ಕರಾವಳಿ

ನಾರಿಯರ ಕುಪ್ಪಳಿ ಪ್ರವಾಸ : ಮಲೆಯ ನಾಡಿಗೆ, ರಸಋಷಿಯ ಬೀಡಿಗೆ…

Pinterest LinkedIn Tumblr

shyamal_artlicle_pic_1

” ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ ; ಮೌನವೇ ಮಹಾಸ್ತೋತ್ರ” – ಕುವೆಂಪು

ಮಲೆನಾಡಿನ ತರು ಲತೆ, ಗಿರಿ, ಶಿಖರ ಝರಿ, ತೊರೆಗಳು, ಮತ್ತಲ್ಲಿ ನಮ್ಮ ಕುವೆಂಪು ಕವಿಮನೆ ಬಹುಕಾಲದಿಂದ ನಮ್ಮ ಸೃಜನಾ ಬಳಗವನ್ನು ಕೈ ಬೀಸಿ ಕರೆಯುತ್ತಿತ್ತು. ಈ ಪ್ರವಾಸದ ಬಹುದಿನಗಳ ಕನಸು ನನಸಾದ ರೋಚಕ ಕ್ಷಣವದು! ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಹದಿಮೂರು ಸದಸ್ಯೆಯರು ರಾತ್ರಿ ಮಂಗಳೂರು ಎಕ್ಸ್‌ಪ್ರೆಸ್ ಏರಿ, ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಉಡುಪಿ ರೈಲು ನಿಲ್ದಾಣದಲ್ಲಿ ಬಂದಳಿದಾಗ, ಕುಪ್ಪಳಿಗೆ ನಮ್ಮನ್ನೊಯ್ಯುವ ಮಿನಿಬಸ್‌ನ ಸಾರಥಿ, ಉದಯ ಕುಮಾರ್ ಅಲ್ಲಿ ನಮಗಾಗಿ ಕಾದಿದ್ದ. ಗೆಳತಿ ಮಿತ್ರಾ ವೆಂಕಟ್ರಾಜ್ ಯೋಜಿಸಿದಂತೆ, ಈ ಮಿನಿ ಬಸ್ ನಮ್ಮನ್ನು ಉಡುಪಿಯ ಅವರ ರಾವ್ ಕುಟುಂಬದ ಮನೆಗೆ ಕರೆದೊಯ್ದಿತು.

ವೆಂಕಟ್ರಾಜರ ಅಣ್ಣ ರಮೇಶ ರಾವ್ ದಂಪತಿಯಲ್ಲಿಗೆ ಸ್ನಾನಕ್ಕಾಗಿ ಹೋದ ನಮಗೆ ಆದರದ ಸ್ವಾಗತ ಕಾದಿತ್ತು. ಉಡುಪಿಗೆ ಹೋದ ಮೇಲೆ ಉಡುಪಿ ಕೃಷ್ಣನನ್ನು ಒಂದರೆ ಘಳಿಗೆಯಾದರೂ ಕಾಣದಿರುವುದೆಂತು? ದೇವಳ ಶಿಲ್ಪ ವಿನ್ಯಾಸಕಾರರಾದ ರಮೇಶ ರಾವ್ ಅವರಿಂದಾಗಿ ನಮಗೆ ಸುಲಭದಲ್ಲಿ ಕೃಷ್ಣ ದರ್ಶನವಷ್ಟೇ ಅಲ್ಲ, ಪ್ರಸಾದರೂಪವಾಗಿ ಪಂಚ ಭಕ್ಷ್ಯ ಪರಮಾನ್ನದ
ಭೋಜನವೂ ಪ್ರಾಪ್ತಿಯಾಯ್ತು. ಅಂಗಣದಲ್ಲಿ ನಿಂತಿದ್ದ ಬೃಹದ್ರಥವನ್ನೂ, ಕನಕನ ಕಿಂಡಿಯ ಮುದ್ದು ಕೃಷ್ಣನನ್ನೂ , ಹೂವಿನಂಗಡಿಯ ಬಕುಲದ ಮಾಲೆ, ಮಲ್ಲಿಗೆ ಚೆಂಡುಗಳನ್ನೂ ಕಣ್ಣಲ್ಲಿ ತುಂಬಿಕೊಂಡು, ಕುಪ್ಪಳಿ ತಲುಪುವ ಧಾವಂತದಲ್ಲಿ, ಆ ಕಿರು ಭೇಟಿಯಲ್ಲೇ ಆಪ್ತರಾದ ರಾವ್ ದಂಪತಿಗಳಿಂದ ಬೀಳ್ಕೊಂಡು ಉದಯ ರಥವೇರಿ ಮಲೆಗಳತ್ತ ಸಾಗಿದೆವು.

