ಸಹಾಯ ಪಡೆಯಲು ಸಹಾಯವಾಣಿಯನ್ನು ಆರಂಭಿಸಲಾಯಿತು. ಈ ಸೇವೆಯನ್ನು 0824-2424788 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಪಡೆಯಬಹುದಾಗಿದೆ ಡಾ.ರಾಜೇಶ್ವರಿ ದೇವಿ ತಿಳಿಸಿದರು.

ಆನ್ ಲೈನ್ ಬ್ಲಡ್ ಬ್ಯಾಂಕ್ : ಶೀಘ್ರದಲ್ಲೇ ಮೊಬೈಲ್ ಆ್ಯಪ್ ಆರಂಭ

ರೆಡ್ ಕ್ರಾಸ್ ಜಿಲ್ಲಾ ಸಮಿತಿಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಅಧ್ಯಕ್ಷ ಡಾ.ಸುಶೀಲ್ ಜತ್ತನ್ನ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ರಕ್ತದಾನದ ಇನ್ನಷ್ಟು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಆದರೆ ಈ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿಯ ಕೊರತೆಯಿದೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಮೂಲಕ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಮಾಹಿತಿ ನೀಡಲಾಗುವುದು. ರೆಡ್ ಕ್ರಾಸ್‌ನ ಮೊಬೈಲ್ ಆ್ಯಪ್ ಒಂದನ್ನು ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.

ರಕ್ತದಾನಿಗಳಿಗೆ ಗೌರವ ಸಮ್ಮಾನ:

ಸಮಾರಂಭದಲ್ಲಿ ಗರಿಷ್ಠ ಪ್ರಮಾಣದಲ್ಲಿ ರಕ್ತದಾನ ಮಾಡಿದ ಕರುಣಾಕರ ಎಂ.ಎಚ್(49 ಬಾರಿ), ಹರಿ ಪ್ರಸಾದ್ (46 ಬಾರಿ), ರೋಹನ್ ಜಾನ್ ಡಿ ಸಿಲ್ವ (36ಬಾರಿ), ಯೋಗೀಶ್ ಪೂಜಾರಿ(24 ಬಾರಿ), ಸಂದಿಪ್ (20ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದವರು) ಹಾಗೂ ಬ್ಲಡ್ ಬ್ಯಾಂಕ್‌ನ ನಿಕಟ ಪೂರ್ವ ಅಧ್ಯಕ್ಷರಾಗಿ ಜಿಲ್ಲೆಯ ಬ್ಲಡ್ ಬ್ಯಾಂಕ್ ಬೆಳವಣಿಗೆಗೆ ಶ್ರಮಿಸಿದ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್‌ರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಜಿಲ್ಲೆಯಲ್ಲಿ ರಕ್ತದಾನ ಶಿಬಿರ ನಡೆಸಲು ಸಹಕರಿಸಿದ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಮ ಶೆಟ್ಟಿ, ಡಾ.ಶಾಂತರಾಮ ಬಾಳಿಗ, ಡಾ.ರಾಜೇಶ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಸದಸ್ಯ ಟೈಟಾಸ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.

Comments are closed.