*ಯೋಗೀಶ್ ಕುಂಭಾಸಿ
ಉಡುಪಿ: ಯಾರ್ಯಾರ ಬದುಕಿನಲ್ಲಿ ಏನೇನು ಘಟಿಸಬಹುದೋ ಹೇಗಿದ್ದವರು ಹೇಗೇಗೋ ಆಗಿಹೋಗಬಹುದೆಂಬುವುದಕ್ಕೆ ಲಕ್ನೋದ ಐನುಲ್ಲಾ ಎಂಬ ಯುವಕನೇ ಸಾಕ್ಷಿ. ಅತೀಯಾಗಿ ಪ್ರೀತಿಸುತ್ತಿದ್ದ ತನ್ನ ಸಹೋದರಿಯರಿಬ್ಬರು ತೀರಿಕೊಂಡಿದ್ದೇ ಈ ಯುವಕನ ಬದುಕು ಮೂರಾಬಟ್ಟೆಯಾಗಲು ಕಾರಣವಾಯ್ತು.


ಮನೆ ಬಿಟ್ಟು ಊರೂರು ಅಲೆದ..
ಸಹೋದರರ ಸಾವಿನ ನೋವು ಈತನನ್ನು ಮನೆ ಬಿಟ್ಟು ಹೊರಹೋಗುವಂತೆ ಮಾಡಿತ್ತು. ಪ್ರೀತಿಯ ಹೆಂಡತಿ ಮುದ್ದಾದ 2 ವರ್ಷದ ಮಗನನ್ನು ತೊರೆದು ತನ್ನೂರು ಬಿಟ್ಟು ತಿರುಗಾಡುತ್ತಾ ಕುಂದಾಪುರದ ಉಳ್ತೂರಿನ ಸೇತುವೆಯೊಂದರ ತಳದಲ್ಲಿ ಟಿಕಾಣಿ ಹೂಡಿದ ಈತನಿಗೆ ಅದೇಷ್ಟೋ ದಿನಗಳ ಕಾಲ ತಿನ್ನಲು ಅನ್ನವಿಲ್ಲ ಕುಡಿಯಲು ನೀರಿಲ್ಲ. ನೆರೆದ ಕೂದಲು ಸ್ನಾನವಿಲ್ಲದೆ ಜಟೆಯಾಯಿತು, ಗಡ್ಡ ಮೊಳ ಉದ್ದ ಬೆಳೆಯಿತು.
ಊರು ಬಿಟ್ಟವನ ಪರ ನಿಂತ ಪ್ರತಾಪ..
ಈತನ ಪರಿಸ್ಥಿತಿ ಕಂಡು ಮರಗಿದವರು ಕಮ್ಮಿಯೇ. ಎಲ್ಲರೂ ಈತನನ್ನು ದೂರವಿಟ್ಟರೇ ಉಳ್ತೂರಿನ ಯುವಕ ಪ್ರತಾಪ ಮಾತ್ರ ಕನಿಕರದಿಂದ ಮರುಗುತ್ತಿದ್ದ. ಊಟ ತಿಂಡಿ ನೀಡಲು ಹವಣಿಸುತ್ತಿದ್ದ. ಆದರೆ ಐನುಲ್ಲಾ ಮಾತ್ರ ಈತನ ಕೈಗೆ ಸಿಗದೇ ಓಡಿ ಹೋಗುತ್ತಿದ್ದ. ಆದರೇ ಐನುಲ್ಲಾನಿಗೆ ಒಂದು ಆಶ್ರಯ ಕೊಡಿಸಿಯೇ ಸಿದ್ದ ಎಂದು ಪ್ರತಾಪ ಶಪಥ ಮಾಡಿದ. ಆಗಲೇ ಈತನ ನೆರವಿಗೆ ಬಂದಿದ್ದು ತೆಕ್ಕಟ್ಟೇ ಸಮೀಪದ ಕೆದೂರಿನ ಸ್ಪೂರ್ತಿಧಾಮ.


ಐನುಲ್ಲಾಗೆ ‘ಸ್ಫೂರ್ತಿ’ಯಿಂದ ಪುನರ್ಜನ್ಮ
ಐನುಲ್ಲಾ ಬಗ್ಗೆ ಸ್ಫೂರ್ತಿಧಾಮದ ಕಾರ್ಯನಿರ್ವಾಹಕ ಡಾ|| ಕೇಶವ ಕೋಟೇಶ್ವರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಯುವಕನನ್ನು ಕರೆತಂದು ಕೂದಲು ಕತ್ತರಿಸಿ, ಸ್ನಾನಮಾಡಿಸಿ, ಬಟ್ಟೆ ತೊಡಿಸಿದರು. ಆತನ ಬಗ್ಗೆ ವಿವರವನ್ನು ಸಂಗ್ರಹಿಸಿದರು. ಉತ್ತರಪ್ರದೇಶದ ಲಕ್ನೋ ಮೂಲದವನಾದ ಈತನ ತಂದೆ ಬೀಪತ್ ಅಲಿ, ತಾಯಿ ಜಯ್ಬೂನ್ ಎಂಬೆಲ್ಲಾ ಮಾಹಿತಿ ತಿಳಿಯಿತು. ಸ್ಪೂರ್ತಿಯ ಆತಿಥ್ಯದ ಬಳಿಕ ಯುವಕನಿಗೆ ಪುನರ್ಜನ್ಮ ಬಂದಂತಾಯ್ತು. ಎಲ್ಲೂ ಹೋಗಲ್ಲ ಸ್ಫೂರ್ತಿಧಾಮದಲ್ಲೇ ಉಳಿಯುತ್ತೇನೆ ಎಂದು ಸದ್ಯ ಐನುಲ್ಲಾ ಹಟಹಿಡಿದು ಕುಳಿತ್ತಿದ್ದಾನಂತೆ.
ಹಲವು ತಿಂಗಳುಗಳಿಂದ ಊರು-ಮನೆ ಬಿಟ್ಟ ಐನುಲ್ಲಾನ ವಾರೀಸುದಾರರಿದ್ದರೆ ಕೆದೂರಿನ ಸ್ಫೂರ್ತಿಧಾಮವನ್ನು ಸಂಪರ್ಕಿಸಬಹುದು.
Comments are closed.