ಮಲೆಯ ತಪ್ಪಲ ಸೋಮೇಶ್ವರ ತಲುಪುವಾಗ ಇದಿರಲ್ಲೇ ಎದ್ದು ನಿಂತ ಗಿರಿಶ್ರೇಣಿಯನ್ನು ಕಂಡು ಮೈ ಪುಳಕ ಗೊಂಡಿತು. ಮುಂದೆ ಮಲೆಯೇರುವ ದಾರಿಯುದ್ದಕ್ಕೂ ಕುವೆಂಪು ಗೀತಗಾಯನ ಓತಪ್ರೋತವಾಗಿ ನಮ್ಮ ಕಂಠಗಳಿಂದ ಹರಿದು ಸುತ್ತಣ ಪ್ರಕೃತಿಯಲ್ಲಿ ಲೀನವಾಯ್ತು. ಮುಂಬೈ ಆಕಾಶವಾಣಿಯ ಸುಶೀಲಾ ದೇವಾಡಿಗ ಹಾಗೂ ಯಕ್ಷಗಾನ ಹಾಡುಗಾರಿಕೆಯ ಸುಮಂಗಲಾ ಶೆಟ್ಟಿ ಮುಖ್ಯ ಗಾಯಕರಾದರೆ, ಉಳಿದ ಕಂಠಗಳೂ ಈ ನವೋಲ್ಲಾಸದ ರಸತರಂಗಿಣಿಯಲ್ಲಿ ಮಿಂದೇಳದಿರಲಿಲ್ಲ. ಇತರ ಭಾವಗೀತೆಗಳೂ ಹಿಂಬಾಲಿಸದಿರಲಿಲ್ಲ. ಚಿಕ್ಕ ಪ್ರಾಯದ ನಮ್ಮ ಯುವ ಸಾರಥಿ ಉದಯನ ಕಿವಿಗಳ ಅವಸ್ಥೆ ಏನಾಯ್ತೋ ಅವನೇ ಬಲ್ಲ. ಸಾರಥ್ಯದಲ್ಲಿ ಮಾತ್ರ ಯಾವುದೇ ಲೋಪ ಬರಲಿಲ್ಲ.

shyamal_artlicle_pic_3 shyamal_artlicle_pic_4 shyamal_artlicle_pic_5 shyamal_artlicle_pic_6

 _ವರದಿ / ಚಿತ್ರ : ಶ್ಯಾಮಲಾ ಮಾಧವ

 ಮಂಗಳೂರು: ಸುಮಾರು ಎರಡು ತಾಸಿನ ಹಾದಿಯ ಕೊನೆಗೆ, ತೀರ್ಥಹಳ್ಳಿಯಲ್ಲಿ ನಮಗಾಗಿ ಕಾದಿದ್ದ ಲೇಖಕಿ, ವಿಮರ್ಶಕಿ, ಸಸ್ಯಶಾಸ್ತ್ರಜ್ಞೆ ಗೆಳತಿ ಎಲ್.ಸಿ. ಸುಮಿತ್ರಾರ ಮನೆ ತಲುಪಿದಾಗ, ಆ ಚೆಲುವಾದ ಮನೆ, ಸುಂದರ ಹೂತೋಟ ಎಲ್ಲರ ಕಣ್ಣಿಗೂ ಹಬ್ಬವೇ ಆಯ್ತು. ಬೀರುಂಡೆ ಹಣ್ಣಿನ ತಾಜಾ ಪಾನಕ, ಹಣ್ಣು ತಿಂಡಿ, ತಿನಿಸುಗಳನ್ನು ಹೊಟ್ಟೆಗೆ ತುಂಬಿಕೊಂಡು ಸುಮಿತ್ರಾರೊಡನೆ
ಪುನಃ ರಥವೇರಿ ಕುಪ್ಪಳಿಗಭಿಮುಖವಾಗಿ ಸಾಗಿದೆವು.

ಕವಿಮನೆ-ಕುವೆಂಪು ಶತಮಾನೋತ್ಸವ ಭವನ ತಲುಪಿ, ಮುಸುಕಿದ ಕತ್ತಲಲ್ಲೇ ಸುತ್ತ ಕಣ್ಣು ಹಾಯಿಸುತ್ತಾ ಮೆಟ್ಟಲುಗಳನ್ನಿಳಿದು ಒಳ ನಡೆದೆವು. ಮಾರ್ಗದರ್ಶಕರಾಗಿ ಸುಮಿತ್ರಾ ಜೊತೆಗಿದ್ದರು. ಕಛೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರೊಡನೆ ಭೇಟಿಯಾಯ್ತು. ಭವನವನ್ನು ಸಂಪೂರ್ಣವಾಗಿ ನಮಗೆ ಪರಿಚಯಿಸಿದ ಪ್ರಕಾಶ್ ಅವರು ಮುಖ್ಯ ಕಟ್ಟಡದ ಕೋಣೆಗಳಲ್ಲೂ ಹೊರಗಿನ ಕಾಟೇಜ್‌ಗಳಲ್ಲೂ ನಮಗೆ ವಸತಿಯೊದಗಿಸಿ ಕೊಟ್ಟರು. ಉಪಾಹಾರ ಭೋಜನದ ವ್ಯವಸ್ಥೆಯನ್ನೂ ಅನುಗೊಳಿಸಿ ಮರುದಿನ ಸಂಜೆ ಸಿಗುವುದಾಗಿ ತಿಳಿಸಿ ಅನ್ಯಕಾರ್ಯ ನಿಮಿತ್ತ ಹೊರಟು ಹೋದರು.

