
ಮಂಗಳೂರು , ಜೂ.7: ಪಾಂಡೇಶ್ವರ ಸಮೀಪದ ದೇವಸ್ಥಾನವೊಂದರಿಂದ ಬರುತ್ತಿದ್ದ ವ್ಯಕ್ತಿಯೋರ್ವರನ್ನು ಆರು ಮಂದಿ ಅಪರಿಚಿತರ ತಂಡವೊಂದು ಅಲ್ಲೆ ಸಮೀಪದ ಗೂಡ್ಶೆಡ್ಡೆ ರಸ್ತೆಯ ರೈಲ್ವೇ ಟ್ರ್ಯಾಕ್ ಬಳಿ ಕರೆದೊಯ್ದು ಹಲ್ಲೆ ನಡೆಸಿ ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ಕಾವೂರಿನ ಸ್ಟುಡಿಯೋವೊಂದರ ಛಾಯಾಚಿತ್ರಗ್ರಾಹಕ, ಉಪ್ಪಿನಂಗಡಿ ನಿವಾಸಿ ಗುಣಪ್ರಸಾದ್ (24) ಎಂಬವರು ದೇವಸ್ಥಾನವೊಂದಕ್ಕೆ ಹೋಗಿ ವಾಪಸ್ ಸ್ಟೇಟ್ಬ್ಯಾಂಕ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಮೂರು ಮಂದಿಯ ತಂಡವೊಂದು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದರು.
ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಮತ್ತೆ ಮೂವರ ಸಹಿತ ಒಟ್ಟು 6ಮಂದಿ ಬಲವಂತವಾಗಿ ಅವರನ್ನು ಗೂಡ್ಶೆಡ್ಡೆ ರಸ್ತೆಯ ರೈಲ್ವೇ ಟ್ರ್ಯಾಕ್ ಬಳಿ ಕರೆದೊಯ್ದಿದ್ದಾರೆ. ಈ ಪೈಕಿ ಮೂವರು ಗುಣಪ್ರಸಾದ್ರನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಮತ್ತೆ ಮೂವರು ಹಲ್ಲೆ ನಡೆಸಿದ್ದಾರೆ. ಬಳಿಕ ಗುಣಪ್ರಸಾದ್ ಕೈಯ್ಯಲಿದ್ದ ಕ್ಯಾಮರಾ, ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ 48 ಸಾವಿರ ರೂ. ವೌಲ್ಯದ ಚಿನ್ನದ ಸರ, ಅಲ್ಲದೇ 1,500 ರೂ. ನಗದು ಮತ್ತು ಡೆಬಿಟ್,ಎಟಿಎಂ ಕಾರ್ಡ್, ಮೊಬೈಲ್ ಮತ್ತಿತರ ವಸ್ತುಗಳನ್ನು ಬಲವಂತವಾಗಿ ಕಸಿದು ಪರಾರಿಯಾಗಿದೆ ಎಂದು ಗುಣ ಪ್ರಸಾದ್ ನಗರ ದಕ್ಷಿಣ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.