ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್ 23.75ಕೋಟಿ ರೂ. ಲಾಭ – ಇದು ಸಾರ್ವಕಾಲಿಕ ದಾಖಲೆ : ಡಾ|| ಎಂ. ಎನ್. ರಾಜೇಂದ್ರ ಕುಮಾರ್

Pinterest LinkedIn Tumblr

Scdc_press_meet_1

ಮಂಗಳೂರು,ಜೂನ್.13 : ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ತನ್ನ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಿರುವ ಹಾಗೂ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಕಾರ್‍ಯ ಯೋಜನೆಗಳೊಂದಿಗೆ ಗುರುತಿಸಿಕೊಂಡಿರುವ  ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್   (ಎಸ್‌ಸಿಡಿಸಿಸಿ ಬ್ಯಾಂಕ್)  ದಿನಾಂಕ 31-02-2016ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಗರಿಷ್ಠವಾದ 23.75 ಕೋಟಿ ರೂಪಾಯಿ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಬ್ಯಾಂಕ್ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ.  ಸಾಧನೆಯ 102 ವರ್ಷಗಳ ಮುನ್ನಡೆಯೊಂದಿಗೆ ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು ವ್ಯವಹಾರದ ಗುರಿ  5300 ಕೋಟಿ ರೂಪಾಯಿಗಳನ್ನು ದಾಟಿ 5548.58 ಕೋಟಿ ರೂಪಾಯಿ ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ಪ್ರಸಕ್ತ ವರ್ಷ 6300 ಕೋಟಿ ವ್ಯವಹಾರದ ಗುರಿ ಹೊಂದಿದೆ ಎಂದು ಹೇಳಿದರು.

Scdc_press_meet_2 Scdc_press_meet_3 Scdc_press_meet_4 Scdc_press_meet_5

ಠೇವಣಿ ಹೆಚ್ಚಳ :

ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳಲ್ಲೂ ಠೇವಣೆ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರು ಕೂಡಾ ಹಾಗೂ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಈ ಬ್ಯಾಂಕು ತನ್ನ 101 ಶಾಖೆಗಳ ಮುಖಾಂತರ 2015-16 ಸಾಲಿನಲ್ಲಿ ಒಟ್ಟು 3099.11 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕೆಂಬ   ಕೀರ್ತಿಗೂ ಪಾತ್ರವಾಗಿದೆ. ಇದು ಕಳೆದ ಸಾಲಿಗಿಂತ ಶೇಕಡ 20.64ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

ಸಾಲ ನೀಡಿಕೆ – ವಸೂಲಿಯಲ್ಲಿ ದಾಖಲೆ :

ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ 2790.16 ಕೋಟಿ ರೂಪಾಯಿ ಮುಂಗಡ ನೀಡಿದೆ.  ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 833.03 ಕೋಟಿ ರೂಪಾಯಿ, ಮಧ್ಯಮಾವಧಿ ಸಾಲ 78.47 ಕೋಟಿ ರೂಪಾಯಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು 911.50 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ರೂ.2,449.47  ಕೋಟಿಯಾಗಿರುತ್ತದೆ.

ಸತತ 21 ವರ್ಷಗಳಿಂದ ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ 100ರ ಸಾಧನೆ :

ಬ್ಯಾಂಕು ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ 100ರ ವಸೂಲಾತಿಯನ್ನು ಕಂಡಿದ್ದು ಇಂತಹ ಸಾಧನೆಯನ್ನು ಕಳೆದ 21 ವರ್ಷಗಳಿಂದ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. 2015ರ ಮಾರ್ಚ್ ಅಂತ್ಯಕ್ಕೆ ಅವಿಭಜಿತ ದ.ಕ. ಜಿಲ್ಲೆಯ 33 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ 100ರ ಸಾಧನೆಗೈದಿದೆ.