ರಾತ್ರಿಯೂಟದ ಬಳಿಕ ಭವನದೆದುರಿನ ಬಯಲಿನಂಗಣದ ಸೋಪಾನಗಳಲ್ಲಿ ನಮ್ಮ ಕುವೆಂಪು ವಿಚಾರಧಾರೆ ತೆರೆದು ಕೊಂಡಿತು.. ಸುಶೀಲಾ ದೇವಾಡಿಗ ಮತ್ತು ಸುಮಂಗಲಾ ಶೆಟ್ಟಿ, ಸುಮಧುರವಾಗಿ ಕುವೆಂಪು ಗೀತ ಗಾಯನದಲ್ಲಿ ನಮ್ಮನ್ನು ತೇಲಿಸಿದರು. ” ಓ ನನ್ನ ಚೇತನ , ಆಗು ನೀ ಅನಿಕೇತನ ….” , ” ಸದ್ದಿರದ ಹಸುರುಡೆಯ ಮಲೆನಾಡ ಬನಗಳಲಿ…..” , ” ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ….”, ” ಆನಂದಮಯ ಈ ಜಗಹೃದಯ….” ಹೀಗೆ ರಸ‌ಋಷಿಯ ಕಾವ್ಯಧಾರೆಯಲ್ಲಿ ನಾವು ಮಿಂದೆದ್ದೆವು. ನಮ್ಮ ಸೃಜನಾ ಬಳಗದ ನಾಯಕಿ, ೮೪ರ ಹರೆಯದ ದಣಿವರಿಯದ ಅಪ್ರತಿಮ ಸ್ತ್ರೀ ಚೇತನ ಡಾ. ಸುನೀತಾ ಶೆಟ್ಟಿ ಅವರ ಸುಮಧುರ ತುಳು ಕವಿತೆಗಳೂ ಆ ರಾತ್ರಿಯ ನೀರವದಲ್ಲಿ ಅಲ್ಲಿ ಅನುರಣಿಸಿದುವು. ಮೇಲೆ ಆಗಸದಲ್ಲಿ ಕೆಲವೇ ತಾರಗೆಗಳು ಮಿನುಗಿದ್ದುವು. ಕಪ್ಪು ಮೆತ್ತಿದ ಸುತ್ತಣ ಕಾನನದಲ್ಲಿ ಆಗೀಗ ಯಾವುದೋ ಕಾಡುಹಕ್ಕಿಯ ಹಾಡು. ಮುಂಜಾವ ಐದು ಗಂಟೆಗೇ ಎದ್ದು ಸಿಧ್ಧರಾಗಿ ನವಿಲುಕಲ್ಲಿನತ್ತ ಹೊರಡ ಬೇಕಿತ್ತು. ಗೆಳತಿ ಸುಮಿತ್ರಾ , ಮೊದಲೇ ವಿನಂತಿಸಿ ಯೋಜಿಸಿದಂತೆ. ನವಿಲು ಕಲ್ಲಿನ ಸೂರ್ಯೋದಯವನ್ನು ನಮಗೆ ತೋರಲು, ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಸಿ.ಶಿವಾ ರೆಡ್ಡಿ ಅವರು ಬರುವವರಿದ್ದರು. ಆ ಬೆಳಗಿಗಾಗಿ ಕಾಯುತ್ತಾ ನಾವು ವಿಶ್ರಾಂತಿಗೆ ತೆರಳಿದೆವು. ನಮ್ಮ ಕಾಟೇಜ್ ಎದುರಿಗೇ ರಾತ್ರಿಯ ನೀರವತೆಯಲ್ಲಿ ಕಲ್ಲಾಗಿ ನಿಂತಿದ್ದರು, ನಾಯಿ ಗುತ್ತಿ ಮತ್ತು ಗುತ್ತಿ ನಾಯಿ ಹುಲಿಯ. ಅವರಿಗೆದುರಾಗಿ , ಮೂರ್ತಿಮತ್ತಾಗಿದ್ದಳು, ಕಾನೂರಿನ ಹೆಗ್ಗಡ್ತಿ!

