ಸುರತ್ಕಲ್, ಜೂ. 7:ದಕ್ಷಿಣ ಕನ್ನಡ ಜಿಲ್ಲೆಯ ತೋಕೂರಿನಿಂದ ಉಡುಪಿಯ ಪಾದೂರಿನವರೆಗೆ ನಡೆಸಲಾಗುವ ಐಎಸ್‌ಪಿಆರ್‌ಎಲ್ ಕಚ್ಛಾತೈಲ ಕೊಳವೆ ಮಾರ್ಗ ಕಾಮಗಾರಿಯಿಂದ ಕೃಷಿ ಕಾರ್ಯಕ್ಕೆ ತೊಂದರೆಯಾಗುತ್ತಿರುವುದರಿಂದ ಮಳೆಗಾಲದಲ್ಲಿ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಕುತ್ತೆತ್ತೂರು ಗ್ರಾಮಸ್ಥರು ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುತ್ತೆತ್ತೂರಿನ ಸಾವಿರಬೆಟ್ಟು, ಕೇಂಞ, ಕುಲ್ಲಾರು, ಕಣಿ, ಜಂತಬೆಟ್ಟು, ಮಿತ್ತೋಡಿ, ಪಯ್ಯಾಲು ಮೂಲಕ ಕೊಳವೆ ಮಾರ್ಗವು ಹಾದುಹೊಗುತ್ತಿದೆ. ಈ ಪ್ರದೇಶವು ಕೃಷಿ ಜಮೀನಾಗಿದೆ. ಇಲ್ಲಿ ಮಳೆನೀರು ಸ್ವಾಭಾವಿಕವಾಗಿ ಹರಿದು ಹೋಗುವ ದೊಡ್ಡ ಮತ್ತು ಸಣ್ಣ ಪುಟ್ಟ ತೋಡುಗಳನ್ನು ಮುಚ್ಚಿ ಹಾನಿಗೊಳಿಸಲಾಗಿದೆ. ಮಳೆಗಾಲದಲ್ಲಿ ಜನರು ನಡೆದಾಡುವ ಕಾಲು ದಾರಿಗಳನ್ನು ನಾಶಪಡಿಸಲಾಗಿದೆ.
ಪಯ್ಯಾಲು, ಮಿತ್ತೋಡಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಜಮೀನನ್ನು ಕೊಳವೆ ಮಾರ್ಗ ಅಳವಡಿಕೆಗಾಗಿ ಸಿಕ್ಕ ಸಿಕ್ಕಲ್ಲಿ ಜಮೀನನ್ನು ಅಗೆದು ಹಾಕಲಾಗಿದೆ. ವಾರದೊಳಗೆ ಮುಂಗಾರು ಮಳೆ ಬರಲಿದ್ದು ತೋಡುಗಳಿಗೆ ಹಾನಿಯಾಗಿರುವುದರಿಂದ ಮಳೆಯ ನೀರು ಸಿಕ್ಕ ಸಿಕ್ಕಲ್ಲಿ ಹರಿದು ಮನೆ, ಅಂಗಳ, ಬಾವಿ, ಗದ್ದೆಗಳಿಗೆ ನೆರೆ ನೀರು ನುಗ್ಗುವ ಸಾಧ್ಯತೆ ಇದೆ.