ಬ್ಯಾಂಕಿನ ಆರ್ಥಿಕ ತಖ್ತೆ :

ಈ ಬ್ಯಾಂಕಿಗೆ ಒಟ್ಟು 918 ಸಂಘಗಳು ಸದಸ್ಯರಾಗಿದ್ದು, ಪಾಲು ಬಂಡವಾಳ ರೂ.164.68 ಕೋಟಿ ಆಗಿದ್ದು ಕಳೆದ ವರ್ಷ ರೂ.73.98 ಕೋಟಿ ಆಗಿತ್ತು. ದುಡಿಯುವ ಬಂಡವಾಳ ರೂ.4136.18 ಕೋಟಿ ಆಗಿದ್ದು, ಇದು ಕಳೆದ ವರ್ಷಕ್ಕಿಂತ (3561.78 ಕೋಟಿ) ಶೇಕಡ 16.13 ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ ರೂ.100.71  ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ.

ರುಪೇ (RuPay) ಕಿಸಾನ್ ಕ್ರೆಡಿಟ್ ಕಾರ್ಡ್ :

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರುಪೇ (RuPay) ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು ನೀಡಿದ್ದು, ಈಗಾಗಲೇ 55,440 ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ.  25,651 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ.

ಈ ಕಾರ್ಡ್‌ಗಳನ್ನು ಹೊಂದಿರುವ ರೈತರು/ಗ್ರಾಹಕರು NFS (ನ್ಯಾಶನಲ್ ಫೈನಾನ್ಸಿಯಲ್ ಸ್ವಿಚ್) ನೆಟ್‌ವರ್ಕ್ ಹೊಂದಿರುವ ದೇಶದ ಯಾವುದೇ ಬ್ಯಾಂಕಿನ ಎಟಿ‌ಎಂಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಮತ್ತು ಎಟಿ‌ಎಂಗಳಲ್ಲೂ ಹಣ ನಗದೀಕರಿಸಬಹುದು. ಹಾಗೂ ಯಾವುದೇ ವಾಣೀಜ್ಯ ಮಳಿಗೆಗಳಲ್ಲಿ ಖರೀದಿಸಿದ ವಸ್ತುಗಳಿಗೆ ನಗದನ್ನು ನೀಡುವ ಬದಲು ಈ ಕಾರ್ಡ್‌ಗಳನ್ನು Point of Sale ಯಂತ್ರದ ಮೂಲಕ (Swipe) ಸ್ವ್ಯೆಫ್ ಮಾಡಿ ಹಣ ಪಾವತಿಸಬಹುದು ಎಂದು ಅಧ್ಯಕ್ಷರು ವಿವರ ನೀಡಿದರು.

ಬ್ಯಾಂಕಿನ ಸಾಧನೆ :

ಬ್ಯಾಂಕಿಗೆ 17 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 16 ಬಾರಿ ನಬಾರ್ಡ್ ಪ್ರಶಸ್ತಿ ಸತತವಾಗಿ ದೊರೆತಿದೆ. ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ಈ ಬ್ಯಾಂಕ್‌ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ.   ಬ್ಯಾಂಕ್ ಒಟ್ಟು 42536 ಗುಂಪುಗಳನ್ನು ಹೊಂದಿದೆ.

ಜಿಲ್ಲೆಯಲ್ಲಿ ಒಟ್ಟು 101106 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ. 77674 ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ.

ಬ್ಯಾಂಕಿನ ಎಲ್ಲಾ ಶಾಖೆಗಳು ಇಂಟರ್‌ನೆಟ್, ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಠ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ  BSNL MPLS Leased Line ಸಂಪರ್ಕದ ಮೂಲಕ ಅಂತರ್ ಶಾಖೆಗಳ ತ್ವರಿತ ಸಂಪರ್ಕ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕಿಂಗ್ನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ. ಬ್ಯಾಂಕಿನ ಎಲ್ಲಾ ಶಾಖೆಗಳ ಭದ್ರತೆಯ ಹಿತದೃಷ್ಠಿಯಿಂದ ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ.

ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣೆ ಯೋಜನೆ ಕಾರ್ಯರೂಪಕ್ಕೆ ಬಂದಿದೆ.