ಮುಂಜಾವ ಸೂರ್ಯೋದಯಕ್ಕೂ ಮುನ್ನ ಆಗಮಿಸಿ ಪ್ರತ್ಯಕ್ಷರಾಗಿ ಅವಸರಿಸಿದ ಡಾ. ಶಿವಾರೆಡ್ಡಿ ಅವರು, ಹಿಂದಣ ರಾತ್ರೆ ಸುಮಿತ್ರಾರು ತಂದು ತೋರಿದ ” ಮಲೆನಾಡಿಗೆ ಬಾ ” ಕೃತಿಯ ಮೂಲಕ ನಮಗೆ ಗುರುತಾಗಿದ್ದರು. ಪ್ರಕೃತಿ, ಕುವೆಂಪು ಹಾಗೂ ಕನ್ನಡದ ಬಗ್ಗೆ ವಿಶೇಷ ಅನುರಕ್ತಿಯನ್ನು ಬೆಳೆಸಿ ಕೊಂಡು ಬಂದು ಅದನ್ನೇ ಉಸಿರಾಡುತ್ತಿರುವ ಡಾ.ಶಿವಾ ರೆಡ್ಡಿ ಅವರು ನವಿಲುಕಲ್ಲಿನ ಚಾರಣದಲ್ಲಿ ಆ ಅನುರಕ್ತಿಯನ್ನೇ ತೆರೆದಿಡುತ್ತಾ ನಮ್ಮ ಪಾಲಿಗೆ ಉತ್ತಮ ಮಾರ್ಗದರ್ಶಕರಾದರು. ಕಥೆ, ಉಪಕಥೆಗಳಿಂದ ನಮ್ಮನ್ನು ರಂಜಿಸಿದರು.

ಬೆಟ್ಟದ ತುದಿಯಲ್ಲಿನ ಅಗಾಧ ಶಿಲಾಹಾಸು ನವಿಲುಕಲ್ಲಿನ ತುತ್ತ ತುದಿಗೆ ನಡೆಯುವುದು ನಮಗೆ ಎಳ್ಳಷ್ಟೂ ಪ್ರಯಾಸ ಅನಿಸಲಿಲ್ಲ.” ಮಂಜಿನ ತೆರೆ ಸರಿದರೆ ಸೂರ್ಯೋದಯವನ್ನು ಕಾಣುವ ಭಾಗ್ಯ ನಿಮ್ಮದಾಗ ಬಹುದು; ಇಂದೇಕೋ ತಡವಾಗಿದೆ ; ಆದರೆ ಇದೂ ನೋಡುವಂತಹುದೇ “, ಎಂದ ಡಾ. ಶಿವಾ ರೆಡ್ಡಿ ಅವರ ಮಾತಿನಂತೆ , ಆ ತೆರೆ ತುಸುವಾದರೂ ಸರಿದು ಸೂರ್ಯ ಕಾಣಲಿ ಎಂದು ನಾವು ಆಶಿಸಿದೆವು. ಛಾಯಾಗ್ರಹಣದಲ್ಲಿ ನಿರತರಾಗಿದ್ದ ಆ ಪ್ರಕೃತಿ ಆರಾಧಕ , ” ಬಂದ ಬಂದ “, ಎಂದು ನಮ್ಮನ್ನೆಚ್ಚರಿಸಿದಾಗ” …ಆಹಾ ! ನೋಡದೊ, ಮಲೆಗಳಾಚೆಯ ಸುದೂರದಲಿ ಒಯ್ಯನಾವಿರ್ಭವಿಪನಮರ ತೇಜಸ್ವಿರವಿ !” ಎಂದು ಕವಿ ಹಾಡಿದಂತೆ ದೃಗ್ಗೋಚರನಾದ ಸೂರ್ಯನನ್ನು ಕಣ್ತುಂಬಿ ಕೊಳ್ಳುವಲ್ಲಿ , ಭಾವೋದ್ಗಾರಗಳಲ್ಲಿ ನಾವು ಮಗ್ನರಾದೆವು.

“ನೋಡ, ಸುಮ್ಮನೆ ನೋಡ; ಮಾತಿಲ್ಲದೆಯೆ ನೋಡ; ಈ ದೃಶ್ಯ ಮಾಧುರ್ಯದಿದಿರಿನಲಿ ಕರ್ಕಶಂ ಕವಿವಾಣಿಯು ಕೂಡ !’ ಎಂದು ಕವಿ ನುಡಿದುದನ್ನು ಈ ಪ್ರಕೃತಿ, ಕವಿನುಡಿ ಆರಾಧಕ ನಮಗೆ ಜ್ಞಾಪಿಸದಿರಲಿಲ್ಲ.

