
ಮಂಗಳೂರು: ಇಂದಿನ ಸಾಫ್ಟ್ವೇರ್ ಸಂಸ್ಕೃತಿಯಲ್ಲಿ ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ. ಕೈಗಾರಿಕಾ ಕ್ರಾಂತಿಯಿಂದಾಗಿ ಗುಡಿ ಕೈಗಾರಿಕೆಗಳು, ನೇಕಾರರು ಉದ್ಯೋಗ ಕಳೆದುಕೊಳ್ಳುವಂತಾಗಿತ್ತು. ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್ ಪದವೀಧರರ ಅಗತ್ಯತೆಯನ್ನು ಕುಗ್ಗಿಸುವ ಸಾಧ್ಯತೆ ಇರುವಾಗ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಕ್ಷೇತ್ರದಲ್ಲಿ ಮೌಲ್ಯವರ್ಧನೆಯ ಕೊಡುಗೆ ನೀಡುವ ಮೂಲಕ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಬೇಕಾಗಿದೆ ಎಂದು ಒಮ್ನಿಸೆಸ್ ಟೆಕ್ನಾಲಜೀಸ್ನ ನಿರ್ದೇಶಕ ಅತುಲ್ ಕುಡ್ವಾ ಹೇಳಿದರು. ಅವರು ಇಲ್ಲಿನ ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ರವಿವಾರ ಸಂಜೆ ನಡೆದ ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ೧೨ನೇ ಪದವಿಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಜ್ಞಾನದ ಹಸಿವು, ಹೊಸ ತಂತ್ರಜ್ಞಾನದ ಬೆಳವಣಿಗೆಗಳ ಅರಿವು, ಮೌಲ್ಯಗಳಿಗೆ ಮಹತ್ವ ನೀಡಿ ದೂರದರ್ಶಿತ್ವದ ಬದುಕು ನಮ್ಮದಾಗಬೇಕು. ಒಳಿತನ್ನೇ ಓದುವ, ನೋಡುವ, ಮಾಡುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು ಎಂದವರು ಹಾರೈಸಿದರು.

ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಎಸ್. ಎಸ್. ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಹನ ಕಲೆ, ಆಂಗ್ಲ ಭಾಷಾ ಪ್ರೌಢಿಮೆ, ವಿಶ್ಲೇಷಣಾತ್ಮಕ ಗುಣ, ನಿರ್ಧಾರ ತಳೆಯುವ ಜಾಣ್ಮೆ, ಟೀಂವರ್ಕ್ ವಿದ್ಯಾರ್ಥಿಗಳ ಉದ್ಯಮ ಶೀಲತೆ ಮತ್ತು ಯಶಸ್ಸಿನ ವರ್ಧನೆಗೆ ಕಾರಣವಾಗುತ್ತದೆ ಎಂದರು.
ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ವರ್ತಮಾನವನ್ನು ಆನಂದಿಸಿ ಉತ್ತಮ ಕನಸುಗಳೊಂದಿಗೆ ಹೆತ್ತವರನ್ನು ಮರೆಯದೇ ಮುಂದಿನ ಜೀವನದಲ್ಲಿ ಶಿಕ್ಷಣ ಪಡೆಯುವವರಿಗೆ ನೆರವಾಗುವ ಮಹತ್ಕಾರ್ಯದಲ್ಲಿ ಕೊಡುಗೆ ಸಲ್ಲಿಸುವವರಾಗಿ ಎಂದರು.
ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ರಂಗನಾಥ್ ಭಟ್ ಮಾತನಾಡಿ ದ್ಯೆಯಿಂದ ಸರ್ವಸ್ವ ಮತ್ತು ಸತ್ಯ ಧರ್ಮದ ಜೀವನ ಸಂದೇಶವನ್ನು ಕೆನರಾ ಸಂಸ್ಥೆಯ ಲಾಂಛನದಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿಗೆ ಪಡೆದುಕೊಳ್ಳಬೇಕಾದ ಅಮೂಲ್ಯ ಚಿಂತನೆಗಳಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಪ್ರೊ. ಬಾಲಕೃಷ್ಣ ಭಟ್ ಸಂಪಾದಕತ್ವದಲ್ಲಿ ರೂಪುಗೊಂಡ ಕಾಲೇಜಿನ ಇ ವಾರ್ಷಿಕ ಸಂಚಿಕೆ ಸುರಭಿಯನ್ನು ಅತಿಥಿ ಅತುಲ್ ಕುಡ್ವಾ ಸಹಿತ ಗಣ್ಯರು ಲೊಕಾರ್ಪಣೆಗೈದರು. ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಸ್ವಾಗತಿಸಿದರು. ಆಡಳಿತಾಧಿಕಾರಿ ಗಣೇಶ್ ಕಾಮತ್ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಕೀರ್ತಿ ಶರಲ್, ಜೆಮಿಷಾ, ವರ್ಷಾ ಐತಾಳ್, ಪಂಚಮ್ ಬಾಳಿಗಾ, ನೀಲ್ ಸೂರೆಜಾ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಅಣ್ಣಪ್ಪ ಪೈ, ಕೊಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಮಾರೂರು ಸುಧೀರ್ ಪೈ, ಕೊಚ್ಚಿಕಾರ್ ಸುಧಾಕರ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ.ಗಣೇಶ್ ಕಾಮತ್, ಗೋಪಾಲ ಕೃಷ್ಣ ಶೆಣೈ, ಕೆ. ಸುರೇಶ್ ಕಾಮತ್, ಡಾ.ಪಿ. ಉಮಾನಂದ ಮಲ್ಯ, ಎಂ.ಎಂ. ಕಾಮತ್ ಆಡಳಿತ ಕೌನ್ಸಿಲ್ ಸದಸ್ಯರಾದ ಎಂ.ರಮೇಶ್ ಕಾಮತ್, ಎ.ಗೊಪಾಲ ರಾವ್, ಎಂ.ಬಿ.ಪಡಿಯಾರ್, ಹಾಗೂ ಕಾಲೇಜಿನ ವಿಭಾಗ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ, ಡೇಮಿಯನ್ ಡಿ. ಮೆಲ್ಲೋ ವಂದಿಸಿದರು. ಕು.ಅಕ್ಷತಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.
Comments are closed.