ರುಪೇ ಕಿಸಾನ್ ಚಿಪ್ ಕಾರ್ಡ್ ವಿತರಿಸಿದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.  ಈಗಾಗಲೇ 9331 ಚಿಪ್ ಕಾರ್ಡ್‌ಗಳನ್ನು ಗ್ರ್ರಾಹಕರಿಗೆ ವಿತರಿಸಲಾಗಿದೆ.ಕಿಯೋಕ್ಸ್ ಯಂತ್ರ ಅಳವಡಿಕೆ: ಕೇಂದ್ರ ಶಾಖೆ ಕೊಡಿಯಾಲ್‌ಬೈಲ್‌ನಲ್ಲಿ ಗ್ರ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಕ್ಯಾಷ್ ಡೆಪಾಜಿಟ್ ಹಾಗೂ ಚೆಕ್ ಡೆಪಾಜಿಟ್ ಯಂತ್ರಗಳನ್ನು ಅಳವಡಿಸಲಾಗಿದೆ.  ಈ ಯಂತ್ರದಲ್ಲಿ ಗ್ರಾಹಕರು ಹಣ ಪಾವತಿಸಿ ಹಾಗೂ ಚೆಕ್ ಡೆಪಾಜಿಟ್ ಮಾಡುವ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನು ಉಳಿಸಿಕೊಳ್ಳಬಹುದು.

ತರಬೇತಿ ಕೇಂದ್ರ: ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ವಿಶೇಷ ಅನುಭವ ನೀಡಲು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸುಸಜ್ಜಿತ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ ಎಂದವರು ಹೇಳಿದರು.

ಮುಂದಿನ ಯೋಜನೆಗಳು :

ಇಂಟರ್ ಬ್ಯಾಂಕಿಂಗ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ: NPCI (National Payment Corporation of  India) ಸಹಯೋಗದೊಂದಿಗೆ IMPS (Inter Bank Mobile  Payment System) ಯೋಜನೆಯನ್ನು ಕಾರ್ಯಗತಗೊಳಿಸಲು ಚಿಂತನೆ ನಡೆಸಿದೆ.  ಈ ಯೋಜನೆಯಿಂದ ಮೊಬೈಲ್ ಮೂಲಕ ಗ್ರಾಹಕರ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಅದೇ ಬ್ಯಾಂಕಿನಿಂದ ಮತ್ತು ಇತರ ಬ್ಯಾಂಕಿನ  ಖಾತೆಗೆ ಹಣ ವರ್ಗಾಯಿಸಬಹುದು. ಈ ರೀತಿ ಹಣ ವರ್ಗಾವಣೆಗೆ ಮೊಬೈಲ್ ನಂಬ್ರ ಹಾಗೂ MMID ಉಪಯೋಗಿಸಿ ಈ ವ್ಯವಸ್ಥೆಯ ಪ್ರಯೋಜನ ಪಡೆಯಬಹುದು.

ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ತಾಲೂಕು ಕೇಂದ್ರಗಳಲ್ಲಿ ಎಟಿ‌ಎಂ ಅಳವಡಿಕೆ. ಈ ಎಟಿ‌ಎಂನಲ್ಲಿ ಯಾವುದೇ ಬ್ಯಾಂಕಿನ ಎಟಿ‌ಎಂ ಕಾರ್ಡ್‌ಗಳನ್ನು ಉಪಯೋಗಿಸಿ ಹಣ ಪಡೆಯಬಹುದು ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಉಪಸ್ಥಿತಿ ನಿರ್ದೇಶಕರುಗಳಾದ ಶ್ರೀ ವಿನಯ ಕುಮಾರ್ ಸೂರಿಂಜೆ, ಬಿ.ನಿರಂಜನ್ , ಟಿ.ಜಿ.ರಾಜಾರಾಮ್ ಭಟ್, ಎಂ.ವಾದಿರಾಜ ಶೆಟ್ಟಿ, ಭಾಸ್ಕರ್. ಎಸ್. ಕೋಟ್ಯಾನ್,  ಕೆ.ಎಸ್.ದೇವರಾಜ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಬಿ.ಜಯರಾಮ್ ರೈ, ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಮ್.ವಿಶ್ವನಾಥ್ ನಾಯರ್.

Comments are closed.