ಬೆಟ್ಟದ ಬಂಡೆಹಾಸಿನ ಮೇಲಿಂದ ಹಕ್ಕಿಯೊಂದು ಸರಭರನೆ ಹಾರಿ ಹೋದಾಗ ಡಾ.ಶಿವಾ ರೆಡ್ಡಿ ಅವರು ಒಮ್ಮೆಲೆ ಜಾಗೃತರಾಗಿ ಅತ್ತ ಸರಿದರು ಏನೆಂದು ಕೇಳಿದ ನಮಗೆ ಅವರು ‘ ವಿಸ್ಮಯ’ವೊಂದನ್ನು ತೋರಲಿದ್ದರು. ಬಂಡೆಯ ಬರಿಮೈಮೇಲಿಟ್ಟ ಹಕ್ಕಿ ಮೊಟ್ಟೆಗಳೆರಡು ! ಮುಂದೆ ಬೆಟ್ಟದಿಂದ ಕೆಳಗಿಳಿವ ಹಾದಿಯಲ್ಲಿ ಮರದ ಮೇಲೆ ಇರುವೆಗಳು ಎಲೆಗಳಿಂದಲೂ, ಸೆಗಣಿಯಿಂದಲೂ ಕಟ್ಟಿದ ಗೂಡನ್ನೂ ಅವರು ನಮಗೆ ತೋರಿದರು. ಮಲೆನಾಡಿನ ಎಂತಹ ಬಿರುಮಳೆಗೂ ಅಭೇದ್ಯವಾದ ಭದ್ರಗೂಡು ! ಕಾಡು ಮಲ್ಲಿಗೆ ಪೊದರುಗಳನ್ನೂ, ಇತರ ಮರಗಿಡಗಳನ್ನೂ ಪರಿಚಯಿಸಿ ಕೊಳ್ಳುತ್ತಾ, ಬೆಟ್ಟದ ಬುಡ ತಲುಪಿ, ಪುನಃ ನಮ್ಮ ಉದಯ ರಥವೇರಿ ತುಂಗಾತೀರ್ಥದಲ್ಲಿ ಬಂದಿಳಿದೆವು.

ತುಂಗೆಯ ತೀರದ ಆ ಚಿಕ್ಕ ಚೊಕ್ಕ ಭಟ್ಟರ ಮನೆ, ಹೋತೋಟ ; ತುಂಗೆಯ ದೇವರ
ಮೀನುಗಳಿಗಾಗಿ ಅಲ್ಲಿಂದ ಅಕ್ಕಿ, ಚುರುಮುರಿ ಕೊಂಡು ಪಕ್ಕದ ಗಣೇಶ ಗುಡಿಯ ಹಿಂದಿನಿಂದ ಬಂಡೆಕಲ್ಲ ಮೆಟ್ಟಲುಗಳನ್ನಿಳಿದು ಸಾಗಿದೆವು. ಹೊಳೆನೀರಿನ ಆಕರ್ಷಣೆಯಿಂದ ಧಾವಿಸುತ್ತಿದ್ದ ನಮ್ಮ ಹೆಜ್ಜೆಗಳನ್ನು ಎಚ್ಚರಿಸಿ ತಡೆದುದು, ಡಾ. ಶಿವಾ ರೆಡ್ಡಿ ಅವರ ಕ್ಯಾಮರಾ ಕಣ್ಣು. ಪಕ್ಕದ ಮರದಿಂದ ಕೆಳಕ್ಕೆ ನೇತು ಬಿದ್ದಿದ್ದ ಅದ್ಭುತ ವಿನ್ಯಾಸದ ಜೇಡನ ಬಲೆ ಛಿದ್ರವಾಗದಂತೆ ಅವರು ನಮ್ಮನ್ನೆಚ್ಚರಿಸಿದರು. ಮತ್ತೆ ಆ ವಿನ್ಯಾಸ ಇಲ್ಲವಾಗುವ ಮುನ್ನವೇ ಅದನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಬಂಧಿಸಿ ತೋರಿದರು. ತುಂಗೆಯ ನೀರು ಮಾತ್ರ ಕೆಳಕ್ಕಿಳಿದು ಮೀನುಗಳು ಮುಖ ತೋರದೆ ಸ್ವಲ್ಪ ನಿರಾಶೆಯೇ ಆಯ್ತು. ಎಂದೂ ಅಲ್ಲಿ ನೀರು ಅಷ್ಟೊಂದು ಕೆಳಗಿಳಿದುದನ್ನು ತಾನು ಕಂಡೇ ಇಲ್ಲವೆಂದು ತುಂಗಾತೀರ ನಿವಾಸಿ ಸುಮಿತ್ರಾ ಹೇಳಿದರು. ಭಟ್ಟರ ಮನೆಯಲ್ಲಿ ಮಾರಾಟಕ್ಕಿದ್ದ ಜೇನು, ಜೋನಿ ಬೆಲ್ಲ ಕೊಂಡು ನಾವು ಮರಳಿ ರಥವೇರಿ ಕವಿಮನೆಗೆ ಹಿಂದಿರುಗಿ, ಸ್ನಾನ, ಉಪಾಹಾರದ ಬಳಿಕ , ಈಗ ಸಂರಕ್ಷಿಸಿ ಮ್ಯೂಸಿಯಂ ಆಗಿ ಕಾಪಿಟ್ಟಿರುವ , ಕುವೆಂಪು ಬೆಳೆದ ಮನೆಯನ್ನು ನೋಡಲು ಹೋದೆವು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೧೯೯೨ರಲ್ಲಿ ಸ್ಮಾರಕವಾಗಿ ಪುನರ್ನಿರ್ಮಿಸಿದ ಈ ಮನೆಯನ್ನು ಪ್ರತಿಷ್ಠಾನವು ಅತ್ಯಂತ ವ್ಯವಸ್ಥಿತವಾಗಿ ಸಂರಕ್ಷಿಸಿಕೊಂಡು ಬಂದಿದೆ. ಚೌಕಿಮನೆಯ ವೈಶಾಲ್ಯ, ಚಂದದ ಕುಸುರಿಕಲೆಯ ದಪ್ಪ ಕಂಬಗಳು, ತೊಟ್ಟಿಯ ನಡುವಿನ ತುಳಸಿ ಕಟ್ಟೆ, ಐಗಳ ಶಾಲಾ ಕೊಠಡಿ, ಬಾಣಂತಿ ಕೋಣೆ, ಹೊರಗಣ ಅಭ್ಯಂಜನ ಕೋಣೆ ಕವಿಯು ಮಲಗಿದ್ದ ತೊಟ್ಟಿಲಿನಿಂದ ತೊಡಗಿ, ದೊಡ್ಡದಾದ ಒತ್ತು ಶ್ಯಾವಿಗೆ ಮಣೆ, ಮಹಾಗಾತ್ರದ ಕಡುಬು ಬೇಯಿಸುವ ಪಾತ್ರೆ, ಅನ್ನದ ತಿಳಿ ಬಗ್ಗಿಸುವ ಬಾನಿ, ವಿವಿಧಾಕಾರದ ಕಂಚು, ಹಿತ್ತಾಳೆಯ ಪಾತ್ರೆಗಳಂತಹ ಅಡಿಗೆಮನೆ ಪರಿಕರಗಳು, ಮನೆಯ ಪೀಠೋಪಕರಣಗಳು ಇಲ್ಲಿವೆ. ಕವಿಯ ಹಸ್ತಪ್ರತಿಗಳು, ಲೇಖನಿಗಳು , ಪ್ರಕಟಿತ ಕೃತಿಗಳು, ಪ್ರಶಸ್ತಿ ಪತ್ರ, ಸ್ಮರಣಿಕೆ, ಪ್ರಶಸ್ತಿಗಳು , ಕವಿಯ ಬದುಕಿನ ಚಿತ್ರಗಳ ಫೋಟೋ ಗ್ಯಾಲರಿ, , ಗೋಡೆಗಳಲ್ಲಿ ಕೆತ್ತಿದ ಕವಿಸೂಕ್ತಿಗಳು, ಎಲ್ಲಾ ಮಹಡಿಯ ಎಲ್ಲ ಕೋಣೆಗಳಲ್ಲೂ ಕಿವಿಗಿಂಪಾಗಿ ಅನುರಣಿಸುವ ಕವಿಯ ಗೀತೆಗಳು , ಮಾರಾಟಕ್ಕಾಗಿ ಕವಿಯ ಕೃತಿಗಳು – ಒಟ್ಟಿನಲ್ಲಿ ಈ ಸ್ಮಾರಕ ಸಂದರ್ಶನವೇ ಒಂದು ದಿವ್ಯಾನುಭವ!