ಈ ಮೂಲಕ ಐಎಸ್‌ಪಿಆರ್‌ಎಲ್ ಕೃತಕ ನೆರೆಗೆ ಆಸ್ಪದವನ್ನು ನೀಡಿದೆ. ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ಮುಚ್ಚಲಾಗಿರುವ ನೀರು ಹರಿದು ಹೋಗುವ ತೋಡುಗಳನ್ನು ತೆರೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಕಾಲುದಾರಿಗಳನ್ನು ಮತ್ತೆ ಯಥಾಸ್ಥಿತಿಗೆ ತರಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಭಾಗದ ಕೃಷಿ ಜಮೀನಿನಲ್ಲಿ ಕೇವಲ ಅರುವತ್ತು ಅಡಿ ಅಗಲವನ್ನು ಮಾತ್ರ ಉಪಯೋಗದ ಹಕ್ಕಿನಡಿಯಲ್ಲಿ ಸ್ವಾಧೀನಪಡಿಸಲಾಗಿದೆ. ಸ್ವಾಧೀನ ಪಡಿಸಲಾದ ಜಾಗವನ್ನು ಸಮತಟ್ಟು ಮಾಡಿರುವುದರಿಂದ ಅಕ್ಕಪಕ್ಕದ ಕೃಷಿ ಜಮೀನಿನಲ್ಲಿ ಸಾಗುವಳಿ ಮಾಡಲಾಗದ ಪರಿಸ್ಥಿತಿ ಒದಗಿದೆ. ಸಾಗುವಳಿದಾರರು ತೊಂದರೆಗೆ ಒಳಗಾಗಿದ್ದಾರೆ.
ಐಎಸ್‌ಆರ್‌ಪಿಎಲ್ ಸಂಸ್ಥೆಯ ಕಾಮಗಾರಿಯಿಂದ ಕೃತಕ ನೆರೆ ಬಂದು ರೈತರಿಗೆ ತೊಂದರೆಯಾದಲ್ಲಿ, ಕೃಷಿ ಕಾರ್ಯ ಮಾಡಲು ಅಸಾಧ್ಯವಾದಲ್ಲಿ ಅದಕ್ಕೆ ನೇರವಾಗಿ ಐಎಸ್‌ಆರ್‌ಪಿಎಲ್ ಸಂಸ್ಥೆಯೇ ಹೊಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಕುತ್ತೆತ್ತೂರು ಗ್ರಾಮಸ್ಥರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಪೈಪ್‌ಲೈನ್‌ಗೆ ವಿರೋಧ : ಪ್ರತಿಭಟನೆ
ಜಿಲ್ಲಾಧಿಕಾರಿ ಮತ್ತು ಪಂಚಾಯತ್‌ಗೆ ಮನವಿ ಮಾಡಿದ ಹೊರತಾಗಿಯೂ ಮಳೆ ನೀರಿನ ಸ್ವಾಭಾವಿಕ ತೋಡು, ಕಾಲುದಾರಿಗಳಿಗೆ ಹಾನಿ ಮಾಡಿ ಸಾರ್ವಜನಿಕರಿಗೆ, ರೈತರಿಗೆ ತೊಂದರೆ ಮಾಡಿ ಐಎಸ್‌ಪಿಆರ್‌ಎಲ್ ಕೊಳವೆ ಮಾರ್ಗ ಕಾಮಗಾರಿ ನಡೆಸುವುದನ್ನು ವಿರೋಧಿಸಿ ಕುತ್ತೆತ್ತೂರಿನ ನಾಗರಿಕರು ಜಂತಬೆಟ್ಟು ಧೂಮಾವತಿ ದೈವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.
ಸರಕಾರಿ ಅಧಿಕಾರಿಗಳು, ಕೆಐಡಿಬಿ ಭೂಸ್ವಾಧೀನಾಧಿಕಾರಿಗಳಿಗೆ ಗ್ರಾಮಸ್ಥರು ಮಾಡಿದ ಮನವಿ ಮತ್ತು ಸಲಹೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕುತ್ತೆತ್ತೂರಿನ ಜಂತಬೆಟ್ಟು ಬಳಿಯಲ್ಲಿ ಮಳೆ ನೀರು ಹರಿಯುವ ದೊಡ್ಡ ತೋಡನ್ನು ಸಂಪೂರ್ಣವಾಗಿ ಮುಚ್ಚಿ ಜಂತಬೆಟ್ಟು ದೈವಸ್ಥಾನದ ಬಂಡಿ ಇಳಿಯುವ ಬಾಕಿಮಾರು ಗದ್ದೆಗೆ ಜೆಸಿಬಿ ಯಂತ್ರವನ್ನು ನುಗ್ಗಿಸಲಾಗಿದೆ. ಇದರಿಂದ ಈ ಬಾರಿಯ ಕೃಷಿ ಕಾರ್ಯಕ್ಕೆ ತೊಂದರೆಯಾಗಿ ಸಾಗುವಳಿ ಮಾಡುವ ಗದ್ದೆಗಳಿಗೆ ನೆರೆ ನೀರು ನುಗ್ಗಿ ಹಾನಿಯಾಗಲಿದೆ.
