ಕರಾವಳಿ

ಪಾಕಿಸ್ಥಾನ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆ : ಪಾಕಿಸ್ತಾನದ 10 ಯೋಧರ ತಲೆ ಚೆಂಡಾಡುವುದಾಗಿ ಹೇಳಿಕೊಂಡಿದ್ದ ಮೋದಿ ಇದೀಗ ಮೌನ :ಶೋಭಾ ಓಝಾ ಆರೋಪ

Pinterest LinkedIn Tumblr

congrs_ shoba_ozzi_1

ಮಂಗಳೂರು, ಮೇ 27: ಯುಪಿಎ ಸರಕಾರ ಜಾರಿಗೆ ತಂದಿದ್ದ ಅತ್ಯುತ್ತಮ ಸಾಮಾಜಿಕ ಬದ್ಧತೆಯ ಯೋಜನೆಯಾದ ಎಂ ನರೇಗಾದ ಹಣವನ್ನು ಕಡಿತಗೊಳಿಸುವ ಮೂಲಕ ಗ್ರಾಮಾಂತರ ಪ್ರದೇಶಗಳ ಜನರ ಉದ್ಯೋಗ ಭರವಸೆಯನ್ನು ಕಸಿಯಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್‌ಟಿ) ಮಸೂದೆಯನ್ನು ಅನುಷ್ಠಾನಕ್ಕೆ ತರುವುದು ಆರ್‌ಎಸ್‌ಎಸ್‌ಗೆ ಬೇಡವಾಗಿದ್ದರಿಂದ ಕಾಂಗ್ರೆಸ್ ಮೇಲೆ ವ್ಯರ್ಥ ಆರೋಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಶೋಭಾ ಓಝಾ ಆರೋಪಿಸಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರವಿದ್ದಾಗ ಗಡಿಯಲ್ಲಿ ಭಾರತೀಯ ಯೋಧರ ವೀರಮರಣದ ಸಂದರ್ಭ ಭಾವನಾತ್ಮಕವಾಗಿ ಹೇಳಿಕೆ ನೀಡುತ್ತಿದ್ದ ನರೇಂದ್ರ ಮೋದಿಯವರು, ಒಬ್ಬ ಯೋಧನ ತಲೆಗೆ ಪಾಕಿಸ್ತಾನದ 10 ಯೋಧರ ತಲೆಯನ್ನು ಚೆಂಡಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಗಡಿಯಲ್ಲಿ ನಡೆಯುತ್ತಿರುವ ಯೋಧರ ಹತ್ಯೆ, ಸಾವಿನ ಬಗ್ಗೆ ವೌನವಾಗಿದ್ದಾರೆ. ನೇಪಾಳದ ಜತೆ ಭಾರತದ ಸಂಬಂಧ ಉತ್ತಮವಾಗಿತ್ತು. ಇದೀಗ ಮೋದಿ ಸರಕಾರ ಬಂದ ಬಳಿಕ ಅಲ್ಲಿಯೂ ಹುಳಿ ಹಿಂಡಲಾಗಿದೆ ಎಂದು ಶೋಭಾ ಓಝಾ ಆರೋಪಿಸಿದರು.

congrs_ shoba_ozzi_2 congrs_ shoba_ozzi_3 congrs_ shoba_ozzi_4 congrs_ shoba_ozzi_5 congrs_ shoba_ozzi_6

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ಅಚ್ಛೇದಿನ್ ಭರವಸೆ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಪೊಳ್ಳು ಭರವಸೆಯಾಗಿಯೇ ಉಳಿದುಬಿಟ್ಟಿದೆ ಎಂದು ಟೀಕಿಸಿದ ಅವರು, ಅಬ್ಬರದ ಪ್ರಚಾರ ಹಾಗೂ ವಿದೇಶ ಯಾತ್ರೆಗಳಿಗೆ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಚುನಾವಣಾ ಪೂರ್ವ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆಪಾದಿಸಿದರು.

2 ವರ್ಷಗಳಲ್ಲಿ 100 ದಿನಗಳ ಕಾಲ ವಿದೇಶ ಪ್ರಯಾಣದಲ್ಲೇ ಕಳೆದ ನರೇಂದ್ರ ಮೋದಿ ತಮ್ಮ ವಿದೇಶ ಯಾತ್ರೆಗಾಗಿ 567 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆ. ಎರಡು ವರ್ಷಗಳಲ್ಲಿ ಮಹಿಳಾ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಬಿಜೆಪಿ ಪಕ್ಷದಲ್ಲಿರುವ ರಾಜಸ್ತಾನದ ಮಂತ್ರಿಯೊಬ್ಬರ ವಿರುದ್ಧ ಅತ್ಯಾಚಾರದ ಆರೋಪವಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ, ಆತ ಮಂತ್ರಿಯಾಗಿಯೇ ಮುಂದುವರಿದ್ದಾನೆ. ಇದು ಬಿಜೆಪಿ ಮಹಿಳೆಯರಿಗೆ ನೀಡುವ ಗೌರವ ಎಂದು ಮೋದಿ ಸರಕಾರವನ್ನು ಶೋಭಾ ಓಝಾ ಟೀಕಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.