ಅಪರಾಹ್ನ, ಕುವೆಂಪು ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕ ಡಾ. ಶಿವಾ ರೆಡ್ಡಿ ಹಾಗೂ ವಿದ್ಯಾರ್ಥಿಗಳೊಡನೆ ನಮ್ಮ ಸೃಜನಾ ಬಳಗದ ಪುಟ್ಟದೊಂದು ಸಂವಾದ ಕಾರ್ಯಕ್ರಮವಿತ್ತು. ಜೊತೆಗೆ ಅಧ್ಯಯನ ಕೇಂದ್ರದೊಳಗಣ ಪರಿಕರ, ಪುಸ್ತಕಗಳ ಅವಲೋಕನವೂ ನಡೆಯಿತು. ಸಾಧ್ಯವಾಗ ಬಹುದಾದ ಮುಂದಿನ ಸಾಹಿತ್ಯಿಕ ಕೊಡುಕೊಳುವಿಕೆಯ ಬಗ್ಗೆ ಡಾ. ಶಿವಾ ರೆಡ್ಡಿ ಅವರು ಸಲಹೆ, ಸೂಚನೆಗಳನ್ನಿತ್ತರು. ಮತ್ತೆ ಅವರೊಡನೆ ಕವಿಶೈಲದೆಡೆಗೆ ಸಾಗುವಾಗ ಮನಸು ಹಕ್ಕಿಯಂತೆ ಹಗುರವಾಗಿತ್ತು.