ಮಳೆಗಾಲದ ನಂತರ ಕೊಳವೆ ಮಾರ್ಗ ಕಾಮಗಾರಿಯನ್ನು ನಡೆಸಬೇಕು. ಇಲ್ಲವಾದರೆ ಮಳೆ ನೀರು ಹರಿಯುವ ತೋಡನ್ನು ಇದ್ದ ಸ್ಥಿತಿಯಲ್ಲಿಯೇ ಕಾಪಾಡಿ ಕಾಮಗಾರಿಯನ್ನು ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಪಂಚಾಯತ್ ಅನುಮತಿ ಇಲ್ಲೆ ಕಾಮಗಾರಿ ನಡೆಸಬಾರದೆಂದು ಪೆರ್ಮುದೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ಆಗ್ರಹಿಸಿದರು.
ಜಂತಬೆಟ್ಟು ಧೂಮಾವತಿ ದೈವದ ಕಾರ್ನಿಕ : ಸ್ತಗಿತಗೊಂಡ ಕಾಮಗಾರಿ
ಕೊಳವೆ ಮಾರ್ಗ ಕಾಮಗಾರಿಯ ಗುತ್ತಿಗೆದಾರರ ದುಡುಕುತದಿಂದ ತೋಡನ್ನು ಸಮತಟ್ಟುಗೊಳಿಸಿ ಬಂಡಿ ಎಳೆಯುವ ಗದ್ದೆಗೆ ನುಗ್ಗಿದ ಜೆಸಿಬಿ ಯಂತ್ರವು ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಅಳವಡಿಸಿದ ಮಕರ ತೋರಣದ ಪ್ರದೇಶವನ್ನು ಹಾದು ಅದರ ಮುಂದಿರುವ ನೂರಾರು ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಸಂಚರಿಸುವ ಕಾಲುದಾರಿಯನ್ನು ನೆಲಸಮಗೊಳಿಸಲು ಮುನ್ನುಗಿದ್ದಾಗ ಏಕಾಏಕಿ ಸ್ಥಗಿತಗೊಂಡ ಘಟನೆ ನಡೆಯಿತು.
ಸುಮಾರು ಒಂದೂವರೆ ಗಂಟೆಗಳ ಕಾಲ ಯಂತ್ರವನ್ನು ದುರಸ್ತಿಗೊಳಿಸಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ಅಂತಿಮವಾಗಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮುಚ್ಚಲಾದ ನೀರು ಹರಿಯುವ ತೋಡಿನ ಮಣ್ಣು ತೆಗೆದು ನೀರು ಹರಿಯಲು ಅವಕಾಶ ಮಾಡಿಕೊಡುತ್ತೇವೆ, ಕಾಲುದಾರಿಗೆ ಯಾವುದೇ ತೊಂದರೆಯಾಗದಂತೆ ಜಾಗೃತೆ ವಹಿಸುತ್ತೇವೆ ಎಂದು ಗುತ್ತಿಗೆದಾರರ ಪ್ರತಿನಿಧಿಗಳು ಮತ್ತು ಪೈಪ್‌ಲೈನ್ ಅಳವಡಿಸುವ ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳು ಭರವಸೆ ನೀಡಿದ ನಂತರ ಜೆಸಿಬಿ ಯಂತ್ರವು ಒಂದೇ ಪ್ರಯತ್ನದಲ್ಲಿ ಇದ್ದಕ್ಕಿದ್ದಂತೆ ಚಾಲನೆಯಾದ ಘಟನೆಯೂ ನಡೆಯಿತು.
ವರದಿ ಕೃಪೆ : ಸಂವಾ.

Comments are closed.