ಕರಾವಳಿ

ರಾಜಕೀಯ ಷಡ್ಯಂತ್ರದಿಂದ ನಿಷ್ಠಾವಂತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ರಾಜೀನಾಮೆ : ಗುರುಪುರ ಸ್ವಾಮೀಜಿ ಆರೋಪ

Pinterest LinkedIn Tumblr

vajadehi_press_meet_2

ಮಂಗಳೂರು, ಜೂ. 7: ಮಾನಸಿಕ ಒತ್ತಡ ಹಾಗೂ ಕಿರುಕುಳದಿಂದ ಬೇಸತ್ತು ಇತ್ತೀಚಿಗೆ ತಮ್ಮ ಪದವಿಗೆ ರಾಜಿನಾಮೆ ನೀಡಿದ ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿ ಕೂಡಲಗಿ ಡಿವೈಎಸ್‌ಪಿ ಅನುಪಮಾ ಶೆಣೈಯವರ ರಾಜೀನಾಮೆಯನ್ನು ಗೃಹ ಸಚಿವಾಲಯ ಸ್ವೀಕರಿಸದೆ ಅವರನ್ನು ಮತ್ತೆ ಸೇವೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಯೂತ್ ಚೇಂಬರ್ ಮಂಗಳೂರು ಹಾಗೂ ರಾಜಕೇಸರಿ ಯೂತ್ ಕ್ಲಬ್ ಗಂಜಿಮಠ ವತಿಯಿಂದ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿ ಕೂಡಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರಿಗೆ ಸಚಿವ ಪರಮೇಶ್ವರ ನಾಯ್ಕ್ ಅವರ ಇಶಾರೆಯ ಮೇರೆಗೆ ಇಲಾಖೆಯಲ್ಲಿ ನಾನಾ ರೀತಿಯಲ್ಲಿ ಮಾನಸಿಕ ಕಿರುಕುಳ ಕೊಟ್ಟು ಅವರು ರಾಜೀನಾಮೆ ಕೊಡುವಂತೆ ಪ್ರೇರೇಪಿಸಲಾಗಿದೆ ಎಂದು ಆರೋಪಿಸಿದರು.

vajadehi_press_meet_1

ಅಂಬೇಡ್ಕರ್ ಭವನದ ಮುಂಭಾಗದ ರಸ್ತೆ ಪಕ್ಕದ ವೈನ್‌ಶಾಪ್ ಮಾಲಕರು ರಸ್ತೆಯಲ್ಲೇ ಕಟ್ಟಡ ಕಟ್ಟಲು ಮುಂದಾಗಿದ್ದಕ್ಕೆ ಅನುಪಮಾ ಶೆಣೈ ಅವರು ವಿರೋಧಿಸಿದ್ದರು. ಕಟ್ಟಡ ನಿರ್ಮಿಸಿದರೆ ಅಂಬೇಡ್ಕರ್ ಭವನಕ್ಕೆ ರಸ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ. ಹೀಗಾಗಿ ಕಟ್ಟಡ ಕಾಮಗಾರಿ ನಡೆಸದಂತೆ ಆದೇಶಿಸಿದ್ದರು. ಆದೇಶ ಮೀರಿ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಕೆಲವರನ್ನು ಬಂಧಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಇಲಾಖೆಯಲ್ಲೇ ಮಾನಸಿಕ ಕಿರುಕುಳ ಕೊಟ್ಟು ಸೇವೆಯಿಂದ ರಾಜೀನಾಮೆ ಪಡೆಯುವ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು’ ಎಂದು ರಾಜಶೇಖರಾನಂದ ಸ್ವಾಮೀಜಿ ಆರೋಪಿಸಿದರು.

ಅನುಪಮಾ ಶೆಣೈ ಅವರನ್ನು ಪ್ರಾರಂಭದಿಂದಲೂ ಹತ್ತಿಕ್ಕಲು ದುಷ್ಟ ರಾಜಕಾರಣ ವ್ಯವಸ್ಥೆ ಶ್ರಮಿಸುತ್ತಲೇ ಇತ್ತು. ಈ ಅವಕಾಶವನ್ನು ಬಳಸಿಕೊಂಡು ಮಾನಸಿಕ ಒತ್ತಡ ಹಾಗೂ ಕಿರುಕುಳ ಕೊಟ್ಟು ಸೇವೆಯಿಂದ ರಾಜೀನಾಮೆ ನೀಡುವಂತೆ ಪ್ರೇರಪಿಸಲಾಯಿತು. ಭ್ರಷ್ಟ ಇಲಾಖೆ, ರಾಜಕಾರಣಿಗಳ ಇಂಥ ಧೋರಣೆ ಖಂಡನೀಯ ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಪ್ರವೀಣ್ ಗಂಜಿಮಠ , ಶ್ಯಾಮ ಸುದರ್ಶನ ಭಟ್ ಹೊಸಮೂಲೆ, ಕೆ.ಆರ್.ಶೆಟ್ಟಿ ಅಡ್ಯಾರ್‌ ಪದವು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.