ಕವಿಶೈಲದ ಸ್ಮಾರಕ ಶಿಲಾಸ್ತಂಭಗಳನ್ನು, ನೋಡುತ್ತಾ, ಶಿಲಾಹಾಸಿನ ಮೇಲೆ ಕವಿಪುಂಗವರು ತಮ್ಮ ಹೆಸರು ಕೆತ್ತಿದ ಬಂಡೆಯ ಮೇಲ್ಭಾಗದಲ್ಲಿ ಆಸೀನರಾಗಿ ಪಶ್ಚಿಮ ಗಿರಿಶ್ರೇಣಿಯ, ಕೆಳಗಣ ಕಣಿವೆಯ ಸೌಂದರ್ಯಾರಾಧನೆಯಲ್ಲಿ ಮಗ್ನರಾದೆವು.
ಕುವೆಂಪು’ ರಾಮಾಯಣ ದರ್ಶನಂ ‘ ಮಹಾಕಾವ್ಯ ಭಾಗವನ್ನು ಸುಶ್ರಾವ್ಯವಾಗಿ ಪಾರಾಯಣ ಮಾಡಿದ ನಮ್ಮ ಡಾ. ಸುನೀತಾ ಶೆಟ್ಟಿ ಅವರ ಸ್ವರ ಅಲೆ ಅಲೆಯಾಗಿ ಅಲ್ಲಿ ಪಸರಿಸಿದಂತೆಯೇ, ಡಾ. ಶಿವಾ ರೆಡ್ಡಿ ಅವರು ಆ ಕಾವ್ಯವಾಚನಕ್ಕೆ ಮನಸೋತು ಅದನ್ನು ರೆಕಾರ್ಡ್ ಮಾಡಿ ಕೊಂಡರು. ಮುಂಬೈಯಿಂದಲೇ ಕಟ್ಟಿಕೊಂಡು ಬಂದಿದ್ದ ತಿಂಡಿಗಳೆಲ್ಲ ಹೊರ ಬಂದು ಕವಿಶೈಲದಲ್ಲಿ ಎಲ್ಲರಿಗೂ ಹೊಟ್ಟೆತುಂಬ ಉಪಾಹಾರವೂ ಆಯಿತು ಸೂರ್ಯ ಕೆಂಪಿನುಂಡೆಯಾಗಿ ದಿಗಂತದಲ್ಲಿ ಅಸ್ತಮಿಸಿದ ಮೇಲೆ ನಾವೆಲ್ಲ ಒಂದಾಗಿ ಒಕ್ಕೊರಲಿನಿಂದ ‘ ಜಯ ಭಾರತ ಜನನಿಯ ತನುಜಾತೆ …..” ಹಾಡಿ, ಕವಿಶೈಲಕ್ಕೆ ವಿದಾಯ ಹೇಳಿ ಕೆಳಗಿಳಿದೆವು. ಡಾ. ಶಿವಾ ರೆಡ್ಡಿ ಅವರಿಂದ ನಮಗೆ ಇನ್ನೊಂದು ವಿಸ್ಮಯ ಕಾದಿತ್ತು. ಬೆಟ್ಟದ ತಪ್ಪಲ’ ಶಿಲಾ ತಪಸ್ವಿ’ಯನ್ನು ಗುರುತಿಸದ ನಮ್ಮನ್ನು , ಅದರ ಸುತ್ತ ಕುಳ್ಳಿರಿಸಿ, ಅ ಸಮಾಧಿ ಕಲ್ಲನ್ನು ಪರಿಚಯಿಸಿ , ಆ ಕವನವನ್ನೋದಿ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದರು.

ಮರಳಿ ಕವಿಮನೆ ಸೇರಿಕೊಂಡ ನಾವು, ಬೆಳಿಗ್ಗೆ ಐದಕ್ಕೇ ಎದ್ದು ನಮ್ಮ ಮರುಪಯಣ ಹೊರಡ ಬೇಕಿತ್ತು. ಹೀಗಾಗಿ ಭವನಕ್ಕೆ ಮರಳಿದ್ದ ಕಡಿದಾಳ್ ಪ್ರಕಾಶ್ ಅವರನ್ನು ಭೇಟಿಯಾಗಿ ಎಲ್ಲ ಸೌಕರ್ಯಕ್ಕೆ ಕೃತಜ್ಞತಾಪೂರ್ವಕ ವಂದನೆ ಸಲಿಸಿ ಬೀಳ್ಕೊಂಡೆವು. ಊಟದ ಬಳಿಕ ವಿದಾಯ ಹೇಳಲು ಬಂದ ಡಾ. ಶಿವಾರೆಡ್ಡಿ ಅವರನ್ನು, ಅವರ ಉತ್ಸಾಹ, ಕನ್ನಡ- ಕುವೆಂಪು, ಪ್ರಕೃತಿ ಪ್ರೀತಿಯನ್ನು ನಾವು ಮರೆವಂತೆಯೇ ಇಲ್ಲ. ಆ ನೆನಪು ಸದಾ ಹಸಿರು.

ಮರು ಮುಂಜಾವ ಮರಳಿ ಹೊರಟು, ದಾರಿಯಲ್ಲಿ ಶ್ರಂಗೇರಿ ಸಮೀಪಿಸುವಾಗ ಅಲ್ಲಲ್ಲಿ ಅಲ್ಪ ಮಳೆಯಾಗಿತ್ತು.
ಹಿಂದಣ ಸಂಜೆ ಕುವೆಂಪು ಅಧ್ಯಯನ ಕೇಂದ್ರದಲ್ಲಿದ್ದಾಗ , ಬಾನು ಗುಡುಗಿ ನಮಗೆ ಮಳೆಯಾಸೆ ತೋರಿದರೂ, ಮತ್ತೆ ನಿರಾಶೆಯೇ ಉಳಿದಿತ್ತು. ಶ್ರಂಗೇರಿ ದೇವಳ ಹೊಕ್ಕು, ನದಿಯ ಮೀನುಗಳನ್ನು ಕಂಡು, ಸನಿಹದಲ್ಲೇ ಉಪಾಹಾರ ಮುಗಿಸಿ ಮರಳಿ ಉದಯ ರಥವೇರಿ ಹೊರಟರೆ, ಉಡುಪಿಯಲ್ಲಿ ರೈಲಿಗೆ ಸಾಕಷ್ಟು ವೇಳೆಯಿದ್ದ ಕಾರಣ, ನಮ್ಮ ಸಾರಥಿ ಉದಯ, ಆಗುಂಬೆ ತೀರ್ಥದಲ್ಲಿ
ನಮ್ಮನ್ನಿಳಿಸಿ , ಕರ್ನಾಟಕದ ಚಿರಾಪುಂಜಿ ಎಂದು ಬರೆದಿರುವ ಆ ಮಳೆಕಾಡು, ಕೊಳದ ದರ್ಶನಭಾಗ್ಯವನ್ನಿತ್ತ. ಜೊತೆಗೆ ದೋಣಿಯಾನದ ನಲಿವನ್ನೂ ಅನುಭವಿಸಿ, ಅಲ್ಲಿ ವಿಹರಿಸುತ್ತಿದ್ದ ಬಾತುಗಳ ಚೆಲುವನ್ನೂ, ಮಂಗಗಳ ಮುಳುಗಾಟ, ಚೆಲ್ಲಾಟವನ್ನೂ ಕಂಡು ಆನಂದಿಸಿ, ಮರಳಿ ರಥವೇರಿ, ಉಡುಪಿ ತಲುಪಿದೆವು. ನಮ್ಮ ಡಾ. ಸುನೀತಾ ಶೆಟ್ಟಿ ಅವರ ಮುಂದಾಲೋಚನೆಯಂತೆ, ಅಲ್ಲಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರವನ್ನು ಸಂದರ್ಶಿಸುವ ನಮ್ಮ ಆಶೆಯೂ ಈಡೇರುವಂತೆ , ಪಯಣದ ಆರಂಭದಲ್ಲಿ ನಮಗೊದಗಿದ ಉಡುಪಿಯ ರಮೇಶ ರಾವ್ ಅವರು , ಕೇಂದ್ರದ ನಿರ್ದೇಶಕ ಪ್ರೊ. ಕೃಷ್ಣ ಭಟ್ ಅವರನ್ನು ಸಂಪರ್ಕಿಸಿದರೆ ನಮಗೆ ಅಲ್ಲಿಂದ ಆದರದ ಆಹ್ವಾನ ಬಂದಿತು.

ಕೇಂದ್ರದ ವ್ಯವಸ್ಥಿತ ಗ್ರಂಥಭಂಡಾರವನ್ನೂ, ಕಾಪಿಟ್ಟ ಧ್ವನಿಮುದ್ರಿಕೆ, ದೃಶ್ಯಾವಳಿಗಳ ಸಿರಿಯನ್ನೂ ಕಂಡು, ಅವರ ಪ್ರೀತಿಯ ಆಗ್ರಹದಂತೆ ಅಲ್ಲೇ ಉಂಡು, ಬೀಳ್ಕೊಂಡು ಹೊರಟರೆ, ಎಲ್ಲವೂ ಹೂವೆತ್ತಿದಂತೆ ಎಷ್ಟೊಂದು ಸುಲಭವಾಗಿ ಒದಗಿ ಬಂತೆಂಬ ಧನ್ಯತಾ ಭಾವ ಮನದಲ್ಲಿ ತುಂಬಿತು. ಮಳೆಗಾಲವಾಗಿದ್ದರೆ, ಆ ಮಲೆನಾಡ ಚೆಲುವನ್ನು ಇನ್ನೂ ಹೆಚ್ಚಾಗಿ ಸವಿಯ ಬಹುದಿತ್ತೆಂಬ ನಷ್ಟಭಾವದ ಜೊತೆಗೇ, ಆ ಭಾಗ್ಯಕ್ಕಾಗಿ ಇನ್ನೆಂದು ಮರಳಿ ಕುಪ್ಪಳಿಗೆ ಪಯಣ ಎಂದು ಚಾತಕ ಪಕ್ಷಿಯಂತೆ ಕಾಯದಿರುವೆವೇ, ನಾವು

ವರದಿ / ಚಿತ್ರ : ಶ್ಯಾಮಲಾ ಮಾಧವ

Comments are closed.